ಖಾಲಿ ಪುಟಗಳ ಹೆಡ್‌ಲೈನ್‌ ಕೊಟ್ಟಿದ್ದಾರೆ ಮೋದಿ: ಪಿ.ಚಿದಂಬರಂ

ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿತ ಕಂಡಿದೆ. ಲಾಕ್‌ಡೌನ್‌ ನಿಂದಾಗಿ ರೈತರು, ಕಾರ್ಮಿಕರು, ಹಿಂದುಳಿದ ಸಮುದಾಯಗಳು ತತ್ತರಿಸಿ ಹೋಗಿವೆ. ಕೊರೊನಾ ಸಾವಿನ ಅರ್ಧದಷ್ಟು ಸಾವುಗಳು ಹಸಿವು, ಬಳಲಿಗೆ, ಉತ್ತಮ ಆರೋಗ್ಯ ಚಿಕಿತ್ಸೆ ಸಿಗದೆ ಸಂಭವಿಸಿವೆ. ಇಂತಹ ಸಂದರ್ಭದಲ್ಲಿ ದೇಶದ ಎಲ್ಲಾ ವರ್ಗದ ಜನರಿಗೂ ಹೊಸ ಚೈತನ್ಯ ತುಂಬುವಂತಹ ಪ್ಯಾಕೇಜನ್ನು ಮೋದಿದಿಯವರು  ಘೋಷಿಸಿದ್ದಾರೆ.

20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಪ್ಯಾಕೇಜನ್ನು ಮೋದಿಯವರು ಘೋಷಿಸಿದ್ದಾರೆ. ಆದರೆ ಪ್ಯಾಕೇಜ್‌ ಒಳಗಿನ ತಿರುಳೇನು ಎಂಬುದನ್ನು ಹೇಳಿಲ್ಲ. ಅದಕ್ಕಾಗಿ ವಿಪಕ್ಷಗಳು ತೀವ್ರವಾಗಿ ಮೋದಿಯವರ ಪ್ಯಾಕೇಜ್ ಹುಸಿ ಭರವಸೆಯನ್ನು ತುಂಬುವಂತದ್ದು ಎಂದು ಟೀಕಿಸುತ್ತಿವೆ.

ಮಾಜಿ ವಿತ್ತ ಸಚಿವ ಪಿ ಚಿದಂಬರಂ ಕೂಡಾ ಗಂಭೀರವಾಗಿ ಟೀಕೆ ಮಾಡಿದ್ದು, ಪ್ರಧಾನಿ ಮೋದಿ ಹೆಡ್‌ಲೈನ್ ಹಾಗೂ ಖಾಲಿ ಪುಟವನ್ನಷ್ಟೇ ನೀಡಿದ್ದಾರೆ ಎಂದು ತಗಾದೆ ಎತ್ತಿದ್ದಾರೆ. ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ಪ್ಯಾಕೇಜ್ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಲಿದ್ದಾರೆ ಎಂದು ಉಲ್ಲೇಖಿಸಿದ್ದರು. ಇದನ್ನೇ ತಮ್ಮ ಉಲ್ಲೇಖಕ್ಕೂ ತೆಗೆದುಕೊಂಡಿರುವ ಚಿದಂಬರಂ, ಖಾಲಿ ಪುಟವನ್ನು ಹಣಕಾಸು ಸಚಿವರು ತುಂಬುವುದನ್ನು ಕಾದು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ದೇಶದ ಜಿಡಿಪಿಯ ಶೇಕಡಾ 10ರಷ್ಟು ಮೌಲ್ಯದ್ದಾಗಿದೆ. ಇದರಲ್ಲಿ ಈ ಮುನ್ನ ಆರ್‌ಬಿಐ ಘೋಷಿಸಿರುವ ಉಪಕ್ರಮಗಳು ಸೇರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿ ಚಿದಂಬರಂ, ‘ನಿನ್ನೆ (ಮಂಗಳವಾರ) ಪ್ರಧಾನಿ ನಮಗೆ ಶೀರ್ಷಿಕೆ ಹಾಗೂ ಖಾಲಿ ಪುಟವನ್ನು ನೀಡಿದ್ದಾರೆ. ಸ್ವಾಭಾವಿಕವಾಗಿ ನನ್ನ ಪ್ರತಿಕ್ರಿಯೆ ಖಾಲಿಯಾಗಿತ್ತು. ಇಂದು ಹಣಕಾಸು ಸಚಿವರು ಖಾಲಿ ಪುಟವನ್ನು ಭರ್ತಿ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ನಿಜವಾಗಿಯೂ ಸರಕಾರವು ಆರ್ಥಿಕತೆಗೆ ತುಂಬುವ ಪ್ರತಿಯೊಂದು ಹೆಚ್ಚುವರಿ ಹಣವನ್ನು ನಾವು ಎಣಿಕೆ ಮಾಡಲಿದ್ದೇವೆ’ ಎಂದು ಹೇಳಿದರು.

‘ಯಾರಿಗೆ ಏನು ಸಿಗಲಿದೆ ಎಂಬುದನ್ನು ನಾವು ಜಾಗರೂಕತೆಯಿಂದ ಪರಿಶೀಲಿಸಲಿದ್ದೇವೆ. ಮೊದಲನೇಯದಾಗಿ ಬಡವರು, ಹಸಿವಿನಿಂದ ತಮ್ಮ ರಾಜ್ಯಗಳಿಗೆ ನೂರಾರು ಕೀಲೋಮೀಟರ್ ನಡೆದು ಬಂದಿರುವ ವಲಸೆ ಕಾರ್ಮಿಕರು ಏನು ಪಡೆಯಲಿದ್ದಾರೆ?’ ಎಂದು ಚಿದಂಬರಂ ಪ್ರಶ್ನಿಸಿದರು.

‘ರಿಯಲ್ ಮನಿ ವಿಷಯದಲ್ಲಿ ಜನಸಂಖ್ಯೆಯ ಕೆಳಭಾಗವು (13 ಕೋಟಿ ಕುಟುಂಬಗಳು) ಏನನ್ನು ಪಡೆಯಲಿದೆ ಎಂಬುದನ್ನು ಪರಿಶೀಲಿಸಲಿದ್ದೇವೆ’ ಎಂದು ಚಿದಂದರಂ ಹೇಳಿದರು.

ಇದಕ್ಕೂ ಮುನ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿಯವರು ಒಮ್ಮೆ ಚಪ್ಪಾಳೆ ಬಾರಿಸಲು, ಮತ್ತೊಮ್ಮೆ ಕ್ಯಾಂಡಲ್‌ ಹಚ್ಚಲು ಕರೆಕೊಟ್ಟಿದ್ದರ ಹೊರತಾಗಿ, ದೇಶದ ಸಂಕಷ್ಟವನ್ನು ಎದುರಿಸಲು ಯಾವುದೇ ಹಣಕಾಸಿನ ಪ್ಯಾಕೇಜ್‌ ಘೋಷಿಸಿರಲಿಲ್ಲ. ಈ ಬಾರಿ ಬಹು ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ. ಪ್ಯಾಕೇಜ್‌ನಿಂದ ಯಾವ ವರ್ಗಕ್ಕೆ ಎಷ್ಟು ಉಪಯುಕ್ತವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರ ವಿವರಣೆಯ ನಂತರ ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights