3 ಪಕ್ಷಗಳ ರಾಜಕೀಯಕ್ಕೆ ಬಲಿಯಾದ್ರಾ ಉಪಸಭಾಪತಿ; ಧರ್ಮೇಗೌಡರ ಆತ್ಮಹತ್ಯಾ ಪತ್ರದಲ್ಲಿ ಏನಿದೆ?
ವಿಧಾನ ಪರಿಷತ್‌ನ ಉಪಸಭಾಪತಿಯಾಗಿದ್ದ ಧರ್ಮೇಗೌಡ ಅವರು ಇಂದು (ಮಂಗಳವಾರ) ಮುಂಜಾನೆ ತಮ್ಮ ಬದುಕನ್ನು ಅಂತ್ಯಗೊಳಿಸಿ, ಇಹಲೋಕ ತ್ಯಜಿಸಿದ್ದಾರೆ.
ಕಳೆದ ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟುಗೂಡಿ, ಸಭಾಪತಿಗಳ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸುವ ಉದ್ದೇಶದಿಂದ ಧರ್ಮೇಗೌಡ ಅವರನ್ನು ಸಭಾಪತಿ ಕುರ್ಚಿಯಲ್ಲಿ ಕೂರಿಸಿದ್ದರು. ಬಿಜೆಪಿ-ಜೆಡಿಎಸ್ ಸದಸ್ಯರ ನಡೆಯಿಂದ ಆವೇಶಗೊಂಡ ಕಾಂಗ್ರೆಸ್ ಸದಸ್ಯರು ಧರ್ಮೇಗೌಡರನ್ನು ಎಳೆದಾಡಿ, ಕುರ್ಚಿಯಿಂದ ಹೊರಕ್ಕೆಳೆದುಕೊಂಡು ಹೋಗಿದ್ದರು.
ಇದಾದ ಕೆಲವೇ ದಿನಗಳ ನಂತರ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಸಾವಿಗೂ ಮುನ್ನ ಬರೆದ ಪತ್ರ ಈಗ ಚರ್ಚೆಯ ವಿಷಯವಾಗಿದೆ.
ಧರ್ಮೇಗೌಡರು ತಮ್ಮ ಮರಣ ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಅಧಿಕಾರಿಗಳು ಈವರೆಗೂ ಬಾಯಿ ಬಿಟ್ಟಿಲ್ಲವಾದರೂ ಅದರಲ್ಲಿರುವ ಅಂಶಗಳ ಬಗ್ಗೆ ನಾನಾ ವಿಚಾರಗಳು ಹರಿದಾಡುತ್ತಿವೆ.
ವಿಧಾನ ಪರಿಷತ್ತಿನಲ್ಲಿ ಆದ ಕಹಿ ಘಟನೆಯೂ ಸೇರಿದಂತೆ ನಾನಾ ವಿಚಾರಗಳನ್ನು ಧರ್ಮೇಗೌಡರು ತಮ್ಮ ಅಂತಿಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಒಬ್ಬರು ಕೂರಿಸಿದ್ರು-ಮತ್ತೊಬ್ಬರು ಎಳೆದೊಯ್ದರು; ನಾನೇನು ಮಾಡಲಿ: ಉಪಸಭಾಪತಿ ಧರ್ಮೇಗೌಡ
ಈ ಮಧ್ಯೆ ಉಪಸಭಾಪತಿ ಧರ್ಮೇಗೌಡರು ಬರೆದಿರುವ ಪತ್ರದಲ್ಲಿ ಸಾಕಷ್ಟು ರಹಸ್ಯ ವಿಷಯಗಳಿವೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ವಿಚಾರ ಹೇಳಿದ್ದು, ಪತ್ರದಲ್ಲಿ ಕೆಲ ಗೌಪ್ಯ ಮಾಹಿತಿಗಳನ್ನು ಬರೆದಿಟ್ಟಿದ್ದಾರೆ. ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸಿಎಂ ಅವರ ಈ ಮಾತು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಸಾಯುವಂತಹ ತೀರ್ಮಾನಕ್ಕೆ ತಮ್ಮನ್ನು ನೂಕಿದ ಘಟನಾವಳಿಗಳ ಬಗ್ಗೆ ಧರ್ಮೇಗೌಡರು ವಿವರವಾಗಿ ಬರೆದಿದ್ದಾರೆ ಎಮದೂ ವ್ಯಾಖ್ಯಾನಿಸಲಾಗುತ್ತಿದೆ.
ಇದೇ ವೇಳೆ ಧರ್ಮೇಗೌಡ ಅವರು ಬರೆದಿಟ್ಟಿರುವ ಡೆತ್‍ನೋಟಿನಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು, ಇವುಗಳ ಕೂಲಂಕಷ ಪರಿಶೀಲನೆ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ‘ಧರ್ಮೇಗೌಡರ ಸಾವು ಬರೀ ಸಾವಲ್ಲ ರಾಜಕಾರಣದ ಕೊಲೆ’ – ಹೆಚ್ ಡಿ ಕುಮಾರಸ್ವಾಮಿ