ಈ ವರ್ಷ ಸರಳ ಕರಗ – ಫಜ್ಲುಲ್ ಹಸನ್ ಅವರು ಬರೆದಿರುವ ಕರಗ ಇತಿಹಾಸದ ಅಧ್ಯಾಯ ಓದಿ

[ಕೊರೊನ ಸಾಂಕ್ರಾಮಿಕದ ಕಾರಣದಿಂದ ನೂರಾರು ವರ್ಷಗಳ ಇತಿಹಾಸ ಇರುವ ಕರಗ ಉತ್ಸವ ಮೊದಲ ಬಾರಿಗೆ ನಿರ್ಬಂಧಗಳಿಂದ ಅತಿ ಸಣ್ಣ ಮಟ್ಟದಲ್ಲಿ ನಡೆಯಲಿದೆ. ಜನ ಹೆಚ್ಚು ಸೇರಿಸದಂತೆ ನಿರ್ಬಂಧ ಹೇರಿ, ಹೆಸರಿಗೆ ಮಾತ್ರ ಕರಗ ಉತ್ಸವ ನಡೆಸಲು ಆಡಳಿತ ಈ ವರ್ಷ ಅವಕಾಶ ನೀಡಿದೆ. ಈ ಐತಿಹಾಸಿಕ ಕರಗದ ಹುಟ್ಟು ಮತ್ತು ಪರಂಪರೆಯ ಬಗ್ಗೆ ಫಜ್ಲುಲ್ ಹಸನ್ ಅವರು ಬರೆದ ಈ ಲೇಖನ ನಿಮಗಾಗಿ]

ಕುರುಕ್ಷೇತ್ರದಲ್ಲಿ ಪಾಂಡವರು ಮತ್ತು ಕೌರವರು 18 ದಿನಗಳ ಕಾಲ ಧೀರೋದ್ಧಾತವಾಗಿ ಕಾದಾಡಿದರು. ಬಹಳ ಬಹಳ ಹಿಂದೆ ಅದು. ಆದರೆ ಪ್ರತಿ ವರ್ಷ ಚೇತೋಹಾರಿ ವಸಂತದಲ್ಲಿ ನಡೆಯುವ ಬೆಂಗಳೂರು ಕರಗ ಉತ್ಸವದಲ್ಲಿ ಆ ಕಠೋರ ಕಾದಾಟ ಪ್ರತಿಧ್ವನಿಸುತ್ತದೆ! ಮಾನವಕುಲದ ರಕ್ಷಕನಾದ ದೇವರ ಮೇಲಿನ ನಂಬಿಕೆಯನ್ನು ಉಳಿಸಲು ಈ ಉತ್ಸವಕ್ಕೆ ಸಾಕಷ್ಟು ಪುರಾಣದ ಪುರಾವೆಯ ಬೆಂಬಲ ಇದೆ.

ಯಾವುದೇ ಉತ್ಸವಕ್ಕೆ ಹಲವು ಧರ್ಮಗಳ, ಜಾತಿಗಳ ಮತ್ತು ಸಮುದಾಯಗಳ ಜನ ಒಟ್ಟಿಗೆ ಬರುವುದು ಸಾಮಾನ್ಯವೇನಲ್ಲ. ರಾಷ್ಟ್ರೀಯ ಉತ್ಸವದಂತೆ ಕಾಣಲಾಗುವ ಬೆಂಗಳೂರು ಕರಗ ಮಾತ್ರ ಎಲ್ಲ ರೀತಿಯಲ್ಲೂ ವಿಶಿಷ್ಟವಾದದ್ದು. ಈ ಉತ್ಸವದ ಜಾತ್ಯಾತೀತ ಲಕ್ಷಣ ಇದರ ದೊಡ್ಡ ಮಟ್ಟದ ಜನಪ್ರಿಯತೆಗೆ ಕಾರಣ. ಬಹಳ ಅದೃಷ್ಟಕರ ಸಮಯದಲ್ಲಿ ಮೈಸೂರಿಗೆ ವಲಸೆ ಬಂದ ಹಿಂದೂ ಸಮುದಾಯದ ಒಂದು ಚಿಕ್ಕ ಕೊಂಬೆಯ ಹಿಡಿಯಷ್ಟು ಸಂಖ್ಯೆಯ ಜನ ಈ ರಾಷ್ಟ್ರೀಯ ಉತ್ಸವವನ್ನು ನಗರಕ್ಕೆ ಪರಿಚಯಿಸಿದ್ದು.

ತನ್ನ ಐತಿಹಾಸಿಕ ಪಯಣದಲ್ಲಿ ಈ ಕರಗ ಉತ್ಸವ ಬಹಳಷ್ಟು ವಿಚಿತ್ರಗಳನ್ನು ಕಂಡಿದೆ. ಕರಗ ಉತ್ಸವಕ್ಕೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನು ಹೆಚ್ಚು ಕಮ್ಮಿ ನಡೆಸಿಕೊಡುವುದು ತಿಗಳ ಸಮುದಾಯಕ್ಕೆ ಸೇರಿದ ಜನರು.

ಹಾಗಾದರೆ ಈ ತಿಗಳರು ಯಾರು? ಅವರು ಬೆಂಗಳೂರಿಗೆ ಬಂದದ್ದು ಯಾವಾಗ? 

‘ತಮಿಳಿಗರು’ ಎಂಬ ಕನ್ನಡ ಪದದ ಕುತೂಹಲಕಾರಿ ಬದಲಾದ ರೂಪ ‘ತಿಗಳರು’ ಪದ. ಈ ವಿವರಾಣಾತ್ಮಕ ಪದ ತಿಗಳರಿಗೆ ಬೇಗ ಹೊಂದಿಕೊಂಡಿತು. ಅಂಗಿರಸನೆಂಬ ಋಷಿಯ ಸಿಂಹಗಳಿಂದ ಜನಿಸಿ ಬಂದ ವನ್ಹಿಕುಲ ಕ್ಷತ್ರಿಯರು ಎಂದು ಕರೆದುಕೊಳ್ಳುವ ತಿಗಳರು ಆ ದಿನಗಳಲ್ಲಿ ಕನ್ಯಾಕುಮಾರಿ ಮತ್ತು ವಿಂಧ್ಯಾ ನಡುವೆ ಇದ್ದ ಪ್ರದೇಶಗಳಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದರು ಎನ್ನಲಾಗುತ್ತದೆ ಮತ್ತು ದಕ್ಷಿಣದ ಪಲ್ಲವ, ಪಾಂಡ್ಯ, ಚೇರ ಮತ್ತು ಚೋಳ ರಾಜರುಗಳ ಪೂರ್ವಜರಾಗುತ್ತಾರೆ. ತಿಗಳರ ಮತ್ತೊಂದು ಬಣ ತಮ್ಮ ಹುಟ್ಟು ಅಗ್ನಿ ಅಥವಾ ವನ್ಹಿಯಿಂದ ಎಂದು ಅನ್ವಯಿಸಿಕೊಳ್ಳುತ್ತಾರೆ. ಪುರಾಣಗಳು ಹೇಳುವಂತೆ ಪಾಂಡವರ ಪತ್ನಿ ದ್ರೌಪದಿ ಅಗ್ನಿಯ ಮಗಳು. ಮತ್ತು ಈ ಮಹಾಕಾವ್ಯ ಮಹಾಭಾರತದ ಕೇಂದ್ರ ಬಿಂದು ದ್ರೌಪದಿ ತಿಗಳರಿಗೆ ಪ್ರಮುಖ ದೇವತೆ. 1951ರ ಜನಗಣತಿಯ ಪ್ರಕಾರ ಮೈಸೂರು ರಾಜ್ಯದಲ್ಲಿ ತಿಗಳರ ಜನಸಂಖ್ಯೆ 106,566. ಅವರುಗಳು ಹೆಚ್ಚು ಬೆಂಗಳೂರಿನ ಸುತ್ತಮುತ್ತ ಚದುರಿಹೋಗಿದ್ದಾರೆ. ಇವರು ಸಾಮಾನ್ಯವಾಗಿ ತೋಟಗಾರಿಕೆ ಮತ್ತು ಹೂವು ವಿನ್ಯಾಸಕಾರರಾಗಿ ಕೆಲಸ ಮಾಡುತ್ತಾರೆ. ತಮಿಳನ್ನು ಮುಕ್ತವಾಗಿ ಮಾತನಾಡಿದರೂ ಕನ್ನಡ ಮಾತನ್ನು ತಮ್ಮ ಒಳಿತಿಗಾಗಿ ಅಳವಡಿಸಿಕೊಂಡಿದ್ದಾರೆ.

ಕ್ರಿಸ್ತಶಕ 11 ನೆ ಶತಮಾನದಲ್ಲಿ ಚೋಳರು ಮೈಸೂರಿನ ಕೆಲವು ಭಾಗಗಳನ್ನು ವಶಪಡಿಸಿಕೊಂಡು ಅದನ್ನು ವಿಕ್ರಮಚೋಳ ಮಂಡಲಂ ಎಂದು ಕರೆದು ಆ ಭಾಗಗಳನ್ನು ಸ್ವಲ್ಪ ಸಮಯ ಆಳುತ್ತಿದ್ದರು. ಚೋಳ ಸಾಮ್ರಾಜ್ಯದ ಸಂಪಧ್ಬರಿತ ದಿನಗಳಲ್ಲಿ ತಮಿಳರು ಈಗ ಮೈಸೂರು ಎಂದು ಕರೆಯುವ ಭಾಗಕ್ಕೆ ಬಂದು ನೆಲೆಸಲು ಪ್ರಯತ್ನ ಪಟ್ಟ ಯಾವುದೇ ಧನಾತ್ಮಕ ಅಥವಾ ಋಣಾತ್ಮಕ ಐತಿಹಾಸಿಕ ಸಾಕ್ಷ್ಯಗಳು ಇಲ್ಲ. 18 ನೆ ಶತಮಾನದ ಎರಡನೆ ಭಾಗದವರೆಗೂ ಅವರು ಮೈಸೂರಿಗೆ ವಲಸೆ ಬಂದಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ.

ನವಾಬ್ ಹೈದರ್ ಅಲಿ ಖಾನ್ ಬಹುತೇಕ ತಮಿಳುನಾಡಿನಲ್ಲಿ ನಡೆಸಿದ ಮೊದಲ ಎರಡು ಮೈಸೂರು ಯುದ್ಧಗಳ ಸೇನಾ ಕಾರ್ಯಾಚರಣೆಯಲ್ಲಿ ಕೆಲವು ತಮಿಳು ರೈತರಿಗೆ ತೋಟಗಾರಿಕೆಯಲ್ಲಿ ಇದ್ದ ತೀವ್ರ ಆಸಕ್ತಿಯನ್ನು ಗಮನಿಸಿದ. ಕೈತೋಟಕ್ಕೆ ಸಸಿಗಳನ್ನು ಬೆಳೆಸುವ ನರ್ಸರಿ ಕೆಲಸದ ಬಗ್ಗೆ ಅವರಿಗಿದ್ದ ಕ್ಷಮತೆಯನ್ನು ಕಂಡು ಮೋಹಗೊಂಡು, ಆಕರ್ಷಕ ಸಂಬಳ ಮತ್ತು ಯೋಗ್ಯ ಜೀವನದ ಸೌಲಭ್ಯಗಳನ್ನೂ ಕಲ್ಪಿಸಿಕೊಡುವುದಾಗಿ ಹೇಳಿ ಅವರಲ್ಲಿ ಕೆಲವರನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದ. ಈ ಅವಕಾಶಕ್ಕೆ ತಮಿಳರು ಖುಷಿಯಿಂದ ಸ್ಪಂದಿಸಿದರು. ಸಾವಿರಾರು ತಮಿಳರು ತಮ್ಮ ಕುಟುಂಬಗಳೊಂದಿಗೆ ಮೈಸೂರು ಗಡಿಗಳನ್ನು ದಾಟಿ ತಿಗಳರಾದರು. ಎಂಟು ಶತಮಾನಗಳ ಹಿಂದೆ ವಿಕ್ರಮಚೋಳ ಮಂಡಲಂ ಸ್ಥಾಪನೆಯಾದಾಗ ತಮಿಳರಿಗೆ ಇದ್ದ ಅಪರಿಚಿತ ಪರಿಸ್ಥಿತಿಗೆ ಹೋಲಿಸಿದರೆ 18 ನೆ ಶತಮಾನದ ಎರಡನೆ ಭಾಗದಲ್ಲಿ ಈ ಹೊಸಬರು ಮೈಸೂರಿಗೆ ವಲಸೆ ಬಂದಾಗ ಆಹ್ಲಾದಕರ ಆರ್ಥಿಕ ಮತ್ತು ರಾಜಕೀಯ ಸಂಗತಿಗಳು ಅವರನ್ನು ಸ್ವಾಗತಿಸಿದವು. ಬದುಕು ನಡೆಸಲು ಸನ್ನಿವೇಶಗಳು ಉಲ್ಲಾಸಕಾರಿಯಾಗಿದ್ದ ಅಂಶ ಸ್ವಾಭಾವಿಕವಾಗಿ ಅವರು ಕಂಡುಕೊಂಡ ಹೊಸ ನೆಲದ ಜೊತೆಗೆ ಆತ್ಮೀಯ ಸಂಬಂಧ ಬೆಳೆಸಿಕೊಳ್ಳಲು ಉತ್ತೇಜನ ನೀಡಿದವು. ಹೈದರ್ ಅಲಿ ಮತ್ತು ಅವನ ಪುತ್ರ ಟಿಪ್ಪು ಸುಲ್ತಾನ್ ಅವರಿಗಿದ್ದ ಸೌಂದರ್ಯಾತ್ಮಕ ಗುಣ, ಹೊಸದಾಗಿ ಆಗಮಿಸಿದ್ದವರಿಗೆ ತೋಟಗಾರಿಕೆಯಲ್ಲಿ ಇದ್ದ ಒಲವು, ಅವರು ಈಗ ಕೆಲಸ ಮಾಡುತ್ತಲಿದ್ದ ನೆಲದ ಫಲವತ್ತ ಮಣ್ಣು ಮತ್ತು ಎಲ್ಲದಕ್ಕೂ ಮಿಗಿಲಾಗಿ ಬೆಂಗಳೂರಿನ ಆಹ್ಲಾದಕಾರಿ ಹವಾಮಾನ ಇವೆಲ್ಲವೂ ಸಮಾಜದಲ್ಲಿ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಲು ಒಟ್ಟಾದವು. ರಾಜಾಶ್ರಯದಲ್ಲಿ ಈ ವಲಸಿಗರು ತೋಟಗಾರಿಕೆ ಪ್ರಾರಂಭಿಸಿದರು. ಆಗಲೇ ಬೆಂಗಳೂರಿನಲ್ಲಿ ಲಾಲ್ ಭಾಗ್, ಶ್ರೀರಂಗಪಟ್ಟಣದಲ್ಲಿ ಉಲ್ಲಾಸಭರಿತ ದರಿಯಾ ದೌಲತ್ ಭಾಗ ಮತ್ತು ರಾಜರ ಅರಮನೆಗಳ ಸುತ್ತ ಹಲವು ಸುಂದರ ಉದ್ಯಾನವಗಳು ತಲೆಯೆತ್ತಿದ್ದು.

ಮಹಾಬಲಿಪುರಂನಲ್ಲಿ ಒಬ್ಬೊಬ್ಬ ಪಾಂಡವರಿಗೂ ಅರ್ಪಿಸಲಾಗಿರುವ ವೈಭವಯುತ ಏಕಶಿಲೆಯ ರಥಗಳು ಮತ್ತು ಅರ್ಜುನನ ಶಾಪವನ್ನು ಚಿತ್ರಿಸುವ ಕಲ್ಲಿನ ಕೆತ್ತನೆ ಮತ್ತು ತಮಿಳು ನಾಡಿನ ಎಲ್ಲೆಡೆ ಕಾಣಸಿಗುವ ಧರ್ಮರಾಯನ ದೇವಸ್ಥಾನಗಳು, ಅವರು ವೈಷ್ಣವ ಅಥವಾ ಶೈವ ಪಂಥಕ್ಕೆ ಸೇರಿದವರಾದರೂ ತಮ್ಮ ಪೂರ್ವಜರ ಪೂಜೆಯಲ್ಲಿ ನಂಬಿಕೆ ಇರುವ ಒಂದು ಜನಾಂಗ ಇರುವುದನ್ನು ಸೂಚಿಸುತ್ತದೆ. ಹಿಂದೆ ದ್ರಾವಿಡರ ಧಾರ್ಮಿಕ ನಂಬಿಕೆಗೆ ಮುಖ್ಯವಾಗಿದ್ದ ಪೂರ್ವಸೂರಿಗಳನ್ನು ಪೂಜಿಸುವ ಅವರ ಈ ಆಚರಣೆ ಹೊಸ ದೈವ ಸಮೂಹವನ್ನು ಹುಟ್ಟುಹಾಕಿತು. ಇದಲ್ಲದೆ ಹೋದರೆ ಪಾಂಡವರನ್ನು ದೈವತ್ವದ ಅರ್ಹತೆಗೆ ಏರಿಸುವುದನ್ನು ಯಾವುದು ವಿವರಿಸುತ್ತದೆ? ಪಾಂಡವರು ವಿಜೃಂಭಿಸಿದರು ಎನ್ನಲಾಗುವ ಉತ್ತರ ಭಾರತದ ಗಂಗಾ ನದಿಯ ಪ್ರದೇಶದಲ್ಲಿಯೇ ಪಾಂಡವರಿಗೆ ಮತ್ತು ಧರ್ಮರಾಯನಿಗೆ ಅರ್ಪಿಸಿರುವ ದೇವಸ್ಥಾನಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ತಮಿಳು ನಾಡಿನಿಂದ ಬಂದ ಈ ಹೊಸಬರು ತಮ್ಮೊಂದಿಗೆ ಅವರ ಸ್ವಂತ ಧಾರ್ಮಿಕ ನಂಬಿಕೆಗಳು ಮತ್ತು ಸಂಬಂಧಿಸಿದ ಆಚರಣೆಗಳನ್ನು ಹೊತ್ತು ತಂದರು. ಆದುದರಿಂದ ಬೆಂಗಳೂರಿನಲ್ಲಿ ಧರ್ಮರಾಯನ ದೇವಸ್ಥಾನಗಳು ಇರುವುದು – ನಾಲ್ಕು ಮಾತ್ರ, ಮತ್ತು ಕರಗ ಉತ್ಸವದ ಆಚರಣೆಗಳನ್ನು ಧಾರ್ಮಿಕವಾಗಿ ಆಚರಿಸುವ ಆ ದೇವಾಲಯಗಳ ಪೂಜಾರಿಗಳೆಲ್ಲಾ ಅಬ್ರಾಹ್ಮಣರು ಆಗಿರುವುದು ಅಚ್ಚರಿಯೇನಲ್ಲ. ದ್ರೌಪದಿ ಅಗ್ನಿಯಿಂದ ಹುಟ್ಟಿದವಳು ಎಂಬ ಅವರ ಉತ್ಕಟ ನಂಬಿಕೆಗೆ ತಕ್ಕಂತೆ ಕರಗ ಉತ್ಸವದ ಆಚರಣೆಗಳ ಭಾಗವಾಗಿ ಕೊಂಡ ಹಾಯುವುದು ತಿಗಳರಿಗೆ ಅಗ್ನಿ ದೇವತೆಯಲ್ಲಿರುವ ನಂಬಿಕೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಉತ್ಸವದ ಉದ್ದಕ್ಕೂ ಅಲ್ಲಲ್ಲಿ ಈ ಕೊಂಡ ಹಾಯುವ ದೃಶ್ಯಗಳು ಸರ್ವೇ ಸಾಮಾನ್ಯ. ಅವರ ನಂಬಿಕೆ ಎಷ್ಟು ತೀವ್ರವಾಗಿದೆ ಅಂದರೆ ಕೊಂಡ ಹಾಯುವವರ ಪಾದ ಬೆಂಕಿ ಮತ್ತು ಕೆಂಡದ ಉರಿಗೆ ಸುಡುವುದೇ ಇಲ್ಲ.

ಈಗ ಪಾಳುಬಿದ್ದಿರುವ ಕೆಂಪೇಗೌಡ ಕೋಟೆಯ ಹಲಸೂರು ದ್ವಾರದ ಬಳಿ ಧರ್ಮರಾಯನ ದೊಡ್ಡ ದೇವಸ್ಥಾನ ಇದೆ. ಇದನ್ನು ದ್ರಾವಿಡ ಶೈಲಿಯ ವಿನ್ಯಾಸದಲ್ಲಿ ಕಟ್ಟಲಾಗಿದೆ. ಕಲೆ ಮತ್ತು ಸೌಂದರ್ಯದ ಭವ್ಯ ಕೆತ್ತನೆ ಈ ವಿನ್ಯಾಸ ಶೈಲಿಯ ಲಕ್ಷಣಗಳು. ದೇವಾಲಯ ಗೋಪುರದ ವಿಮಾನದ ವಿನ್ಯಾಸದಲ್ಲಿ ಇರುವ ಅಸಂಗತತೆ, ಅದರ ಕಲ್ಲುಗಳಲ್ಲಿ ಆಡಂಬರವಿಲ್ಲದೆ ಕೆತ್ತನೆ ಮತ್ತು ಗೋಪುರದ ವಿನ್ಯಾಸ ಮತ್ತು ಕೆತ್ತನೆಯಲ್ಲಿ ಕಾಣಸಿಗದೆ ರಮ್ಯತೆಯ ಕಲ್ಪನೆ, ಇದು 19 ನೆ ಶತಮಾನದ  ಮೊದಲ ಭಾಗದಲ್ಲಿ ದ್ರಾವಿಡ ವಿನ್ಯಾಸ ಮತ್ತು ಶೈಲಿ ಕುಂದುತ್ತಿದ್ದ ಸಮಯದಲ್ಲಿ ಕಟ್ಟಿದ ದೇವಸ್ಥಾನ ಎಂದು ತಿಳಿಯುತ್ತದೆ.

 

ಕರಗ ಉತ್ಸವದ ಪ್ರಾಮುಖ್ಯತೆ ಎಂದರೆ ಇದು ಎಷ್ಟು ಚಿತ್ತಾಕರ್ಷಕವೋ ಅಷ್ಟೇ ನೆಮ್ಮದಿ ಮತ್ತು ಸಂತೋಷವನ್ನು ಉಂಟು ಮಾಡುವ ಹಬ್ಬ. ಮಹಾಭಾರತದ ಮೂಲದಿಂದ ಹುಟ್ಟುವ ಇದರ ಆಚರಣೆಗಳು ಕುರುಕ್ಷೇತ್ರ ಯುದ್ಧದ ಒಂದು ದುಃಖದ ಸಂಗತಿಯನ್ನೂ ನೆನಪಿಸುತ್ತದೆ. ಕುರುಕ್ಷೇತ್ರ ಯುದ್ಧಕ್ಕೂ ಮುಂಚಿತವಾಗಿ ಅಥವಾ ವೈಶಂಪಾಯನ ದಂಡೆಯಲ್ಲಿ ಯುದ್ಧದ ಗದ್ದಲ ಅಡಗಿಹೋದಮೇಲೂ ದ್ರೌಪದಿ ಹಲವು ಅವಮಾನಗಳಿಗೆ ಮತ್ತು ತಾತ್ಸಾರಕ್ಕೆ ಗುರಿಯಾಗಿದ್ದಳು. ವಸ್ತ್ರಾಪಹರಣದ ಸಮಯದಲ್ಲಿ ರಾಜಾಸ್ಥಾನದಲ್ಲಿಯೇ ಆದ ಅಗ್ನಿಪರೀಕ್ಷೆ, ಪಾಂಡವರ ವನವಾಸದ ಸಮಯದಲ್ಲಿ ಆಕೆ ಅನುಭವಿಸಿದ ಕಷ್ಟಗಳು, ಪಾಂಡವರ ಅಜ್ಞಾತವಾಸದ ಸಮಯದಲ್ಲಿ ಕೀಚಕನನ್ನು ಎದುರಿಸಿದ್ದು ಮತ್ತು ಅಶ್ವತ್ಥಾಮ ಹಾಗು ಸಂಗಡಿಗರಿಂದ ತನ್ನ ಮಕ್ಕಳು ಹತರಾಗಿದ್ದನ್ನು ಸಹಿಸಿಕೊಂಡಿದ್ದು ಯುದ್ಧದ ನಂತರ ಆಕೆಯನ್ನು ಆದರ್ಶ ಮಹಿಳೆಯ ಅವತಾರವನ್ನಾಗಿ ಕಾಣಲಾಯಿತು. ಅವಷ್ಟೇ ಅಲ್ಲ. ಕುರುಕ್ಷೇತ್ರದ ಮಹತ್ತರ ಘಟನೆಗಳ ಉದ್ದಕ್ಕೂ ದ್ರೌಪದಿ ಶಕ್ತಿ ಬಲವಾಗಿ ಪ್ರವೇಶ ಪಡೆಯುತ್ತದೆ. ಈ ಶಕ್ತಿಯ ಸುತ್ತಲೇ ಕುರುಕ್ಷೇತ ಯುದ್ಧ ಅನಾವರಣಗೊಳ್ಳುತ್ತದೆ. ಕರಗ ಉತ್ಸವದ ಸಮಯದಲ್ಲಿ ಈ ದ್ರೌಪದಿ ಶಕ್ತಿ ಬಲಶಾಲಿಯಾಗಿ ಮತ್ತು ಮಹೋನ್ನತವಾಗಿ ರೂಪುಗೊಳ್ಳುತದೆ. ನರ ಹುರಿಗೊಳ್ಳುವಂತೆ ‘ಧಿಕ್-ಧಿ’ ಮತ್ತು ‘ಗೋವಿಂದ’ ಎನ್ನುವ ಸಮೂಹ ಘೋಷ ಮುಗಿಲು ಮುಟ್ಟುವಾಗ, ಆ ಪರಿಸರದಲ್ಲಿ ಉಂಟಾಗುವ ಸ್ಪೂರ್ತಿದಾಯಕ ತೀವ್ರ ಸಂಚಲನ ಬೇರೆ ಯಾವುದೇ ಹಿಂದೂ ಧಾರ್ಮಿಕ ಆಚರಣೆಯಲ್ಲಿ ಕಾಣಸಿಗುವುದು ಕಷ್ಟ. ಆದರೆ ಕರಗ ಉತ್ಸವದ ಮುಖ್ಯಾಂಶ ಇರುವುದು ತಿಗಳ ಸಮುದಾಯದ ಸುಮಾರು 200 ರಿಂದ 250 ಯುವಕರು ಕತ್ತಿ ಝಳಪಿಸುವ ಆಟದಲ್ಲಿ. ಸರ್ ಮಾರ್ಕ್ ಕಬ್ಬನ್ ಈ ಕತ್ತಿ ಆಟವನ್ನು ಅಪಾಯಕಾರಿ ಅಲ್ಲ ಅಂದು ಒಮ್ಮೆ ಹೇಳಿದ್ದರು ಮತ್ತು ಅದಕ್ಕೆ ಯಾವುದೇ ಪರವಾನಗಿ ಬೇಕಾಗಿಲ್ಲ.

