ಕೊರೊನಾ ತಡೆಗೆ ಬಿಬಿಎಂಪಿಯಿಂದ ಆರೋಗ್ಯ ಸಮೀಕ್ಷೆ : ಇಂದಿನಿಂದಲೇ ಕಾರ್ಯಾರಂಭ!

ರಾಜ್ಯದಲ್ಲಿ ಕೊರೊನಾ ಹಾಟ್ ಸ್ಪಾಟ್ ಆದ ಬೆಂಗಳೂರಿನಲ್ಲಿ ವೈರಸ್ ಹರಡುವುದನ್ನ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮದೊಂದಿದೆ ಆರೋಗ್ಯ ಸಮೀಕ್ಷೆ ಕೂಡ ಮಾಡಲು ಬಿಬಿಎಂಪಿ ಆರಂಭಿಸಿದೆ.

ಹೌದು.. ಬೆಂಗಳೂರಿನಲ್ಲಿ ಕೊರೊನಾ ವಿರುದ್ಧ ಸಾಕಷ್ಟು ಜನ ಹೋರಾಡುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಬಿಬಿಎಂಪಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಕೊರೊನಾ ವೈರಸ್ ಹತ್ತಿಕ್ಕಲು ನಗರಾದ್ಯಂತ ಆರೋಗ್ಯ ಸಮೀಕ್ಷೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕಾಗಿ 4500ಕ್ಕೂ ಹೆಚ್ಚು ಜನರಿಗೆ ತರಬೇತಿ ಕೂಡ ನೀಡಲಾಗಿದ್ದು, ಇವರು ಇಂದಿನಿಂದಲೇ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿ ಕಲೆ ಹಾಕಲಿದ್ದಾರೆ.

ಕೊರೊನಾ ಲಕ್ಷಣಗಳಾದ ಶೀತ, ಜ್ವರ, ಉಸಿರಾಟದ ತೊಂದರೆ ಹೊಂದಿರುವವರು,  ಗರ್ಭಿಣಿಯರು, ಮಧುಮೇಹ , ರಕ್ತದೊತ್ತಡದಿಂದ ಬಳಲುತ್ತಿರುವವರು, 65 ವರ್ಷ ಮೇಲ್ಪಟ್ಟವನ್ನು ಗುರುತಿಸಿ ಅವರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸುವ ಸಲುವಾಗಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಅನುಮಾನ ಬಂದಲ್ಲಿ ಅಂತವರನ್ನು ಟ್ರಾವೆಲ್ ಹಿಸ್ಟರಿ ಜೊತೆಗೆ ಕೊರೊನಾ ಚಿಕಿತ್ಸೆಗೆ ಒಳಪಡಿಸಲಾಗುವುದು.

4500 ತರಬೇತಿದಾರರಲ್ಲಿ ಬೂತ್ ಮಟ್ಟದ, ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿರುವ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು  ಬಿಬಿಎಂಪಿ ಶಾಲೆಗಳ ಶಿಕ್ಷಕರು ಇರುತ್ತಾರೆ. ಇವರು ಕಂಟೈನ್‌ಮೆಂಟ್‌ ಝೋನ್ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಎಲ್ಲಾ ಕುಟುಂಬಗಳ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ನಡೆಸುತ್ತಾರೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಆರೋಗ್ಯ ಸಮೀಕ್ಷೆ ತಂಡವನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜನೆಗೊಳಿಸಲಾಗಿದ್ದು, 500 ಮನೆಗಳಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮೂವರ ತಂಡ, 300ರಿಂದ 500 ಮನೆಗಳಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಇಬ್ಬರು ಸಮೀಕ್ಷಕರು ಹಾಗೂ 300ಕ್ಕಿಂತ ಕಡಿಮೆ  ಮನೆಗಳಿರುವ ಕಡೆ ಒಬ್ಬ ಸಮೀಕ್ಷಕ ಮಾಹಿತಿ ಕಲೆಹಾಕಲಿದ್ದಾರೆ.

ಜೊತೆಗೆ ಈ ಆರೋಗ್ಯ ಸಮೀಕ್ಷೆ ತಂಡ ಕೇಳುವ ಮಾಹಿತಿಯನ್ನು ಸಾರ್ವಜನಿಕರು ಹಂಚಿಕೊಳ್ಳಬೇಕು. ಒಂದೆರಡು ವಾರಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಗರದಿಂದ ಕೋವಿಡ್-19 ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಬಿಬಿಎಂಪಿ ವಿನಂತಿ ಮಾಡಿಕೊಮಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights