‘ಧರ್ಮೇಗೌಡರ ಸಾವು ಬರೀ ಸಾವಲ್ಲ ರಾಜಕಾರಣದ ಕೊಲೆ’ – ಹೆಚ್ ಡಿ ಕುಮಾರಸ್ವಾಮಿ

ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ನಿಧನಕ್ಕೆ ವಿಧಾನಪರಿಷತ್ ಗಲಾಟೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಹೌದು… ರೈಲ್ವೆ ಹಳಿಗೆ ತಲೆ ಕೊಟ್ಟು ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ಸಾವನ್ನಪ್ಪಿದ ಬಳಿಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ ಎಂದು ವಿಷಾದಿಸಿದರು. ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಸಜ್ಜನ ವ್ಯಕ್ತಿತ್ವದ ಧರ್ಮೇಗೌಡರು ಬಲಿಯಾಗಿದ್ಧಾರೆ ಎಂದೂ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಂಡಿದ್ದು, ಇವತ್ತಿನ ಎಲ್ಲಾ ರಾಜಕಾರಣಿಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಧರ್ಮೇಗೌಡರ ತಂದೆ ಲಕ್ಷ್ಮಯ್ಯ 2004ರಲ್ಲಿ ಒಂದು ಮಾತು ಕೇಳಿದ್ದರು. ನಾನು ಕಣ್ಮುಚ್ಚುವುದರೊಳಗೆ ನನ್ನ ಮಗನನ್ನು ಮಂತ್ತಿಯಾಗಿ ನೋಡುವ ಆಸೆ ಇದೆ ಎಂದು ಆಸೆ ತೋಡಿಕೊಂಡಿದ್ದರು. ನಮಗೆ ಧರ್ಮೇಗೌಡರನ್ನು ಮಂತ್ರಿ ಮಾಡಲು ಆಗಲಿಲ್ಲ. ಎಂಎಲ್​ಸಿ ಮಾಡಿ ಉಪಸಭಾಪತಿ ಮಾಡಿದೆವು. ಉಪಸಭಾಪತಿಯನ್ನಾಗಿ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ? ಎಂದು ಹೆಚ್​ಡಿಕೆ ಬೇಸರಪಟ್ಟಿದ್ದಾರೆ.

“ವಿಧಾನ ಪರಿಷತ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆ ಬಳಿಕ ಅಣ್ಣ ಮನನೊಂದಿದ್ದರು” ಎಂದು ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ ಸಹೋದರ ಎಸ್. ಎಲ್. ಭೋಜೇಗೌಡ ಹೇಳಿದ್ದಾರೆ. ಸೋಮವಾರ ರಾತ್ರಿ ಎಸ್. ಎಲ್. ಧರ್ಮೇಗೌಡ (65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಪಾರ್ಥಿವ ಶರೀರವನ್ನು ಕಡೂರಿನ ಸಖರಾಯಪಟ್ಟಣಕ್ಕೆ ತರಲಾಗುತ್ತಿದೆ. ಎಸ್. ಎಲ್. ಧರ್ಮೇಗೌಡ ಸಹೋದರ, ವಿಧಾನ ಪರಿಷತ್ ಸದಸ್ಯ ಎಸ್. ಎಲ್‌. ಭೋಜೇಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, “ವಿಧಾನ ಪರಿಷತ್ ಘಟನೆಯಿಂದ ಅಣ್ಣ ಮನ ನೊಂದಿದ್ದರು. ಬೇಸರವಾಗಿದ್ದರೆ ರಾಜೀನಾಮೆ ಕೊಡು. ಬೇಕಿದ್ದರೆ ನಾನೂ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ” ಎಂದರು.

ಆದರೆ ಇಂಥ ನಿರ್ಧಾರಕ್ಕೆ ಬರುತ್ತಾರೆ ಅಥವಾ ಅಷ್ಟೋಂದು ಭೀಕರವಾಗಿ ಸಾಯುವ ಧೈರ್ಯ ಹೇಗೆ ಬಂತು? ಎಂದು ಎಸ್. ಎಲ್. ಭೋಜೇಗೌಡ ಕಣ್ಣೀರು ಹಾಕಿದ್ದಾರೆ.

Spread the love

Leave a Reply

Your email address will not be published. Required fields are marked *