ಪುರಾಣದ ಆ ಘಟನೆಗಳ ಸ್ಮೃತಿ ಹೇಗೆ ಭಾರತೀಯ ಸಂಪ್ರದಾಯಕ್ಕೆ ಹೆಣೆದುಕೊಂಡಿದೆ ಅಂದರೆ ಹಲವು ಆಚರಣೆಗಳು ಈಗ ಬೃಹತ್ತಾಗಿ ಬೆಳೆದಿವೆ. ಉತ್ಸವದ ಪ್ರಾರಂಭದಲ್ಲಿ ಮಾಡುವ ಪವಿತ್ರ ಧ್ವಜಾರೋಹಣ, ತೇರಿಗೆ ಮುಖಂಡನಾಗಿ ಆಯ್ಕೆಯಾಗಿರುವ ವ್ಯಕ್ತಿಗೆ ತೊಡಿಸುವ ಭಾರದ ಹೂವಿನ ಕಿರೀಟ, ಮತ್ತು ಆತ ನಡೆಸಿಕೊಡುವ ವಿಧಿಗಳ ವಿವಿಧ ಪಟ್ಟುಗಳ ಪ್ರದರ್ಶನ ಕುರುಕ್ಷೇತ್ರ ಯುದ್ಧದ ಹಲವು ಘಟನೆಗಳನ್ನು ಜೀವಂತವಾಗಿಸುತ್ತವೆ.

ಆದರೆ ಕುರುಕ್ಷೇತ್ರ ಧರ್ಮಕ್ಷೇತ್ರವಾಗಿತ್ತು! ಈ ಉತ್ಸವದ ಪುರಾಣ ಸಂಬಂಧಕ್ಕೆ ತನ್ನದೇ ಆದ ಉದ್ದೇಶ ಇದೆ. ಸದಾಚಾರ ಮತ್ತು ಒಳ್ಳೆಯ ಮಾರ್ಗ ಕೆಡುಕನ್ನು ಕೊನೆಗೆ ಗೆಲ್ಲುತ್ತದೆ ಮತ್ತು ಮಾನವನ ಪರಿಶ್ರಮ ಎಷ್ಟೇ ಮಹತ್ವದ್ದಾಗಿರಲಿ ಮತ್ತು ಕೌಶಲ್ಯಪೂರ್ಣವಾಗಿರಲಿ ಅದು ವಿಧಿನಿಯಮದ ಫಲಗಳನ್ನು ಮೀರುವುದಿಲ್ಲ ಎಂಬ ಸತ್ಯವನ್ನು ಬಹಳ ಸೂಕ್ಷ್ಮವಾಗಿ ಈ ನೆಲಕ್ಕೆ ತಂದುಕೊಳ್ಳುತ್ತದೆ.

ಅತಿ ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮವನ್ನು ಆಕರ್ಷಿಸುವ ಕರಗದ ಕೀರ್ತಿ ಹಲವರನ್ನು ಆಶ್ಚರ್ಯಚಕಿತಗೊಳಿಸಿದೆ. ಹಳೆ ಬೆಂಗಳೂರಿನ ಆ ಕಿರಿದಾದ ರಸ್ತೆಗಳಲ್ಲಿ ಪಾದ ಪಾದಗಳಿಗೆ ಸಿಕ್ಕುವ ಕಿಕ್ಕಿರಿದ ಜನಸ್ತೋಮದಲ್ಲಿ ನಡೆಯಲು ಕಷ್ಟ ಪಡುವ ಗಂಡಸು ಹೆಂಗಸರ ದೃಶ್ಯ, ರಾತ್ರಿ ಕಳೆಯುವವರೆಗೂ ಹೊಡೆಯಲಾಗುವ ಘಂಟೆಯ ರಿಂಗಣಿಸುವ ನಾದ, ಜಾತ್ರೆಯ ಮುಖ್ಯ ತೇರು, ಅದರ ಬಣ್ಣ ಬಣ್ಣದ ಪ್ರದರ್ಶನ, ತಿಂಗಳ ಬೆಳಕಿನಿಂದ ನೆನೆದ ರಾತ್ರಿಯಲ್ಲಿ ಎತ್ತರದ ಕಟ್ಟಡಗಳನ್ನು ತೆವಳಿ ಹೋಗುವ – ಚಿತ್ರ ಪೂರ್ಣಿಮದಲ್ಲಿ ನಡೆಸುವ ಕರಗ ಉತ್ಸವ – ವೈಭವದ ಕಣ್ಕಟ್ಟಿನ ದೃಶ್ಯದಂತೆ ಅನಾವರಣಗೊಳ್ಳುತ್ತದೆ.

ಇಂದಿಗೂ ನಡೆದುಕೊಂಡು ಬಂದಿರುವ, 18 ನೆ ಶತಮಾನದಲ್ಲಿ ಬದುಕಿದ್ದ ಮುಸ್ಲಿಂ ಸಂತ ಹಜರತ್ ತೌಕ್ಕಲ್ ಮಸ್ತಾನ್ ಅವರ ದರ್ಗಾ-ಎ-ಷರೀಫ್ ಬಳಿ ಫತೆಹ್ ಅಥವಾ ಪ್ರಾರ್ಥನೆಗೆ ನಿಲ್ಲುವ ಕರಗ ತೇರಿನ ಸುಂದರ ಸಮಾವೇಶ, ಅಂತರ ಧರ್ಮಗಳ ಭ್ರಾತೃತ್ವ ಅಂದಿನಿಂದಲೂ ಇದ್ದುದ್ದರ ಸ್ಪಷ್ಟ ಪುರಾವೆಯಾಗಿ ಮತ್ತು ವೈವಿಧ್ಯತೆಗಳ ನೆಲದ ಏಕತೆಯ ದೃಶ್ಯವಾಗಿ ಕಾಣುತ್ತದೆ.

ಬೆಂಗಳೂರಿನ ಕರಗ ಉತ್ಸವದಲ್ಲಿ ಇರುವ ಸೊಗಸನ್ನು ಪದಗಳಲ್ಲಿ ಹಿಡಿದುವುದಂತೂ ಕಷ್ಟ.

 

  • ಎಂ ಪಜ್ಲುಲ್ ಹಸನ್

1970ರಲ್ಲಿ ಪ್ರಕಟವಾದ ‘ಬ್ಯಾಂಗಲೋರ್ ಥ್ರೂ ಸೆಂಚ್ಯುರಿಸ್’ ಎಂಬ ಪುಸ್ತಕದ ಅಧ್ಯಾಯದಿಂದ ಈ ಲೇಖನ ಆಯ್ದುಕೊಳ್ಳಲಾಗಿದೆ.

(ಕನ್ನಡಕ್ಕೆ): ಗುರುಪ್ರಸಾದ್ ಡಿ ಎನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights