ಫ್ಯಾಕ್ಟ್‌ಚೆಕ್: ಲೇಪಾಕ್ಷಿಯ ದೇವಾಲಯ ಕಂಬ ಯಾವುದೇ ಆಧಾರವಿಲ್ಲದೆ ತೇಲುತ್ತಿದೆ ಎಂಬುದು ನಿಜವೇ?

ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ಪೋಸ್ಟ್‌ಕಾರ್ಡ್ ಕನ್ನಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೇಪಾಕ್ಷಿ ದೇವಸ್ಥಾನದ ಬಗ್ಗೆ ಒಂದು ಪೋಸ್ಟ್‌ಅನ್ನು ಹಂಚಿಕೊಂಡಿದೆ. ಆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಪ್ರಕಾರ ಲೇಪಾಕ್ಷಿ ದೇವಸ್ಥಾನದ ಕಂಬ ವಿಜ್ಞಾನಕ್ಕೆ ಸವಾಲೆಸೆದು ನಿಗೂಢ ರಹಸ್ಯವನ್ನು ಭೇದಿಸಲು ವಿಜ್ಞಾನಕ್ಕೂ ಸಾಧ್ಯವಾಗಿಲ್ಲ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಈ ದೇವಾಲಯದಲ್ಲಿರುವ 70 ಕಂಬಗಳಲ್ಲಿ 69 ಸಾಮಾನ್ಯವಾಗಿದ್ದರೂ, ಒಂದು ಕಂಬ ಮಾತ್ರ ಗಾಳಿಯಲ್ಲಿ ತೇಲುತ್ತಾ, ಬೃಹತ್ ಮಂಟಪಕ್ಕೆ ಆಧಾರವಾಗಿ ನಿಂತಿರುವುದೇ ಅಚ್ಚರಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ಕಂಬಕ್ಕೆ ಸಂಬಂಧಿಸಿದಂತೆ ಹಲವು ಕತೆಗಳು ಪ್ರಚಲಿತದಲ್ಲಿವೆ, ಇದು ತರ್ಕಕ್ಕೆ ನಿಲುಕದ್ದು ಎಂಬಂತೆ ಬಿಂಬಿಸಲಾಗುತ್ತಿದೆ.

ಭಾರತದ ದೇವಾಲಯಗಳು ಎಷ್ಟು ಸುಂದರವಾಗಿವೆಯೊ ಅಷ್ಟೇ ನಿಗೂಢವಾಗಿಯೂ ಇವೆ. ವಿಜ್ಞಾನ ಎಷ್ಟು ಮುಂದುವರೆದರೂ ಕೂಡ ನಮ್ಮ ಹಿಂದೂ ದೇವಾಲಯಗಳ ರಹಸ್ಯಗಳನ್ನ ಭೇದಿಸಲು ಸಾಧ್ಯವೆ ಆಗಿಲ್ಲ. ಅಂತಹ ನಿಗೂಢತೆಯ ಸಾಲಿನಲ್ಲಿರುವ ದೇವಾಲಯಗಳಲ್ಲಿ ಒಂದು ಲೇಪಾಕ್ಷಿ ದೇವಾಲಯ ಎಂದು ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ತೇಲುವ ಕಂಬ ಅಥವಾ ನೇತಾಡುವ ಕಂಬ ಎಂದು ಪ್ರತಿಪಾದಿಸಿ ಪೋಸ್ಟ್‌ಕಾರ್ಡ್ ಕನ್ನಡ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಲೇಪಾಕ್ಷಿ ದೇವಸ್ಥಾದಲ್ಲಿ ಇರುವ 70 ಕಂಬಗಳಲ್ಲಿ 69 ಸಾಮಾನ್ಯವಾಗಿದ್ದು, ಒಂದು ಕಂಬವು ನೆಲದಿಂದ‌ ತೇಲುತ್ತ ಅರ್ಧ ಇಂಚು ನೆಲದಿಂದ ಅಂತರದಲ್ಲಿದೆ. ಅದರ ಕೆಳಗೆ ನೀವು ತೆಳುವಾದ ಬಟ್ಟೆಯನ್ನು ಒಂದು ಕಡೆಯಿಂದ ಹಾಯಿಸಿ ಇನ್ನೊಂದು ಕಡೆ ತೆಗೆದುಕೊಳ್ಳಬಹುದು ಎಂಬ ವಾದವಿದ್ದು ಇದು ವಿಜ್ಞಾನಕ್ಕೆ ಸವಾಲಾಗಿ ಗಾಳಿಯಲ್ಲಿ ನಿಂತಿದೆ, ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ತೇಲುವ ಕಂಬದ ವಾಸ್ತವವೇನು :

ಈ ದೇವಾಲಯದಲ್ಲಿರುವ ತೇಲುವ ಕಂಬದ ಕೆಳಗಿನಿಂದ ಬಟ್ಟೆಯನ್ನು ತೆಗೆದರೆ ನಿಮ್ಮ ಆಸೆ ಈಡೇರುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಇಲ್ಲಿನ ತೇಲುವ ಕಂಬವನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.

ತೇಲುವ ಕಂಬ

ತೇಲುವ ಕಂಬದ ನಾಲ್ಕು ಮೂಲೆಗಳಲ್ಲಿ ಒಂದು ಮೂಲೆಯು ಸ್ಪಷ್ಟವಾಗಿ ನೆಲಕ್ಕೆ ತಾಗಿಕೊಂಡಿದೆ  ನೀವು ಬಟ್ಟೆಯನ್ನು ಅದರ ಸಂದಿಯಲ್ಲಿ ತೆಗೆಯುವಾಗ ಒಂದು ಮೂಲೆಯಲ್ಲಿ ಅಂಟಿಕೊಂಡಂತಾಗುತ್ತದೆ ಎಂದು ಟ್ರಿಪೋಟೊ ವರದಿ ಮಾಡಿದೆ. ವರದಿಯ ಪ್ರಕಾರ ಈ ಕಂಬ ನಿಜವಾಗಿ ಗಾಳಿಯಲ್ಲಿ ನೇತಾಡುವುದಿಲ್ಲ. ವಿಜ್ಞಾನಕ್ಕೆ ಯಾವುದೇ ಸವಾಲು ಇಲ್ಲ ಎಂಬುದು ವಾಸ್ತವ ಎಂದು ಟ್ರಿಪೊಟೊ ತನ್ನ ವೆಬ್‌ ಲೇಖನದಲ್ಲಿ ತಿಳಿಸಿದೆ. ಈ ಕಂಬದ ವಾಸ್ತವವನ್ನು ಜನರಿಗೆ ತಿಳಿಸುವ ಬದಲು ಜನರನ್ನು ಧಿಕ್ಕು ತಪ್ಪಿಸಿ ಮೌಢ್ಯ ಬಿತ್ತುವ ಕೆಲಸವನ್ನು ಪೋಸ್ಟ್‌ಕಾರ್ಡ್ ಕನ್ನಡದಂತಹ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ.

ಇನ್ನೊಂದೆಡೆ ಕಂಬದ ಮೇಲಿನ ಭಾಗವು ತೊಲೆಗೆ ಅಂಟಿಕೊಂಡಿರುವುದನ್ನು ಮತ್ತೊಂದು ಚಿತ್ರದಲ್ಲಿ ನೋಡಬಹುದು. ಕಾಂಕ್ರೀಟ್ ಆಗಿ ಅದನ್ನು ತೊಲೆಗೆ ಅಂಟಿಸಲಾಗಿದೆ. ಆದಕಾರಣ ಕಂಬದ ಮುಕ್ಕಾಲು ಭಾಗ ನೆಲಕ್ಕೆ ತಾಗಿಲ್ಲವೇ ಹೊರತು ಆ ಕಂಬ ತೇಲುತ್ತಿದೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಬಲಪಂಥೀಯ ಸಾಮಾಜಿಕ ಜಾಲತಾಣ ಪೋಸ್ಟ್‌ಕಾರ್ಡ್ ಕನ್ನಡ ಲೇಪಾಕ್ಷಿ ದೇವಸ್ಥಾನದ ತೆಲುವ ಕಂಬದ ಬಗ್ಗೆ ಹಂಚಿಕೊಳ್ಳಲಾದ ಸುದ್ದಿ ಸಂಪೂರ್ಣ ಸುಳ್ಳು. ಇಲ್ಲಿ ಕಂಬ ಒಂದು ಮೂಲೆಯಲ್ಲಿ ನೆಲದ ಮೇಲೆ ನಿಂತಿದೆ ಎಂಬುದು ವಾಸ್ತವ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: OREO ಬಿಸ್ಕತ್‌ಅನ್ನು ಹಂದಿಯ ಹಾಲು ಮತ್ತು ಕೊಬ್ಬಿನಿಂದ ತಯಾರಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.