ಎಂ ಎಫ್ ಹುಸೇನ್ ಬಿಡಿಸಿದ್ದ ರಾಜೀವ್ ಗಾಂಧಿ ಚಿತ್ರ ಕೊಂಡ ವಿವಾದ: ಯೆಸ್ ಬ್ಯಾಂಕ್ ರಾಣಾ ಕಪೂರ್ ವಿಚಾರಣೆ

ಯೆಸ್ ಬ್ಯಾಂಕ್ ಹಣ ದುರುಪಯೋಗ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಈಗ ವಿಚಾರಣೆ ಎದುರಿಸುತ್ತಿರುವ ಬ್ಯಾಂಕಿನ ಸಹಸಂಸ್ಥಾಪಕ ರಾಣಾ ಕಪೂರ್, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ಅವರಿಂದ 2010ರಲ್ಲಿ ಸುಮಾರು 2ಕೋಟಿ ರೂಗೆ ಕೊಂಡ, ಚಿತ್ರಕಾರ ಎಮ್ ಎಫ್ ಹುಸೇನ್ ಬಿಡಿಸಿದ್ದ ಭಾವಚಿತ್ರದ ಬಗ್ಗೆ ಈಗ ಇಡಿ ತನಿಖೆ ನಡೆಸಿದೆ.

ಎಮ್ ಎಫ್ ಹುಸೇನ್ 1985ರಲ್ಲಿ ಕಾಂಗ್ರೆಸ್ ಪಕ್ಷದ ಸುವರ್ಣಹಬ್ಬದ ಸಂಭ್ರಮದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾವಚಿತ್ರವನ್ನು ಬಿಡಿಸಿದ್ದರು. ವಿಚಾರಣೆ ವೇಳೆಯಲ್ಲಿ “ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಈ ಭಾವಚಿತ್ರವನ್ನು ಕೊಂಡುಕೊಳ್ಳುವಂತೆ ಬೆದರಿಕೆ ಹಾಕಿದ್ದರು” ಎಂದು ಕಪೂರ್ ಹೇಳಿದ್ದಾರಂತೆ.

“ಈ ಹೇಳಿಕೆಗೆ ಕಪೂರ್ ಮತ್ತು ಡಿಯೋರಾ ನಡುವೆ ನಡೆದಿರುವ ಸಂದೇಶ ರವಾನೆಯ ಸಾಕ್ಷ್ಯ ಇದೆ” ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗಷ್ಟೆ ಯೆಸ್ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಂಡು, ಆರ್ ಬಿ ಐ ಮಧ್ಯಪ್ರವೇಶಿಸಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಈ ಬಿಕ್ಕಟ್ಟಿಗೆ ಸಾವವಿರಾರು ಕೂಟಿ ರೂ ಹಣ ದುರುಪಯೋಗವಾಗಿರಬಹುದು ಎಂಬ ಶಂಕೆಯಿಂದ ಯೆಸ್ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ನನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಇಡಿ ಅಧಿಕಾರಿಗಳು ಹೇಳುವಂತೆ ಆ ಭಾವಚಿತ್ರ ಕಾಂಗ್ರೆಸ್ ಪಕ್ಷದ ಸ್ವತ್ತಾಗಿದ್ದರೂ, ಇದನ್ನು ಪ್ರಿಯಾಂಕಾ ಗಾಂಧಿ ಮಾರಿದ್ದಾರೆ ಎಂದಿದೆ.

ಇದರ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಸರಣಿ ಟ್ವೀಟ್ ಮಾಡಿದ್ದು, “10 ವರ್ಷಗಳ ಹಿಂದೆ ಎಮ್ ಎಫ್ ಹುಸೇನ್ ಅವರ ರಾಜಿವ್ ಭಾವಚಿತ್ರವನ್ನು ಪ್ರಿಯಾಂಕ ಅವರು ಯೆಸ್ ಬ್ಯಾಂಕ್ ಮಾಲೀಕ ರಾಣ ಕಪೂರ್ ಅವರಿಗೆ ಮಾರಿ, ತಮ್ಮ ತೆರಿಗೆ ರಿಟರ್ನ್ಸ್ ನಲ್ಲಿ ಘೋಷಿಸಿಕೊಂಡಿರುವುದು, ಯಾವುದೇ ಮೂಂದಾಲೋಚನೆ ಇಲ್ಲದೆ ಬ್ಯಾಂಕ್ ಸಾಲಗಳನ್ನು ನೀಡಿರುವುದಕ್ಕೆ ಹೇಗೆ ಸಂಬಂಧಿಸಿದೆ? 2,00,000 ಕೋಟಿ ಮೋದಿ ಸರ್ಕಾರದ ಐದು ವರ್ಷಗಳ ಆಡಳಿತದಲ್ಲಿ? ಅದೂ ಅಲ್ಲದೆ ಅವರು (ಕಪೂರ್) ಬಿಜೆಪಿ ಮುಖಂಡರಿಗೆ ನಿಕಟವಾಗಿರುವುದು ತಿಳಿದೇ ಇದೆ” ಎಂದು ಬರೆದಿದ್ದಾರೆ.

ಈ ಭಾವಚಿತ್ರ ಕಾಂಗ್ರೆಸ್ ಸ್ವತ್ತಾಗಿದ್ದುದರ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಮತ್ತು ಕಾಂಗ್ರೆಸ್ ತನ್ನ ಆಸ್ತಿಯ ಭಾಗವಾಗಿ ಎಂದಿಗೂ ಇದನ್ನು ಘೋಷಿಸಿಕೊಂಡಿಲ್ಲ. ರಾಣಾ ಅವರನ್ನು ಈ ಭಾವಚಿತ್ರ ಕೊಳ್ಳಲು ಯಾವುದೇ ಕಾಂಗ್ರೆಸ್ ಮುಖಂಡರು ಒತ್ತಡ ಹೇರಿಲ್ಲ ಅಲ್ಲದೆ ಎಂ ಎಫ್ ಹುಸೇನ್ ಅವರ ಭಾವಚಿತ್ರಕ್ಕೆ ಕಲಾ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಇದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights