ಗಡಿ ಸಂಘರ್ಷ: ಭಾರತಕ್ಕೆ ತೈವಾನ್ ಬೆಂಬಲ; ಏನಿದು ‘ಮಿಲ್ಕ್ ಟೀ ಅಲೈಯನ್ಸ್’!

ಚೀನಾ ಡ್ರ್ಯಾಗನ್ ವಿರುದ್ಧ ಬಾಣ ಹೂಡುವ ರಾಮನ ಕಾರ್ಟೂನ್ ವೈರಲ್ ಆಗಿದೆ. ಹಿಂದೂ ದೈವ ರಾಮ, ಚೀನಾದ ಡ್ರ್ಯಾಗನ್ ವಿರುದ್ಧ ಹೋರಾಡುತ್ತಿರುವ ವ್ಯಂಗ್ಯಚಿತ್ರವು ತೈವಾನ್‌ ನ್ಯೂಸ್‌ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ. ನಂತರ ಆ ಕಾರ್ಟೂನ್‌ ತೈವಾನ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಹಿಂಸೆಗೆ ತಿರುಗಿತ್ತು. ಭಾರತದ 20 ಸೈನಿಕರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ನಡುವಿನ ಸಂಘರ್ಷವನ್ನು ಕಾರ್ಟೂನ್‌ನಲ್ಲಿ ಬಿಡಿಸಲಾಗಿದೆ.

ಈ ಚಿತ್ರವನ್ನು ಮೊದಲು ಹಾಂಗ್ ಕಾಂಗ್ ಸೋಷಿಯಲ್ ಮೀಡಿಯಾ ಸೈಟ್ LIHKG ನಲ್ಲಿ ಹೊಸೈಲಿ ಪೋಸ್ಟ್ ಮಾಡಿದ್ದಾರೆ. ಅವರು ಅದನ್ನು ಟ್ವಿಟ್ಟರ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಜೂನ್ 16 ರಂದು ಆ ಕಾರ್ಟೂನ್‌ ಪೋಸ್ಟ್ ಮಾಡಲಾಗಿದ್ದು, ಇದೂವರೆಗೆ 2,600 ರಿಟ್ವೀಟ್ ಮತ್ತು 7,600 ಲೈಕ್‌ಗಳನ್ನು ಪಡೆದಿದೆ. ಹೊಸೈಲಿ ಈ ಚಿತ್ರವನ್ನು ತನ್ನ “ಭಾರತೀಯ ಸ್ನೇಹಿತರಿಗೆ”  ಅರ್ಪಿಸಿದ್ದಾರೆ.

https://twitter.com/hkbhkese/status/1272866955901276160

ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಏಳನೇ ಅವತಾರವೆಂದು ನಂಬಲಾದ ರಾಮನು ಚೀನಾದ  ಡ್ರ್ಯಾಗನ್ ಅನ್ನು ಗುರಿಯಾಗಿಸಿಕೊಂಡಂತೆ ಬಿಲ್ಲು ಎಳೆಯುತ್ತಿರುವ ಚಿತ್ರಣವು, “ನಾವು ಜಯಿಸುತ್ತೇವೆ, ನಾವು ಕೊಲ್ಲುತ್ತೇವೆ” ಎಂಬ ಪಠ್ಯದ ವಿವರಣೆಯೊಂದಿಗಿದೆ. ನಂತರ ಅದನ್ನು ತೈವಾನ್‌ ರಾಷ್ಟ್ರದ ನ್ಯೂಸ್ ಪೋರ್ಟಲ್, ತೈವಾನ್ ನ್ಯೂಸ್ ತನ್ನ ‘ದಿನದ ಫೋಟೋ’ ಎಂದು ತೆಗೆದುಕೊಂಡಿದೆ.

‘ಮಿಲ್ಕ್ ಟೀ ಮೈತ್ರಿ’

ಈ ವ್ಯಂಗ್ಯಚಿತ್ರವನ್ನು ಟ್ವಿಟರ್‌ನಲ್ಲಿ ಅನೇಕ ಭಾರತೀಯರು ಹೊಸೈಲಿಯವರಿಗೆ ಧನ್ಯವಾದಗಳನ್ನು ಅರ್ಪಿಸಿ ಶೇರ್‌ಮಾಡಿದ್ದು, ತೈವಾನ್‌ ಮತ್ತು ಭಾರತೀಯರ ಒಗ್ಗಟ್ಟಿನ ಸಂಕೇತವಾಗಿ ನೋಡಲಾಗುತ್ತಿದೆ.

ಸೋಶಿಯಲ್ ಮೀಡಿಯಾ ಬಳಕೆದಾರರು ರಚಿಸಿದ ‘ಮಿಲ್ಕ್ ಟೀ ಅಲೈಯನ್ಸ್’ ಹ್ಯಾಶ್‌ಟ್ಯಾಗ್‌, ಮೈತ್ರಿ ಕುರಿತು ಹಲವಾರು ಟ್ವೀಟ್‌ಗಳನ್ನು ಪ್ರೇರೇಪಿಸಿದೆ. ಆಗ್ನೇಯ ಏಷ್ಯಾದಲ್ಲಿ ಚೀನಾವನ್ನು ಹೊರತುಪಡಿಸಿ ಅನೇಕ ರಾಷ್ಟ್ರಗಳಲ್ಲಿ ಚಹಾವನ್ನು ಹಾಲಿನೊಂದಿಗೆ ಸೇವಿಸಲಾಗುತ್ತದೆ ಎಂಬ ಅಂಶದಿಂದ ಹೊರಹೊಮ್ಮಿದ ಒಂದು ಪರಿಕಲ್ಪನೆಯೇ ‘ಮಿಲ್ಕ್ ಟೀ ಅಲೈಯನ್ಸ್’.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಹಿರಿಯ ಸಹವರ್ತಿ ಸುಶಾಂತ್ ಸರೀನ್ ಕೂಡ ಈ ಚಿತ್ರವನ್ನು ಹಂಚಿಕೊಂಡಿದ್ದು, ಚೀನಾದ ಬಗೆಗಿನ ನೀತಿ ದೃಷ್ಟಿಕೋನವನ್ನು ಪುನರ್ವಿಮರ್ಶಿಸುವ ಅಗತ್ಯತೆಯ ಬಗ್ಗೆ ಹೇಳಿದ್ದಾರೆ.

ತೈವಾನ್ ಮತ್ತು ಚೀನಾ:

ಕಳೆದ ಕೆಲವು ವರ್ಷಗಳಲ್ಲಿ ತೈವಾನ್ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿದೆ. ತೈವಾನ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದರೆ, ಚೀನಾ ಇದನ್ನು ತನ್ನ ಒಡೆದುಹೋದ ಪ್ರಾಂತ್ಯವಾಗಿ ನೋಡುತ್ತದೆ.

ಜೂನ್ 9 ರಂದು, ಮೌಖಿಕ ಎಚ್ಚರಿಕೆಗಳ ಹೊರತಾಗಿಯೂ ಚೀನಾದ ಫೈಟರ್ ಜೆಟ್‌ಗಳು ತೈವಾನ್‌ನ ವಾಯುಪ್ರದೇಶಕ್ಕೆ ಪ್ರವೇಶಿಸಿದವು. ನಂತರ ತೈವಾನೀಸ್ ವಾಯುಪಡೆಯ ಜೆಟ್‌ಗಳು ಅವುಗಳನ್ನು ಹಿಮ್ಮೆಟ್ಟಿದ್ದವು. ಫೆಬ್ರವರಿ 10 ರಂದು ಇದೇ ರೀತಿಯ ಘಟನೆ ನಡೆದಿತ್ತು.

ಈ ಮಧ್ಯೆ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಭಾರತ ಮತ್ತು ತೈವಾನ್ ನಡುವಿನ ಸಂಬಂಧವನ್ನು ಬಲಪಡಿಸಲು ಅನೇಕ ಕರೆಗಳು ಬಂದಿವೆ. ಇದು ಚೀನಾದ ನಿರಾಶೆಗೆ ಕಾರಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights