ಉತ್ತರಪ್ರದೇಶ: ಒಪ್ಪತ್ತಿನ ಊಟಕ್ಕೆ ಪತ್ನಿಯ ಮಾಂಗಲ್ಯ ಮಾರಿದ ವಲಸೆ ಕಾರ್ಮಿಕನ ಕಥೆ

ಕೊರೊನ ಲಾಕ್‌ಡೌನ್‌ ಎಲ್ಲರಿಗೂ ಒಂದೇ ರೀತಿಯ ಸಮಸ್ಯೆಯನ್ನು ಉಂಟು ಮಾಡಿಲ್ಲ. ಬಡ ಮತ್ತು ಮಧ್ಯಮ ವರ್ಗದ ಜನ ಮತ್ತು ಕೂಲಿ ಕಾರ್ಮಿಕರಿಗೆ ಇದು ಅಪಾರ ಸಮಸ್ಯೆಗಳನ್ನು ನೋವುಗಳನ್ನು ಉಂಟು ಮಾಡಿದೆ. ಉತ್ತರಪ್ರದೇಶದ ಈ ಬಡ ಕೂಲಿಕಾರ್ಮಿಕರ ಕುಟುಂಟ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಈ ಕಾರ್ಮಿಕನ ಇಡೀ ಕುಟುಂಬ ತಮಿಳುನಾಡಿನಲ್ಲಿ ಒಬ್ಬ ಜಮೀನುದಾರರ ಕೃಷಿ ಜಮೀನಿನಲಿ ಕೂಲಿಯಾಗಿ ಕೆಲಸ ಮಾಡುತ್ತಿತ್ತು. ಕಳೆದ ತಿಂಗಳು ಆತ ಕೊರೊನ ಲಾಕ್‌ಡೌನ್‌ ಕಾರಣದಿಂದಾಗಿ ಊರಿಗೆ ಮರಳುವಂತೆ ಭೂ ಮಾಲೀಕ ಒತ್ತಾಯಿಸಿದ್ಧಾನೆ. ಹೇಗೋ ಕಷ್ಟ ಪಟ್ಟು ಪರಿಣಾಮ ಕುಟುಂಬ ಸಮೇತರಾಗಿ ಉತ್ತರಪ್ರದೇಶಕ್ಕೆ ಮರಳಿದ್ದ ಈ ಕುಟುಂಬ ಒಪ್ಪತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಕುಟುಂಬದ ಯಜಮಾನ ಕನೌಜಿನ ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನ ಹೆಂಡತಿ ಮತ್ತು ತಾಯಿಯ ಮಾಂಗಲ್ಯವನ್ನು ಕೇವಲ 1,500 ರೂ ಗೆ ಮಾರಾಟ ಮಾಡಿ ಮನೆಗೆ ಆಹಾರ ಧಾನ್ಯ ಮತ್ತು ಔಷಧಿಯನ್ನು ಖರೀದಿಸಿದ್ದಾನೆ.

ಲಖನೌದಿಂದ 150 ಕಿ.ಮೀ ದೂರದಲ್ಲಿರುವ ಕನೌಜಿನ ಫತೇಪುರ್ ಜಶೋಧ ಎಂಬ ಗ್ರಾಮದ ಶ್ರೀ ರಾಮ್ ಮೂರು ದಶಕಗಳ ಹಿಂದೆ ಮದುವೆಯ ನಂತರ ತಮಿಳುನಾಡಿಗೆ ವಲಸೆ ಹೋಗಿದ್ದರು. ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಕುಲ್ಪೀ ಐಸ್ ಮಾರಾಟ ಮಾಡಿ ಬದುಕುತ್ತಿದ್ದರು.

ಹೆಂಡತಿ ಹಾಗೂ ಒಂಬತ್ತು ಮಕ್ಕಳ ಜೊತೆಗೆ ಇದೇ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿದ್ದರು. ಆದರೆ, ಮೇ ಮೂರನೇ ವಾರದಲ್ಲಿ ಭೂ ಮಾಲೀಕರು ಮನೆ ಖಾಲಿ ಮಾಡಿ ಉತ್ತರಪ್ರದೇಶಕ್ಕೆ ತೆರಳುವಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಇಡೀ ಕುಟುಂಬ ಮೇ 19 ರಂದು ರೈಲು ಪ್ರಯಾಣ ಆರಂಭಿಸಿ ಎರಡು ದಿನಗಳ ನಂತರ ಯುಪಿಯಲ್ಲಿರುವ ತಮ್ಮ ಗ್ರಾಮಕ್ಕೆ ತಲುಪಿದೆ.

ಈಗ ಊರಿಗೆ ಮರಳಿರುವ ಅವರ ಕುಟುಂಬದ ಬಳಿ ಪಡಿತರ ಚೀಟಿಯೂ ಇಲ್ಲ, ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಕೆಲಸ ಮಾಡಲು ಜಾಬ್ ಕಾರ್ಡ್ ಸಹ ಇರಲಿಲ್ಲ. ಹೀಗಾಗಿ ಈ ಕುಟುಂಬ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆತ ಆಹಾರಕ್ಕಾಗಿ ತನ್ನ ತಾಯಿ ಮತ್ತು ಹೆಂಡತಿಯ ಮಾಂಗಲ್ಯವನ್ನು ಮಾರಾಟ ಮಾಡಿದ್ದಾನೆ.

ತನ್ನ ಅಸಹಾಯಕತೆಯ ಕುರಿತು ಆತ ಸ್ಥಳೀಯ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದ, “ನಾವು ತಮಿಳುನಾಡಿನಿಂದ ಹಿಂದಿರುಗಿದಾಗ ಸರ್ಕಾರದಿಂದ ತಲಾ 10 ಕೆಜಿ ಅಕ್ಕಿ ಮತ್ತು ಧಾನ್ಯವನ್ನು ಪಡೆದುಕೊಂಡಿದ್ದೇವೆ. ಆದರೆ ನಮ್ಮದು ದೊಡ್ಡ ಕುಟುಂಬ. ಈ ಧಾನ್ಯ ನಮಗೆ ಸಾಕಾಗಿರಲಿಲ್ಲ. ಅಲ್ಲದೆ, ಪಡಿತರ ಚೀಟಿಯೂ ಇಲ್ಲದ ಕಾರಣ ನಾವು ಪಡಿತರ ವ್ಯವಸ್ಥೆಯಿಂದಲೇ ಹೊರಗುಳಿದಿದ್ದೇವೆ.

ಈ ನಡುವೆ ನನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರು ಅನಾರೋಗ್ಯಕ್ಕೆ ಒಳಗಾದರು. ನನ್ನ ತಂದೆ ಕೆಲಸ ಪಡೆಯಲು ಪ್ರಯತ್ನಿಸಿದರು, ಎಲ್ಲೂ ಉದ್ಯೋಗವಿಲ್ಲ. ಅಂತಿಮವಾಗಿ, ನನ್ನ ತಾಯಿ ಮತ್ತು ಹೆಂಡತಿ ಧರಿಸುತ್ತಿದ್ದ ಆಭರಣಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ಈ ಹಣ ಸಹ ಕೆಲವು ದಿನಗಳ ಆಹಾರ ಮತ್ತು ಔಷಧಕ್ಕೆ ಮಾತ್ರ ಸಾಲುತ್ತದೆ. ಹೊಸ ಪಡಿತರ ಚೀಟಿಗೆ ನಾವು ಮನವಿ ಸಲ್ಲಿಸಿದರೆ, ಈಗ ಪಡಿತರ ಚೀಟಿ ನೀಡಲಾಗುವುದಿಲ್ಲ ಎನ್ನುತ್ತಾರೆ” ಎಂದು ಶ್ರೀರಾಮ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಮೇಲೆ ಜಿಲ್ಲಾಡಳಿತ ಈ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ಉದ್ಯೋಗ ಖಾತ್ರಿ ಜಾಬ್‌ ಕಾರ್ಡ್‌ ಅನ್ನು ನೀಡಿದೆ. ಆದರೆ, ಇದು ಕೇವಲ ಶ್ರೀರಾಮ್‌ ಒಬ್ಬರ ಕಥೆಯಲ್ಲ. ಬದಲಾಗಿ ಭಾರತದಾದ್ಯಂತ ಇಂತಹ ಲಕ್ಷಾಂತರ ವಲಸೆ ಕಾರ್ಮಿಕರು ಲಾಕ್‌ಡೌನ್ ನಿಂದಾಗಿ ಒಪ್ಪತ್ತು ಊಟಕ್ಕಾಗಿ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights