ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯ ತೃಪ್ತಿದಾಯಕ ಫಲಿತಾಂಶ: ಕೇಜ್ರಿವಾಲ್

ನಾಲ್ಕು ಕೊರೊನಾ ರೋಗಿಗಳ ಮೇಲೆ ನಡೆಸಿದ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಆರಂಭಿಕ ಫಲಿತಾಂಶಗಳು ತೃಪ್ತಿದಾಯಕ ಫಲಿತಾಂಶಗಳನ್ನು ನೀಡಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಇಂತಹ ಹೆಚ್ಚಿನ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಸಹ ಅವರು ಹೇಳಿದರು.

ದೆಹಲಿಯು ಮಂಗಳವಾರ ಕೊರೊನಾ ವೈರಸ್ ಸೋಂಕಿತರಿಗೆ ಪ್ಲಾಸ್ಮಾಥೆರಪಿ ಪ್ರಯೋಗಗಳನ್ನು ಪ್ರಾರಂಭಿಸಿತು. ಇಬ್ಬರು ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳ ಆಂಟಿಬಾಡಿ-ಭರಿತ ಪ್ಲಾಸ್ಮಾವನ್ನು ಬಳಸಿ ಚಿಕಿತ್ಸೆಯನ್ನು ನೀಡಲಾಗಿದೆ.

ಏನಿದು ಪ್ಲಾಸ್ಮಾಥೆರಪಿ?

ಈಗಾಗಲೇ ಕೊರೊನಾ ಸೋಂಕು ತಗುಲಿ ಗುಣಮುಖರಾದವರ (ಅವರ ದೇಹದಲ್ಲಿ ಕೊರೊನಾ ವೈರಸ್‌ ಇಲ್ಲ ಎಂಬುದು ಎರಡು ಸಾರಿ ಖಾತ್ರಿಯಾದ ನಂತರ) ರಕ್ತದಲ್ಲಿನ ರೋಗನಿರೋಧಕ ಪ್ಲಾಸ್ಮಾ ಕಣಗಳನ್ನು ತೆಗೆದುಕೊಂಡು ಹಾಲಿ ಸೋಂಕಿತರಿಗೆ ನೀಡುವುದೇ ಪ್ಲಾಸ್ಮಾ ಥೆರಪಿಯಾಗಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಬೆಳೆದಿರುವುದರಿಂದ ಸೋಂಕಿತರಿಗೆ ಅದನ್ನು ಬಳಸುವ ಪ್ರಯೋಗ ಈಗ ಆರಂಭಗೊಂಡಿದೆ.

ಐಸಿಎಂಆರ್‌ ಈ ರೀತಿಯ ಪ್ಲಾಸ್ಮಾಥೆರಪಿಯನ್ನು ಹಲವು ಆಸ್ಪತ್ರೆಗಳು ಮಾಡಬಹುದು ಎಂದು ಕರೆ ನೀಡಿದೆ. ಈ ಪ್ರಯೋಗವನ್ನು ತುಂಬಾ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಮೇಲೆ ನಡೆಸಲಾಗುತ್ತದೆ. ಇದು ಈಗಾಗಲೇ ಚೈನಾ ಮತ್ತು ಅಮೆರಿಕಾದಲ್ಲಿ ನಡೆದಿದ್ದು ಭಾರತದಲ್ಲಿ ಇತ್ತೀಚೆಗೆ ಆರಂಭಗೊಂಡಿದೆ.

“ಕೊರೊನಾ ಸೋಂಕಿತರ ಮೇಲೆ ನಡೆಸಿದ ಪ್ಲಾಸ್ಮಾ ಚಿಕಿತ್ಸೆಯ ಆರಂಭಿಕ ಫಲಿತಾಂಶಗಳು ತೃಪ್ತಿದಾಯಕವಾಗಿದೆ, ಮುಂದಿನ 2-3 ದಿನಗಳಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಬೇಕಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರಲ್ಲದೆ, ನಗರದಾದ್ಯಂತದ ಎಲ್ಲಾ ಗಂಭೀರ ಕೊರೊನಾ ರೋಗಿಗಳಿಗೆ ಇದೇ ಚಿಕಿತ್ಸೆಯನ್ನು ಮಾಡಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯುತ್ತದೆ ಎಂದು ಹೇಳಿದರು.

ಕೊರೊನಾದಿಂದ ಚೇತರಿಸಿಕೊಂಡವರು ಮುಂದೆ ಬಂದು ಗಂಭೀರ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಬೇಕೆಂದು ಕೇಜ್ರಿವಾಲ್ ಮನವಿ ಮಾಡಿದರು.

ಇನ್ಸ್ಟಿಟ್ಯೂಟ್ ಆಫ್ ಲಿವರ್ ಮತ್ತು ಬಿಲಿಯರಿ ಸೈನ್ಸಸ್ ಸಹಯೋಗದೊಂದಿಗೆ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ಪ್ಲಾಸ್ಮಾವನ್ನು ಪಡೆದು ಸಂಗ್ರಹಿತ ರಕ್ತವನ್ನು ಸಂಸ್ಕರಿಸಲಾಗುತ್ತಿದೆ.

ಈ ವಿಧಾನ ಆರಂಭಿಕವಾಗಿ ದೆಹಲಿಯಲ್ಲಿ ಉತ್ತಮ ಫಲಿತಾಂಶ ಕಂಡಿರುವುದರಿಂದ ಈ ರೀತಿಯ ಚಿಕಿತ್ಸೆ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights