ಶ್ರಮದ ಲೂಟಿಗೆ ಮುಂದಾದ ಸರ್ಕಾರ; ಕಾರ್ಮಿಕ ಕಾನೂನುಗಳನ್ನೇ ದುರ್ಬಲಗೊಳಿಸುತ್ತಿದೆ!

ಕೊರೊನಾ ವೈರಸ್‌ ವಿರುದ್ಧದ ಹೋರಾಟ ಮತ್ತು ಲಾಕ್‌ಡೌನ್‌ನಿಂದಾದ ಬಿಕ್ಕಟ್ಟುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರ ಕಾನೂನುಗಳನ್ನು ದುರ್ಬಲಗೊಳಿಸುವ ಸಾಹಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಹಳ್ಳಹಿಡಿದೆ. ಆರ್ಥಿಕತೆಯನ್ನು ಸರಿದೂಗಿಸುವ ಉದ್ದೇಶದಿಂದ ದೇಶದಲ್ಲಿ ಮಾರ್ಪಾಡುಗಳನ್ನು ಮಾಡಲಾಗುತ್ತಿದ್ದು, ಅದಕ್ಕಾಗಿ 08 ಗಂಟೆಯಿದ್ದ ಕೆಲಸ ಅವಧಿಯನ್ನು 12 ಗಂಟೆಗೆ ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈಗಾಗಲೇ 12 ಗಂಟೆ ಕೆಲಸದ ಅವಧಿಯನ್ನು 06 ರಾಜ್ಯಗಳು ಜಾರಿ ಮಾಡಿವೆ.

ಗುಜರಾತ್, ಮಧ್ಯಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವುದುಕ್ಕೂ ಮುನ್ನವೇ 12 ಗಂಟೆಗಳ ಕಾಲ ಕಾರ್ಮಿಕರಿಂದ ದುಡಿಸಿಕೊಳ್ಳಲು ಅನುಮತಿ ನೀಡಿವೆ. ಉತ್ತರ ಪ್ರದೇಶದ ರಾಜ್ಯ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಮಧ್ಯಪ್ರದೇಶದಲ್ಲಿ 1,000 ದಿನಗಳ ಕಾಲ ಕಾರ್ಮಿಕ ಕಾನೂನುಗಳಿಂದ ವಿನಾಯತಿ ನೀಡಲಾಗುವುದು ಎಂದು ಕ್ಯಾಬಿನೆಟ್‌ ಪ್ರಕಟಿಸಿದೆ.

ಕೇಂದ್ರ ಸರ್ಕಾರ ಹೇಳುತ್ತಿರುವಂತೆ, ಆರ್ಥಿಕತೆ ಹಳ್ಳ ಹಿಡಿದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ದೇಶದ ಆರ್ಥಿಕತೆ ಕುಸಿತ ಕಂಡಿದ್ದು ಲಾಕ್‌ಡೌನ್‌ಗೂ ಮೊದಲೇ ಎಂಬುದನ್ನು ನಾವು ಮರೆಯುವಂತಿಲ್ಲ. ದೇಶ ಲಾಕ್‌ಡೌನ್‌ ಆಗುವುದಕ್ಕೂ ಮೊದಲೇ ದೇಶದ ಜಿಡಿಪಿ 4.5 ಕ್ಕೆ ಕುಸಿದಿತ್ತು. ಸಮರೋಪಾದಿಯಲ್ಲಿ ದೇಶದ ಸಣ್ಣಮಧ್ಯಮ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕಿದ್ದವು. ಆಟೋಮೊಬೈಲ್ಸ್‌ ಉದ್ಯಮಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡರು. ತಮಿಳುನಾಡು ಒಂದೇ ರಾಜ್ಯದಲ್ಲಿ 200ಕ್ಕೂ ಹೆಚ್ಚು ಉದ್ದಿಮೆಗಳ ಮುಚ್ಚಲ್ಪಟ್ಟವು. ಬೆಂಗಳೂರಿನ ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿದ್ದ ಸಣ್ಣ ಕೈಗಾರಿಕೆಗಳೂ ಮುಳುಗುವ ಹಂತಕ್ಕೆ ತಲುಪಿದ್ದವು. ದೇಶದಲ್ಲಿ ನಿರುದ್ಯೋಗದ ಪ್ರಮಾಣ (9.7%) ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚಾಗಿದೆ. ಇದೆಲ್ಲವೂ ಆಗಿದ್ದು ಲಾಕ್‌ಡೌನ್‌ಗೂ ಮೊದಲು. ಲಾಕ್‌ಡೌನ್‌ ಜಾರಿಯಾದ ನಂತರ 14 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಇದೆಲ್ಲರ ನೇರ ಪೆರಿಣಾಮವನ್ನು ಎದುರಿಸಿದ್ದು ಕಾರ್ಮಿಕರು ಮಾತ್ರ.

ಇದರಿಂದಾಗಿ, ಕೇಂದ್ರ ಸರ್ಕಾರದ ಆರ್ಥಿಕ ಅಸಮರ್ಥತೆಯ ವಿರುದ್ಧ ಆರ್ಥಿಕ ತಜ್ಞರು ಅಸಹನೆ ವ್ಯಕ್ತಪಡಿಸಿದ್ದರು. ಆರ್ಥಿಕ ಅಧೋಗತಿಗೆ ದೇಶವನ್ನು ದೂಡಿದ್ದ ಸರ್ಕಾರಕ್ಕೆ ವರದಾನವಾಗಿ ಸಿಕ್ಕಿದ್ದು ಕೊರೊನಾ ವೈರಸ್‌ ಎಂದರೂ ತಪ್ಪಾಗಲಾರದು. ಆರ್ಥಿಕ ಬಿಕ್ಕಟಿನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಸರ್ಕಾರ ಕೊರೊನಾ ನಿಯಂತ್ರಿಣಕ್ಕಾಗಿ ಲಾಕ್‌ಡೌನ್‌ ವಿಧಿಸಿತು. ಈಗ ಇಡೀ ಆರ್ಥಿಕ ಅಧೋಗತಿಗೆ ಲಾಕ್‌ಡೌನ್‌ ಕಾರಣ ಎಂದು ತನ್ನ ಅಸರ್ಮಥತೆಯನ್ನು ಲಾಕ್‌ಡೌನ್‌ ಮೇಲೆ ಹಾಕಿತು. ದೇಶದ ಜನರ ರಕ್ಷಣೆಗಾಗಿ ನಾವು ಲಾಕ್‌ಡೌನ್ ಮಾಡಬೇಕಾಯಿತು. ಇದರಿಂದಾಗಿರುವ ಸಮಸ್ಯೆಯನ್ನು ನಾವೆಲ್ಲರೂ ನಿಭಾಯಿಸಬೇಕೆಂಬ ಬೆಣ್ಣೆ ಮೇಲೆ ಕೂದಲು ತೆಗೆಯುವ ಮಾತುಗಳನ್ನಾಡುತ್ತಿದೆ.

ಸರ್ಕಾರ ಗೊಂದಲ ನೀತಿಗಳ ಪರಿಣಾಮ ನೇರವಾಗಿ ದೇಶದ ಬಡ ಕಾರ್ಮಿಕರ ಮೇಲೆ ಹೊರೆ ಬಿದ್ದಿದೆ.  ಉದ್ದಿಮೆಗಳಲ್ಲಿ 08 ಗಂಟೆಗಳ ಕಾಲ ಕಾರ್ಮಿಕರು ದುಡಿಯುತ್ತಿದ್ದರು. ಅದೂ ಕಡಿಮೆ ಸಂಬಳಕ್ಕೆ. 08 ಗಂಟೆ ಅವಧಿಯ ನಂತರೂ ಕಾರ್ಮಿಕರು ದುಡಿಯುತ್ತಿದ್ದ ಶ್ರಮಕ್ಕೆ ಓವರ್ ಟೈಮ್‌ (ಓಟಿ) ಎಂದು ಕರೆಯಲಾಗುತ್ತದೆ. ಆ ಅಧಿಕ ಅವಧಿಯ ಶ್ರಮಕ್ಕಾಗಿ ಹೆಚ್ಚುವರಿ ವೇತವನ್ನೂ ನೀಡಲಾಗುತ್ತದೆ. ಕಾರ್ಮಿಕರಿಗೆ ಅಗತ್ಯವಿದ್ದರೆ ಅಥವಾ ಸಾಧ್ಯವಾದರೆ ಈ ಅವಧಿಯಲ್ಲಿ ದುಡಿಮೆಯನ್ನು ಮಾಡಬಹುದು. ಇಲ್ಲವಾದರೆ, ಎಂಟುಗಂಟೆಗಳು ದುಡಿದು ಹೊರಡಬಹುದು.

ಆದರೆ, ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹೆಚ್ಚುವರಿ ದುಡಿಮೆಯನ್ನೂ ಆನ್‌ ಟೈಮ್‌ ಆಗೂ ಕಡ್ಡಾಯ ದುಡಿಮೆಯನ್ನಾಗಿ ಮಾಡುತ್ತಿದೆ. ಇದಕ್ಕೆ ಯಾವುದೇ ಹೆಚ್ಚುವರಿ ವೇತನವೂ ಇಲ್ಲ. ಬದಲಾಗಿ 08 ಗಂಟೆಯ ದುಡಿಯುತ್ತಿದ್ದ ಕಾರ್ಮಿಕರು 12 ಗಂಟೆಯ ದುಡಿದು ತಮ್ಮ ಶ್ರಮವನ್ನು ಬಂಡವಾಳಿಗ ಖೂಳರಿಗೆ (ಉದ್ದಿಮೆದಾರರು) ಅರ್ಪಿಸಬೇಕಾಗಿದೆ.

ಲಾಕ್‌ಡೌನ್‌ನಿಂದಾಗಿ ಉದ್ದಿಮೆಗಳಿಗೆ ನಷ್ಟವಾಗಿದೆ. ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ, ಉದ್ದಿಮೆಗಳಿಗಿಂತಲೂ ಹೆಚ್ಚಿನ ಹೊಡೆತವನ್ನೂ, ಸಂಕಷ್ಟವನ್ನು ದುಡಿಯುವ ವರ್ಗ ಎದುರಿಸಿದೆ. ಆದರೆ, ಕಾರ್ಪೋರೇಟ್‌ ಖೂಳ ಪರವಾಗಿರುವ ಸರ್ಕಾರಕ್ಕೆ ದುಡಿಯುವ ಜನರ ಬೆವರಿನ ಸಂಕಷ್ಟ ಕಾಣಿಸದೇ ಇರುವುದು ವಿಪರ್ಯಾಸ.

ಲಾಕ್‌ಡೌನ್‌ ಸಂಪೂರ್ಣವಾಗಿ ತೆರವುಗೊಳ್ಳುವುದಕ್ಕೂ ಮೊದಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ನಾ ಮುಂದು –ತಾ ಮುಂದು ಎನ್ನುವಂತೆ ಹಠಕ್ಕೆ ಬಿದ್ದವರ ರೀತಿಯಲ್ಲಿ ಈ ನಿರ್ಧಾರವನ್ನು ಜಾರಿ ಮಾಡುತ್ತಿವೆ. ಅದೂ ಸುಗ್ರೀವಾಜ್ಞೆಯ ಮೂಲಕ.

ಲಾಕ್‌ಡೌನ್‌ ನಂತರದಲ್ಲಿ ಜನಜೀವನವನ್ನು ಸುಸ್ಥಿರಗೊಳಿಸಲು ಇನ್ನೂ ಕಾರ್ಯಯೋಜನೆಗಳನ್ನು ರೂಪಿಸದೇ ಇರುವ ಕೇಂದ್ರ ಸರ್ಕಾರ, ದುಡಿಮೆಯ ಅವಧಿಯನ್ನು ಹೆಚ್ಚುವ ಯೋಚನೆ ಮುಂದಾಗಿದೆ. ಇದರ ಹಿಂದೆ ಕಾರ್ಪೋರೇಟ್‌ ಲಾಬಿಯು ಬಹಿರಂಗವಾಗಿಯೇ ನಡೆಯುತ್ತಿದೆ.

ಎರಡನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೇ ದುಡಿಮೆಯ ಅವಧಿ ಹೆಚ್ಚುವ ಬಗ್ಗೆ ಸರ್ಕಾರ ಪ್ರಕಟಿಸಿತ್ತು. ಇದಾದ ನಂತರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮೇ.11 ರಂದು ಉದ್ದಿಮೆದಾರರ ಸಂಘಗಳೊಂದಿಗೆ ಚರ್ಚಿಸಿದ್ದು, 2-3 ವರ್ಷಗಳ ಅವಧಿಗೆ ಕಾರ್ಮಿಕ ಕಾನೂನುಗಳನ್ನು ಪಕ್ಕಕ್ಕಿಡಬೇಕು. ದುಡಿಮೆಯ ಅವಧಿಯನ್ನು ಹೆಚ್ಚಿಸಬೇಕು ಎಂದು ಕೇಳಿಕೊಂಡಿವೆ. ಈ ಸಭೆ ನಡೆಯುವುದಕ್ಕೂ ಮೊದಲೇ ಬಿಜೆಪಿ ಆಡಳಿತಾರೂಢ ಆರು ರಾಜ್ಯ ಸರ್ಕಾರಗಳೂ ಅದನ್ನು ಜಾರಿಗೊಳಿಸಿವೆ.

ಲಾಕ್‌ಡೌನ್‌ನಿಂದಾಗಿ ಬದುಕು ಕಳೆದುಕೊಂಡು ಬೀದಿಯಲ್ಲಿರುವ ಕಾರ್ಮಿಕರ ಭದ್ರತೆಗಾಗಿ ಸರ್ಕಾರವಾಗಲೀ, ಉದ್ದಿಮೆ ಪತಿಗಳಾಗಲೀ ಯಾವ ಯೋಜನೆಗಳನ್ನೂ ಪ್ರಸ್ತಾಪಿಸಿಲ್ಲ. ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿ ಕಂಗಾಲಾಗಿರುವ ಕಾರ್ಮಿಕರನ್ನು ಸುಲಿಗೆ ಮಾಡಲು ಕಾರ್ಪೊರೇಟ್‌ ಶಕ್ತಿಗಳು ಮತ್ತು ಸರ್ಕಾರ ಮುಂದಾಗಿವೆ.

ಸರ್ಕಾರದ ಕಾರ್ಮಿಕರ ವಿರೋಧಿ ನಡೆಯನ್ನು ವಿರೋಧಿಸಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಆರ್ಜೆಡಿ, ಲೋಕ ಜಂತ್ತ್ರಿ ಪಕ್ಷ ಮತ್ತು ವಿದುತಲೈ ಚಿರುಥೈಗಲ್ ಕಚ್ಚಿ ಥೋಲ್ ಪಕ್ಷಗಳು ರಾಷ್ಟ್ರಪತಿಗಳಿಗೆ ಪತ್ರಬರೆದಿದ್ದು, ಕಾರ್ಮಿಕರನ್ನು ಗುಲಾಮರಂತೆ ಪರಿಗಣಿಸಲಾಗುತ್ತಿದೆ ಎಂದು ಹೇಳಿವೆ. ಕಾರ್ಮಿಕರನ್ನು ಈ ಸ್ಥಾನಮಾನಕ್ಕೆ ಇಳಿಸುವುದು ಕೇವಲ ಸಂವಿಧಾನದ ಉಲ್ಲಂಘನೆ ಮಾತ್ರವಲ್ಲ ಅದನ್ನು ರದ್ದುಗೊಳಿಸಿದಂತೆ ”ಎಂದು ಆ ಪಕ್ಷಗಳ ಮುಖಂಡರು ಹೇಳಿದ್ದಾರೆ.

ದೇಶದಲ್ಲಿ ವೈರಸ್‌ಗಿಂತಲೂ ಹೆಚ್ಚಾಗಿ ಹಸಿವು, ಬಡತನದಿಂದ ಕಂಗಾಲಾಗಿದ್ದಾರೆ. ಹೀಗಿರುವಾಗ ದೇಶದ ಪರಿಸ್ಥಿತಿ ಸುಧಾರಿಸಬೇಕಾದಲ್ಲಿ, ದೇಶದ ಜನರಿಗೆ ಆರೋಗ್ಯ ಸೌಲಭ್ಯಗಳು ಹೆಚ್ಚಾಗಬೇಕು. ಜನರ ಅಗತ್ಯತೆಗಳನ್ನು ಪೂರೈಸಬೇಕು. ಜನರ ಕೈಗೆ ಹಣ ಸಿಗುವಂತಾಗಬೇಕು. ಜನರ ಕೈಯಲ್ಲಿ ಹಣ ಇದ್ದಾಗ ಮಾತ್ರ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಮಾರುಕಟ್ಟೆ ವಹಿವಾಟು ಸುಧಾರಿಸುತ್ತದೆ. ದೇಶದ ಆರ್ಥಿಕ ಪರಿಸ್ಥಿತಿಯೂ ಮೇಲೆರುತ್ತದೆ ಎಂದು ಡಾ. ಅಭಿಜಿತ್ ಬ್ಯಾನರ್ಜಿಯವರು ಹೇಳಿದ್ದಾರೆ.

ಆದರೆ, ಸರ್ಕಾರ ಜನರ ಕೈಗೆ ಹಣ ಕೊಡುವುದಿರಲಿ, ಅದೇ ಜನರ ಸುಲಿಗೆ ಮಾಡಲು ಮುಂದಾಗಿದೆ. ಸರ್ಕಾರ ಆರ್ಥಿಕ ತಜ್ಞರು, ಕಾರ್ಮಿಕ ಸಂಘಟನೆಗಳೊಂದಿಗೆ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಕಾರ್ಮಿಕರು ಸರ್ಕಾರದ ವಿರುದ್ಧ ಬೀದಿಗಿಳಿಯುವುದು ನಿಸ್ಸಂಶಯ.

 

| – ಸೋಮಶೇಖರ್ ಚಲ್ಯ |

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights