ಕಲ್ಯಾಣ ಕರ್ನಾಟಕ ಭಾಗದ ಬಂಡಾಯದ ಗಟ್ಟಿ ಧ್ವನಿ, ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ ಇನ್ನಿಲ್ಲ..!

ಕಲ್ಯಾಣ ಕರ್ನಾಟಕ ಭಾಗದ ಬಂಡಾಯದ ಗಟ್ಟಿ ಧ್ವನಿ, ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ (78) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾದರು.

ಎರಡು ವರ್ಷದ ಹಿಂದೆ ಅವರಿಗೆ ಪಿತ್ತಜನಕಾಂಗ (ಲಿವರ್‌) ಕ್ಯಾನ್ಸರ್‌ ಆಗಿತ್ತು. ಆಗಿನಿಂದ ಅವರು ನಿರಂತರ ಚಿಕಿತ್ಸೆಯಲ್ಲಿದ್ದರು. ಒಂದು ವರ್ಷದಿಂದ ಅವರ ಆರೋಗ್ಯ ಕ್ಷೀಣಿಸುತ್ತ ಸಾಗಿತ್ತು. ಹಿರಿಯ ಸಾಹಿತಿಗೆ ಈಗ ಅದೇ ಕ್ಯಾನ್ಸರ್‌ ‘ಕುತ್ತು’ ತಂದೊಡ್ಡಿದೆ. ದೇಹದ ಇತರ ಭಾಗಗಳಿಗೂ ಕ್ಯಾನ್ಸರ್‌ ಹಬ್ಬುತ್ತಿರುವ ಕಾರಣ ಚನ್ನಣ್ಣ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ.

1943ರ ಏಪ್ರಿಲ್‌ 6ರಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿ ಅವರು ಜನಿಸಿದ ಅವರು, ಪ್ರೌಢಶಾಲೆ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ, ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬೈ, ಹೈದರಾಬಾದ್‌, ಹಂಪಿ, ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿಯೂ ಗ್ರಂಥಾಲಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಹೀಗಾಗಿ ರಾಜ್ಯದ ಮೂಲೆಮೂಲೆಯಲ್ಲೂ ಅವರ ಶಿಷ್ಯಬಳಗ, ಓದುಗ ಅಭಿಮಾನಿಗಳು ಇದ್ದಾರೆ.

ಮಹಾಕಾವ್ಯ, ಕವನ ಸಂಕಲನ, ಕಥಾ ಸಂಕಲನ, ಜಾನಪದ, ರಂಗಭೂಮಿ, ಡಪ್ಪಿನಾಟಗಳು, ಪ್ರಬಂಧ, ನಾಟಕ ನಿರ್ದೇಶನ, ನಟನೆ… ಹೀಗೆ ಅವರು ಕೃಷಿ ಮಾಡದ ಕ್ಷೇತ್ರವೇ ಇಲ್ಲ. ಬಂಡಾಯ ಸಾಹಿತ್ಯದ ಮೇಲ್ಪಂಕ್ತಿ ನಾಯಕರಾಗಿಯೇ ಅವರು ಈ ಭಾಗದಲ್ಲಿ ಗುರುತಿಸಲ್ಪಟ್ಟಿದ್ದರು.

ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಮೊಟ್ಟಮೊದಲ ಬಾರಿಗೆ ಸೇಡಂ ತಾಲೂಕಿನ ಮುಧೋಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಚೆನ್ನಣ್ಣ ಅವರು, ಮುಂದೆ ರಾಯಚೂರಿನ ಪಂಡಿತ ತಾರಾನಾಥ ಶಿಕ್ಷಣ ಸಂಸ್ಥೆಯಲ್ಲಿ ಕಾಯಂ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಸಿದರು. ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುವ ಯಾವುದೇ ತೆರನಾದ ಅನ್ಯಾಯ, ಅಕ್ರಮ ಕಂಡರೆ ತಕ್ಷಣ ಪ್ರತಿಭಟಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಜನಪರ ಚಳುವಳಿಯಲ್ಲಿಯೂ ಧುಮುಕಿದರು. ಜಾತಿ, ಬಡತನ ನಿರ್ಮೂಲನೆಯ ಹೋರಾಟಕ್ಕೆ ನಿಂತ ಅವರು ಮುಂದೆ ಬಂಡಾಯ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಹತ್ತಾರು ಪ್ರಬಂಧಗಳು, ನಾಲ್ಕು ಮಹಾಕಾವ್ಯಗಳು, 11 ಕವನ ಸಂಕನಲಗಳು, 12 ನಾಟಕಗಳು, 4 ಜನಪದ ಸಂಪ್ರಬಂಧಗಳು, 5 ಕಾದಂಬರಿಗಳು, ಬೆಳ್ಯಾ ಎಂಬ ಅದ್ವಿತೀಯ ಕಾದಂಬರಿ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಬೆಚ್ಚಿಬೀಳಿಸಿದ,

ವ್ಯೋಮಾವ್ಯೋಮ ಮಹಾಕಾವ್ಯದ ಮೂಲಕ ಅವರು ಮನೆಮಾತಾಗಿದ್ದರು. ಸೋಮವಾರ ಬೆಳಿಗ್ಗೆ 10ಕ್ಕೆ ಕಲಬುರ್ಗಿಯ ಹಿಂದಿ ಪ್ರಚಾರ ಸಭಾದಲ್ಲಿ ಅವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 3ಕ್ಕೆ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights