FACT CHECK | ಭಾರತದ ಬಾಹ್ಯಾಕಾಶ ತ್ಯಾಜ್ಯ ಕೀನ್ಯಾದ ಗ್ರಾಮವೊಂದರಲ್ಲಿ ಬಿದ್ದಿರುವುದು ನಿಜವೇ?

30 ಡಿಸೆಂಬರ್ 2024 ರಂದು ಭಾರತದ ಬಾಹ್ಯಾಕಾಶ ತ್ಯಾಜ್ಯ ಕೀನ್ಯಾದ ಮಕ್ವೇನಿ ಕೌಂಟಿಯ ಕುಕು ಗ್ರಾಮದಲ್ಲಿ ಬಿದ್ದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಈ ಬಾಹ್ಯಾಕಾಶದ ಅವಶೇಷಗಳಿಗೆ ಪರಿಹಾರವಾಗಿ ಕೀನ್ಯಾವು ಭಾರತದಿಂದ 100 ಬಿಲಿಯನ್ ಯುಎಸ್ ಡಾಲರ್‌ ಹಣಕ್ಕೆ ಬೇಡಿಕೆ ಇಟ್ಟಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ವೈರಲ್ ಫೋಟೋ ಮತ್ತು ಪೋಸ್ಟ್‌ಗಳನ್ನು ನೋಡಿದ ಹಲವರು  ಹೀಗೆ ಬಾಹ್ಯಾಕಾಶದ ಅವಶೇಷಗಳು ಬಿದ್ದರೆ ಅದಕ್ಕೆ ಪರಿಹಾರವನ್ನು ಭಾರತ ಕೊಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಮತ್ತು AIನಿಂದ ನಿರ್ಮಿಸಿದ ಫೋಟೋ ಎಂದು ಬರೆದುಕೊಂಡಿದ್ದಾರೆ.  ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ನಿಜವೇ? ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಜನವರಿ 1 ಮತ್ತು 2ರ ನಡುವೆ ಪ್ರಕಟವಾದ ನ್ಯೂಯಾರ್ಕ್‌ ಟೈಮ್ಸ್, ಸಿಎನ್‌ಎನ್‌ ಮತ್ತು ಫಾಕ್ಸ್ ವೆದರ್‌ನ ವರದಿಗಳು ಲಭ್ಯವಾಗಿವೆ.

ಈ ವರದಿಗಳು 8 ಅಡಿ ವ್ಯಾಸದ ಮತ್ತು1,100 ಪೌಂಡ್ ಗಳಿಗಿಂತ ಹೆಚ್ಚು ತೂಕವಿರುವ ಹೊಳೆಯುವ ಲೋಹದ ವೃತ್ತಾಕಾರದ ಬೃಹತ್ ವಸ್ತು ಒಂದು ಕೀನ್ಯಾದಲ್ಲಿ ಬಿದ್ದಿದೆ ಎಂದು ವರದಿ ಮಾಡಿರುವುದು ಕಂಡು ಬಂದಿದೆ. ಇದೇ ವರದಿಯಲ್ಲಿ ಈ ವಸ್ತು ಅಪ್ಪಳಿಸಿದ ನಂತರದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ, ಆದರೆ ಸ್ಥಳೀಯರು ಇದನ್ನು ನೋಡಿ ಭಯಭೀತರಾಗಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಆದರೆ ಈ ವರದಿಯಲ್ಲಿ ಎಲ್ಲಿಯೂ ಭಾರತದ ಬಗ್ಗೆ ಮತ್ತು ಇಸ್ರೋ ಕುರಿತು ಉಲ್ಲೇಖವಿರುವುದು ಕಂಡು ಬಂದಿಲ್ಲ.

ಇನ್ನು ಕೀನ್ಯಾದ ಬಾಹ್ಯಾಕಾಶ ಸಂಸ್ಥೆ ಜನವರಿ 3 ರಂದು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಲೋಹದ ವಸ್ತುವಿನ ಮೂಲದ ಬಗ್ಗೆ ತನಿಖೆಗಳು ಇನ್ನೂ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ ಈ ವಸ್ತುವು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಅಥವಾ ಇನ್ನಿತರ ಯಾವುದೇ ಬಾಹ್ಯಾಕಾಶ ಸಂಸ್ಥೆಗಳಿಗೆ ಸಂಬಂಧಿಸಿದ ಕುರಿತು ನಾವು ಯಾವುದೇ ಅಧಿಕೃತ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ಗಳನ್ನು ನಂಬಬೇಡಿ ಎಂದು ಸ್ಪಷ್ಟ ಪಡಿಸಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೀನ್ಯಾದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಸಂಬಂಧ ಪಟ್ಟ ಬಾಹ್ಯಾಕಾಶ ತ್ಯಾಜ್ಯ ವಸ್ತುಗಳು ಬಿದ್ದಿವೆ ಮತ್ತು ಅದಕ್ಕಾಗಿ ಕೀನ್ಯಾವು ಭಾರತದ ಬಳಿ 100 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಕೇಳಿದೆ ಎಂಬುದು ಸುಳ್ಳಾಗಿದೆ. ಇದು ಸುಳ್ಳು ಸುದ್ದಿ ಎಂದು ಸ್ವತಃ ಕೀನ್ಯಾದ ಬಾಹ್ಯಾಕಾಶ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಹತ್ಯೆ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights