ಒಬ್ಬರು ಕೂರಿಸಿದ್ರು-ಮತ್ತೊಬ್ಬರು ಎಳೆದೊಯ್ದರು; ನಾನೇನು ಮಾಡಲಿ: ಉಪಸಭಾಪತಿ ಧರ್ಮೇಗೌಡ
ಇಂದು ವಿಧಾನ ಪರಿಷತ್ನಲ್ಲಿ ನಡೆದ ಗದ್ದಲದಲ್ಲಿ ಕಾಂಗ್ರೆಸ್ನ ಸದಸ್ಯರು ಸಭಾಪತಿ ಖುರ್ಚಿಯಲ್ಲಿ ಕುಳಿತಿದ್ದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರನ್ನು ಖುರ್ಚಿಯಿಂದ ಎಳೆದೊಯ್ದು ಮೂರು ಪಕ್ಷದ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಸಭಾಪತಿ ಧರ್ಮೇಗೌಡ, ಒಬ್ಬರು ಪೀಠದಲ್ಲಿ ತಂದು ಕೂರಿಸಿದರು. ಮತ್ತೊಬ್ಬರು ಪೀಠದಿಂದ ಎಳೆದೊಯ್ದರು. ನಾನೊಬ್ಬನೇ ಇರುವುದರಿಂದ ಏನು ಮಾಡುವುದು? ಎಂದಿದ್ದು, ತಮ್ಮ ಅಸಾಹಾಯಕತೆಯನ್ನು ಹೇಳಿಕೊಂಡಿದ್ದಾರೆ.
ಇಂದು (ಮಂಗಳವಾರ) ನಡೆದ ವಿಶೇಷ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದಕ್ಕೆ ಜೆಡಿಎಸ್ ಸಾಥ್ ನೀಡಿತ್ತು. ಇದರಿಂದಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ಬದಲು ಬಿಜೆಪಿ-ಜೆಡಿಎಸ್ ಸದಸ್ಯರು ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರನ್ನು ಸಭಾಪತಿ ಪೀಠಕ್ಕೆ ತಂದು ಕೂರಿಸಿದ್ದರು.
ಇದಕ್ಕೆ, ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಸದಸ್ಯರೊಂದಿಗೆ ಕೈ-ಕೈ ಮಿಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಉಪಸಭಾಪತಿಯನ್ನೇ ಪೀಠದಿಂದ ಎಬ್ಬಿಸಿ ಎಳೆದೊಯ್ದಿದ್ದಾರೆ.
ವಿಧಾನ ಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಸಿದ್ದ ಆಡಳಿತಾರೂಢ ಬಿಜೆಪಿ ಸರ್ಕಾರ, ವಿಧಾನ ಪರಿಷತ್ನಲ್ಲೂ ಆ ಮಸೂದೆಗೆ ಅಂಗೀಕಾರ ಪಡೆಯಲು ವಿಶೇಷ ಅಧಿವೇಶನ ಕರೆದಿತ್ತು.
ಇದನ್ನೂ ಓದಿ: ವಿಧಾನಪರಿಷತ್ ನಲ್ಲಿ ಗಲಾಟೆ : ಬಿಜೆಪಿ-ಕಾಂಗ್ರೆಸ್ ಸದಸ್ಯರಿಂದ ನೂಕಾಟ-ತಳ್ಳಾಟ…!

