ಕೆಜಿ ಲೆಕ್ಕದಲ್ಲಿ ಚಿನ್ನ ಧರಿಸುತ್ತಿದ್ದ ‘ಗೋಲ್ಡ್ ಮ್ಯಾನ್’ ಖ್ಯಾತಿಯ ಸಾಮ್ರಾಟ್ ನಿಧನ!
ಕತ್ತು ಮತ್ತು ಕೈ ತುಂಬುವಷ್ಟು ಚಿನ್ನ ಹಾಕಿಕೊಳ್ಳುತ್ತಿದ್ದ ಗೋಲ್ಡ್ ಮ್ಯಾನ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಹೌದು… ಗೋಲ್ಡ್ ಮ್ಯಾನ್ ಅಂತಲೇ ಕರಿಸಿಕೊಳ್ಳುತ್ತಿದ್ದ 39 ವರ್ಷದ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಪುಣೆಯ ಸಂಗಮ್ ವಾಡಿ ಪ್ರದೇಶದ ನಿವಾಸಿಯಾಗಿದ್ದ ಸಾಮ್ರಾಟ್ ಹತ್ತು ಕೆಜಿ ಚಿನ್ನವನ್ನು ಧರಿಸಿಕೊಳ್ಳುವ ಮೂಲಕ ಜನಪ್ರಿಯರಾಗಿದ್ದರು. ಮೊಜೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಪುಣೆಯ ಯರವಾಡದ ಬಳಿ ಸಾಮ್ರಾಟ್ ಮೊಜೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತನ್ನ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ ಎಂದು ಆರೋಪಿಸಿ ಸಾಮ್ರಾಟ್ ಇತ್ತೀಚೆಗೆ ಪುಣೆ ಪೊಲೀಸರಿಗೆ ದೂರು ನೀಡಿದ್ದನ್ನು ನೆನಪಿಸಿಕೊಳ್ಳಬಹುದು.
ಸಾಮ್ರಾಟ್ ಮೊಜೆರಂತೆ ಚಿನ್ನ ಧರಿಸಿ ಓಡಾಡುತ್ತಿದ್ದ ಇಬ್ಬರು ಉದ್ಯಮಿಗಳು ಸಾವನಪ್ಪಿದ್ದಾರೆ. ಎಂಎನ್ಎಸ್ ಶಾಸಕ ರಮೇಶ್ ಎಂಬುವವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. ಇವರು 2011ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇನ್ನು ಚಿನ್ನದ ಅಂಗಿ ಧರಿಸುತ್ತಿದ್ದ ಉದ್ಯಮಿ ದತ್ತಾತ್ರೇಯ ಪುಂಗೆ ಎಂಬವರನ್ನು ದುಷ್ಕರ್ಮಿಗಳು 2016ರಲ್ಲಿ ಕೊಲೆಗೈದಿದ್ದರು. ಇವರು ಕೂಡ ಕೆಜಿಗಟ್ಟಲೇ ಚಿನ್ನ ಹಾಕುತ್ತಿದ್ದರು.

