FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಹತ್ಯೆ ಮಾಡಲಾಗಿದೆಯೇ?

ಬಾಂಗ್ಲಾದೇಶದ ಮದರಿಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇತಾಡುತ್ತಿರುವುದನ್ನು ಕಾಣಬಹುದು.

ಡಿಸೆಂಬರ್ 28, 2024 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದೆ. ಮದಾರಿಪುರ, ಬಾಂಗ್ಲಾದೇಶ, ಹಿಂದೂ ಗಂಡಸಿನ ದೇಹ ಮರದಲ್ಲಿ ನೇತಾಡುವ ರೀತಿಯಲ್ಲಿ ಸಿಕ್ಕಿದೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಡಿಸೆಂಬರ್ 28, 2024 ರಂದು ಫೇಸ್‌ಬುಕ್ ಖಾತೆಯೊಂದರಲ್ಲಿ ವಿಡಿಯೋ ಲಭ್ಯವಾಗಿದೆ. ವಿಡಿಯೋ ಪೋಸ್ಟ್‌ನ ವಿವರಣೆಯಲ್ಲಿ, ‘‘ಮೃತ ವ್ಯಕ್ತಿಯ ಹೆಸರು ಮಿಜಾನ್ ಸರ್ದಾರ್ (50). ಇವರು ಮದರಿಪುರ ಸದರ್ ಮೇಲ್ಜಾಲದ ಜೌಡಿ ಯೂನಿಯನ್‌ನ ಬನಿಕ್ಪಾರಾ ಗ್ರಾಮದ ಮೃತ ಅಬು ಅಲಿ ಸರ್ದಾರ್ ಅವರ ಪುತ್ರ’’ ಎಂದು ಬರೆಯಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಬಳಸಿ ಗೂಗಲ್​ನಲ್ಲಿ ಸರ್ಚ್ ಮಾಡಿದ್ದು, ಈ ಸಂದರ್ಭದಲ್ಲಿ  29 ಡಿಸೆಂಬರ್‌ 2024ರಂದು ” ಸರಪಳಿಯಿಂದ ಭಿಗಿದಿರುವ ರೈತನ ಮೃತದೇಹ ಪತ್ತೆಯಾಗಿದೆ” ಎಂಬ ಶೀರ್ಷಿಕೆಯೊಂದಿಗೆ  ಜಗೋ ನ್ಯೂಸ್‌ 24 ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ‘‘ಮದರಿಪುರ ಸದಾರ್ ಠಾಣಾ ಪೊಲೀಸರು ಮದರಿಪುರ ಸದರ್ ಮೇಲ್ದಂಡೆ ಘಟಮಜಿ ಯೂನಿಯನ್‌ನ ಪೂರ್ವ ಚಿರಾಯಪಾರ ಗ್ರಾಮದ ಮಾವಿನ ತೋಟದಲ್ಲಿ ಮರಕ್ಕೆ ನೇಣು ಬಿಗಿದ ಮಿಜಾನ್ ಸರ್ದಾರ್ (50) ಎಂಬ ರೈತನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ಮಿಜಾನ್ ಸರ್ದಾರ್ (50) ಸದರ್ ಮೇಲ್ದಂಡೆಯ ಜೌಡಿ ಯೂನಿಯನ್‌ನ ಬನಿಕ್ಪಾರಾ ಗ್ರಾಮದ ಮೃತ ಅಬು ಅಲಿ ಸರ್ದಾರ್ ಅವರ ಪುತ್ರ. ಶುಕ್ರವಾರ ರಾತ್ರಿ ಮಿಜಾನ್ ಸರ್ದಾರ್ ಅವರ ಮನೆಯಿಂದ ವಾಜ್ ಮಹಫಿಲ್ ಗಾಗಿ ತುಬಿಯಾ ಬಜಾರ್ ಬಳಿಯ ಸೊಲೈಮಾನ್ ಮತ್ತೂಬ್ಬರ ಮನೆಗೆ ತೆರಳಿದ್ದರು ಎಂದು ಸಂಬಂಧಿಕರು ಮತ್ತು ಸ್ಥಳೀಯರು ತಿಳಿಸಿದ್ದಾರೆ.

ವಾಜ್ ಮುಗಿಸಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಬೆಳಗ್ಗೆ 11:00 ಗಂಟೆಗೆ ಅಲಂಗೀರ ಮತ್ತೂಬ್ಬರ ಮೀನಿನ ಆವರಣದಿಂದ ಮಗು ಹಾದು ಹೋಗುತ್ತಿದ್ದಾಗ ಮಾವಿನ ಮರಕ್ಕೆ ಸರಪಳಿಯಲ್ಲಿ ಕಟ್ಟಿದ ಶವವನ್ನು ನೋಡಿ ಕಿರುಚಾಡಿದ್ದಾನೆ. ಬಳಿಕ ಸುತ್ತಮುತ್ತಲಿನವರು ಮದರಿಪುರ ಸದರ್ ಪೊಲೀಸ್ ಠಾಣೆಗೆ ಧಾವಿಸಿದರು. ನಂತರ ಪೊಲೀಸರು ಬಂದು ಮೃತದೇಹವನ್ನು ಮರದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಮದರಿಪುರ ಸದರ್ ಆಸ್ಪತ್ರೆಗೆ ಕೊಂಡೊಯ್ದರು’’ ಎಂಬ ಮಾಹಿತಿ ಇದರಲ್ಲಿದೆ.

ಹಾಗೆಯೆ ಡಿಸೆಂಬರ್ 28, 2024 ರಂದು, ‘‘ಮಿಜಾನ್ ಸರ್ದಾರ್ ಎಂಬ ರೈತನ ಶವವು ಮದರಿಪುರದಲ್ಲಿ ಸರಪಳಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೊಟಿಂಡರ್ ಕ್ರೈಮ್‌ನಲ್ಲಿ ವರದಿಯಾದ ಘಟನೆಯನ್ನು ನಾವು ಕಂಡುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಯನ್ನು ನೀವು ಇಲ್ಲಿ, ಇಲ್ಲಿ ಓದಬಹುದು. ಎಲ್ಲದರಲ್ಲೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಹೆಸರು ಮಿಜಾನ್ ಸರ್ದಾರ್ ಎಂದೇ ಇದೆ.

ಹೀಗಾಗಿ ಮೇಲಿನ ಸಾಕ್ಷ್ಯದಿಂದ ನೇಣು ಬಿಗಿದ ಶವದ ವೀಡಿಯೊ ಮುಸ್ಲಿಂ ವ್ಯಕ್ತಿಯದ್ದು ಎಂಬುದು ಖಚಿತವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕೊಂದು, ಆತನ ಮೃತದೇಹವನ್ನು ಮರಕ್ಕೆ ನೇಣು ಹಾಕಲಾಗಿದೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಂಬಂಧವಿಲ್ಲ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡ ಬಲಪಂಥೀಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights