ಕರ್ನಾಟಕದ ಗಡಿ ನಿರ್ಬಂಧದಿಂದ 8 ಜನ ಬಲಿಯಾಗಿದ್ದಾರೆ: ಸುಪ್ರೀಂಗೆ ಕೇರಳ ಅಫಿಡೇವಿಡ್‌

ಲಾಕ್ ಡೌನ್ ಘೋಷಣೆಯಾದಾಗಿನಿಂದ ಕೇರಳದ ಗಡಿಭಾಗಳನ್ನ ಬಂದ್ ಮಾಡಿರುವ ಕರ್ನಾಟಕದ ಕ್ರಮವನ್ನು ಕೇರಳ ಸರ್ಕಾರ ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಸುಪ್ರೀಂ ಕೋರ್ಟ್​ಗೆ ಕೇರಳ ಮನವಿ ಮಾಡಿಕೊಂಡಿದೆ.

ಕೊರೋನಾ ಬಿಕ್ಕಟ್ಟಿನ ವೇಳೆಯೂ ಕರ್ನಾಟಕ ಗಡಿಭಾಗವನ್ನು ಮುಚ್ಚಿದೆ. ಕೇರಳಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನ ಮುಚ್ಚಿದೆ. ಇದರ ಪರಿಣಾಮವಾಗಿ ಕೇರಳದ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿರುವ ಕೇರಳ ಸರ್ಕಾರ, ಗಡಿಭಾಗವನ್ನು ತೆರೆಯಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕೆಂದು ಕೇಳಿದೆ.

ಇದಕ್ಕೂ ಮುನ್ನ ಕೇರಳ ಹೈಕೋರ್ಟ್ ಕರ್ನಾಟಕ ತನ್ನ ರಸ್ತೆ ತಡೆ ಕ್ರಮ ಹಿಂಪಡೆಯಬೇಕೆಂದು ಆದೇಶ ನೀಡಿತ್ತು. ಆದರೂ ಕರ್ನಾಟಕ ತನ್ನ ನಿಲುವು ಸಡಿಲಿಸಿಲ್ಲ. ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.

ಲಾಕ್ ಡೌನ್ ಘೋಷಣೆ ಆದ ಕೂಡಲೇ ಕರ್ನಾಟಕ ಸರ್ಕಾರ ಕೇರಳದ ಗಡಿಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಕೇರಳಕ್ಕೆ ಸಂಪರ್ಕಿಸುವ ಎಲ್ಲಾ 23 ರಸ್ತೆಗಳನ್ನೂ ಮುಚ್ಚಿದೆ. ಇಲ್ಲಿ ಆಂಬುಲೆನ್ಸ್ ಹಾಗೂ ಇತರೆ ಅಗತ್ಯ ವಸ್ತುಗಳನ್ನ ಸಾಗಿಸುವ ವಾಹನ ಸೇರಿದಂತೆ ಯಾವುದೇ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರು ಹೆಚ್ಚಿರುವ ಕಾರಣಕ್ಕೆ ಕರ್ನಾಟಕಕ್ಕೆ ಸೋಂಕು ಹರಡಬಾರದೆಂದು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತಲೇ ಇರುವುದು ಸರ್ಕಾರಕ್ಕೆ ತಲೆನೋವಾಗಿದೆ. ಅದರ ಜೊತೆಗೆ ಕೇರಳದಿಂದ ಇನ್ನಷ್ಟು ಸೋಂಕಿತರು ಸೇರಿಕೊಂಡು ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಭಯ ಸರ್ಕಾರಕ್ಕಿದೆ ಎಂದು ಮೂಲಗಳು ಹೇಳುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights