FACT CHECK | ಪ್ರಧಾನಿ ಮೋದಿ 10 ವರ್ಷದಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ, ಒಂದೂ ಹಗರಣ ಮಾಡಿಲ್ಲವಂತೆ
‘ಫಿರ್ ಆಯೇಗಾ ಮೋದಿ’ – ಮತ್ತೆ ಬರ್ತಾರೆ ಮೋದಿ, ಮತ್ತೊಮ್ಮೆ ಮೋದಿ, ಇದು 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಘೋಷ ವಾಕ್ಯ! ಸತತ ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಧಾನ ಮಂತ್ರಿ ಪಟ್ಟಕ್ಕೇರಲು ಸಜ್ಜಾಗಿರುವ ಮೋದಿ ಈ ಬಾರಿ NDA ಕೂಟ 400 ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ( 300ಕ್ಕಿಂತಲೂ ಕಡಿಮೆ ಸೀಟುಗಳಿಗೆ ಎನ್‌ಡಿಎ ತೃಪ್ತಿ ಪಟ್ಟುಕೊಳ್ಳಬೇಕಿದೆ ಎಂಬ ವರದಿಯನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ)
ಇದಕ್ಕೆ ಸಾಥ್ ನೀಡುವಂತೆ ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ಮೋದಿ ಪರವಾದ ಮತ್ತು ಅವರ ಸಾಧನೆಗಳು ಎಂದು ಹೇಳಿಕೊಳ್ಳುವಂತಹ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಹೀಗೆ ಹೇಳುತ್ತದೆ. ಹೆಸರು ನರೇಂದ್ರ ಮೋದಿ, 13 ವರ್ಷ ಮುಖ್ಯಮಂತ್ರಿ, 10ವರ್ಷ ಪ್ರಧಾನ ಮಂತ್ರಿ, ರಜೆ-0, ಮನೆ ಇಲ್ಲ, ಆಸ್ತಿ ಇಲ್ಲ, ಆದರೆ ಇವರ ವಿರೋಧಿಗಳು ಮಾತ್ರ ಮೋದಿ ಸೂಟು ಬೂಟು ಹಾಕ್ತಾರೆ ಎಂಬ ವಿರೋಧಗಳನ್ನು ಮಾಡ್ತಾರೆ. ಇವರಿಗೆ ಮೋದಿಯನ್ನು ವಿರೋಧಿಸಲು ಬೇರೆ ಯಾವ ಕಾರಣಗಳು ಇಲ್ಲ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಉಲ್ಲೇಖಗಳನ್ನು ಪರಿಶೀಲಿಸೋಣ.
ವಾಸ್ತವವೇನು ?
ಪ್ರಧಾನಿ ಮೋದಿ ಬಳಿ ಇದೆ 2.23 ಕೋಟಿ
ಪ್ರಧಾನಿ ಮೋದಿ ಬಳಿ ಸ್ವಂತಕ್ಕೆ ಏನು ಇಲ್ಲವೇ ಇಲ್ಲ ಎಂಬ ವಾದ ಮಾಡುವವರಿಗೆ, ಪ್ರಧಾನಿ ಮೋದಿ ಚುನಾವಣೇಯಲ್ಲಿ ಸ್ಪಧಿಸುವಾಗ ಚುನಾವನಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಘೋಷಿಸಿರುವ ಆಸ್ತಿ ವಿವರಗಳನ್ನು ನೋಡಿದರೆ ಅವರ ಬಳಿಯೂ ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿ ಇದೆ ಎಂಬುದು ತಿಳಿಯುತ್ತದೆ.
ಪ್ರಧಾನಿ ಮೋದಿ ಬಳಿ 2.23 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಇದ್ದು, ಇದರಲ್ಲಿ ಬಹುಪಾಲು ಬ್ಯಾಂಕ್ ಠೇವಣಿಯೇ ಆಗಿದೆ. ಗುಜರಾತ್‌ನ ಗಾಂಧಿನಗರದಲ್ಲಿದ್ದ ಅವರ ಪಾಲಿನ ಭೂಮಿಯನ್ನು ದಾನ ಮಾಡಿರುವುದರಿಂದ, ಮೋದಿ ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ ಎಂಬುದು ಗೊತ್ತಾಗಿದೆ. 13 ವರ್ಷ ಮುಖ್ಯಮಂತ್ರಿ 10 ವರ್ಷ ಪ್ರಧಾನ ಮಂತ್ರಿಯಾಗಿ ರಾಜಕೀಯ ಜೀವನದಲ್ಲಿ ಇರುವವರಿಗೆ ಇದು ಕಡಿಮೆಯೇ. ಆದರೆ ಅವರ ಬಳಿ ಏನು ಇಲ್ಲವೇ ಇಲ್ಲ ಎಂಬುದು ಸುಳ್ಳು.
ಹಗರಣಗಳು :
ದೇಶದಲ್ಲಿ ಕೊರೋನಾ ಉಲ್ಬಣಗೊಂಡ ಸಂದರ್ಭದಲ್ಲಿ ಪಿಎಂ ಕೇರ್ಸ್ ನಿಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ದೆಹಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್ ಪ್ರೆಸ್ ವೇ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿ ಇದೆ. ಪ್ರತಿ ಕಿಮೀ.ಗೆ 18.2 ಕೋಟಿ ರೂ.ಗಳಿಂದ 251 ಕೋಟಿ ರೂ.ಗಳ ವರಗೆ ನಿರ್ಮಾಣ ವೆಚ್ಚವನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಸಲಾಗಿರುವ ಆರೋಪಗಳಿವೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದ ಕುರಿತು ಸಂಘ ಪರಿವಾರ ಆರೋಪಗಳನ್ನು ಮಾಡಿತ್ತು. ‘ಪಿಎಂ ಕೇರ್ ಫಂಡ್’ ಅನ್ನು ಸರ್ಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡಿದ್ದರು. ಆದರೆ, ಸರ್ಕಾರ ಅದನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಎಂದು ಹೆಸರಿಸಿ ಅದನ್ನು ಮಾಹಿತಿ ಹಕ್ಕಿನಿಂದ ಹೊರಗೆ ಇಟ್ಟಿದೆ. ಈ ದುಡ್ಡಿನಿಂದ ಯಾರಿಗೆ ಲಾಭವಾಗುತ್ತಿದೆ? ಪ್ರಧಾನಿ ಮೋದಿಯನ್ನು ಪ್ರಶ್ನಿಸಲಾಗಿತ್ತು.
ಚುನಾವಣಾ ಬಾಂಡ್ ಎಂಬ ಹಗರಣ
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ರೂಪಿಸಿ, ಅದನ್ನು ಜಾರಿಗೆ ತಂದಿತು. ಈ ಬಾಂಡ್ ಯೋಜನೆಯ ಅತಿದೊಡ್ಡ ಫಲಾನುಭವಿ ಬಿಜೆಪಿ. ಹೀಗಾಗಿ, ಬಾಂಡ್ ಯೋಜನೆ ಕುರಿತ ಪ್ರಶ್ನೆಗಳಿಗೆ ಆ ಪಕ್ಷವೇ ಉತ್ತರ ನೀಡಬೇಕು. ಆದರೆ, ಬಾಂಡ್ ಮೂಲಕ ಹಣ ಪಡೆದ ಇತರ ಪಕ್ಷಗಳು ಕೂಡ ಉತ್ತರ ನೀಡಬೇಕಾದ ಅಗತ್ಯ ಇದೆ.
ಚುನಾವಣಾ ಬಾಂಡ್ | ಸಾಮಾನ್ಯ ಜನರಿಗೆ ಆಗುವ ನಷ್ಟವೆಷ್ಟು, ಹಾನಿ ಏನು? ಇಲ್ಲಿದೆ ಓದಿ
ಪ್ರಧಾನಿ ಮೋದಿ ಒಮ್ಮೆಯೂ ರಜೆ ತೆಗೆದುಕೊಂಡಿಲ್ಲವೇ?
ಪ್ರಧಾನಿ ನರೇಂದ್ರ ಮೋದಿ 2014ರಿಂದ ಈಚೆಗೆ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಇಲ್ಲಿಯವರೆಗೆ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ ಎಂಬಂತೆ ಚಿತ್ರಿಸಲಾಗಿದೆ.
2023ರ ಜುಲೈ 31 ರಂದು ಪ್ರಫುಲ್ ಪಿ ಸರ್ದಾ ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಮೂಲಕ ಪ್ರಧಾನಿ ಮೋದಿ ಎಷ್ಟು ದಿನ ರಜೆ ತೆಗೆದುಕೊಂಡಿದ್ದಾರೆ ಎಂದು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಿಎಂಒ, ಮೇ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪ್ರಧಾನಿ ನರೇಂದ್ರ ಮೋದಿ ಅವರು 3,000 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ದಣಿವಿಲ್ಲದೆ ದೇಶ ಸೇವೆಯಲ್ಲಿ ಸಪರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಒಂದೂ ರಜೆ ಇಲ್ಲದೇ ಪ್ರಧಾನಿಯವರು ಕೆಲಸ ಮಾಡಿದ್ದಾರೆಂದು ಪಿಎಂಒ ಹೇಳಿದೆ.
ಪ್ರಧಾನಿಗಳಿಗೂ ಹಾಜರಾತಿ ಪುಸ್ತಕ ಎಂಬುದೇನು ಇರುವುದಿಲ್ಲ, ಪ್ರತಿ ದಿನ ಅವರು ಕಚೇರಿಗೆ ತೆರಳಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಬೇಕೆಂಬ ಯಾವ ನಿಯಮಗಳೂ ಇಲ್ಲ. ಪ್ರಧಾನಿಯಾಗಿ ಕೆಲಸ ನಿರ್ವಹಿಸುವ ವ್ಯಕ್ತಿ ಸದಾ ಪ್ರೋಟೊಕಾಲ್ ವ್ಯಾಪ್ತಿಯಲ್ಲಿ ಇರುತ್ತಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ನ್ಯೂಸ್‌ಲಾಂಡ್ರಿಯೊಂದಿಗೆ ಮಾತನಾಡುತ್ತಾ, “ಪ್ರಧಾನಿ ಮೋದಿ ಎಂದಿಗೂ ರಜೆ ತೆಗೆದುಕೊಂಡಿಲ್ಲ ಎಂಬ ಸುದ್ದಿಯನ್ನು ನಾನು ನೋಡಿದೆ. ಇದೊಂದು ರೀತಿಯ ಪ್ರಹಸನದಂತೆ ಕಾಣುತ್ತಿದೆ. ಯಾವ ಪ್ರಧಾನಿಯೂ ರಜೆ ತೆಗೆದುಕೊಳ್ಳುವುದಿಲ್ಲ. ಮನಮೋಹನ್ ಸಿಂಗ್ ಯಾವತ್ತೂ ರಜೆ ತೆಗೆದುಕೊಂಡಿಲ್ಲ. ಆದರೆ ನಾವು ಯಾವತ್ತು ಇದಕ್ಕೆ ಅಷ್ಟೋಂದು ಪ್ರಚಾರ ನೀಡಿರಲಿಲ್ಲ. ಅದರ ಅಗತ್ಯವೂ ಇಲ್ಲ ಎಂದಿದ್ದರು.
ರಾಜೀವ್ ಗಾಂಧಿ ಒಮ್ಮೆ ತಮ್ಮ ಕುಟುಂಬದೊಂದಿಗೆ ಲಕ್ಷದ್ವೀಪಕ್ಕೆ ಹೋಗಿದ್ದರು, ಆದರೆ ಆ ಸಮಯದಲ್ಲಿ ಅವರು ಪಿಎಂಒ ಜೊತೆ ಸಂಪರ್ಕದಲ್ಲಿದ್ದರು. ಪ್ರಧಾನಿ ಹುದ್ದೆಯಲ್ಲಿ ಇರುವ ಯಾರೇ ಆದರೂ, ಎಲ್ಲೇ ಇದ್ದರೂ ಅವರು ತಮ್ಮ ಕಚೇರಿಯೊಂದಿಗೆ 24 ಗಂಟೆ ಸಂಪರ್ಕದಲ್ಲಿರುತ್ತಾರೆ. ಪ್ರಧಾನಿ ಮೋದಿ ರಜೆ ತೆಗೆದುಕೊಂಡಿಲ್ಲ ಎಂದು ಹೇಳುವುದು ಕೇವಲ ಮಾರ್ಕೆಟಿಂಗ್ ಆಗಿದೆ ಎಂದು ನ್ಯೂಸ್‌ಲಾಂಡ್ರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ರಜೆಯನ್ನೆ ತೆಗೆದುಕೊಳ್ಳದ ಪ್ರಧಾನಿ ಮೋದಿ ಪುಲ್ವಾಮ ದಾಳಿ ನಡೆದಾಗ ಎಲ್ಲಿದ್ದರು?
ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 40 ಯೋಧರು ಹುತಾತ್ಮರಾದ ದಿನ ಪ್ರಧಾನಿ ನರೇಂದ್ರ ಮೋದಿ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಸಾಕ್ಷ್ಯಚಿತ್ರದ(ಡಾಕ್ಯುಮೆಂಟರಿ) ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಅಂದು ಉಗ್ರರ ದಾಳಿ 3ಗಂಟೆ 10 ನಿಮಿಷಕ್ಕೆ ನಡೆದಿತ್ತು. ಆದರೆ ಪ್ರಧಾನಿ ಮೋದಿ ಅವರು 6.40ರವರೆಗೆ ಪ್ರಚಾರದ ಸಿನಿಮಾ ಶೂಟಿಂಗ್ ನಲ್ಲಿ ತಲ್ಲೀನರಾಗಿದ್ದರು. ಪುಲ್ವಾಮಾ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡು ಇಡೀ ದೇಶ ಶೋಕ,ಆಘಾತದಲ್ಲಿ ಮುಳುಗಿದ್ದರೆ, ಪ್ರಧಾನಿ ಮೋದಿ ಸಂಜೆವರೆಗೂ ಚಿತ್ರೀಕರಣದಲ್ಲಿಯೇ ನಿರತರಾಗಿದ್ದರು.
ಬಿಜೆಪಿ ಪರವಾಗಿ ತಮ್ಮ ಪಕ್ಷದ ಕೆಲಸಗಳಿಗೆ ಪ್ರಚಾರ ಮಾಡಲು ಹೋಗುವ ಪ್ರಧಾನಿ ಮೋದಿ ಕೆಲಸವನ್ನು ಏನೆಂದು ಬಣ್ಣಿಸಬೇಕು, ಅದೂ ಕೂಡ ದೇಶದ ಕೆಲಸವೇ? ಅದನ್ನೂ ತಾವೂ ವರ್ಕಿಂಗ್ ಹವರ್ ಎನ್ನುವರೇ?
ಭಾರತದ ಪ್ರಾಚೀನ ನಗರಿ ದ್ವಾರಕಾಗೆ ಬೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ್ದರು ಅದನ್ನು ಏನೆಂದು ಬಣ್ಣಿಸುತ್ತಾರೆ.
ರಾಮ ಮಂದಿರ ಉದ್ಘಾಟನೆ ವೇಳೆ 11ದಿನ ವ್ರತ ಇದ್ದ ಪ್ರಧಾನಿ ಮೋದಿ ಅದನ್ನು ತಮ್ಮ ಪ್ರಧಾನಿ ಹುದ್ದಯೆ ಜವಬ್ದಾರಿ ಎಂದು ಭಾವಿಸಿದ್ದರೆ?
ಇಷ್ಟೆಲ್ಲವನ್ನು ಯಾಕೆ ಹೇಳಬೇಕಾಯಿತು ಎಂದರೆ, ಪ್ರಧಾನಿ ಹುದ್ದೆ ಅಥವಾ ಜವಬ್ದಾರಿ ನಿರ್ವಹಣೆ ಎಂಬುದು, ಶಾಲೆ ಕಾಲೇಜುಗಳಲ್ಲಿ ಹಾಜರಾತಿ ಹಾಕಿದಂತಲ್ಲ, ಅಥವಾ ಬಯೋಮೆಟ್ರಿಕ್ ಥಂಬ್ ಕೊಟ್ಟು ಲಾಗಿನ್ ಆದಂತಲ್ಲ. ಇವತ್ತು ಪ್ರಸೆಂಟ್ ಇವತ್ತು ಆಬ್ಸೆಂಟ್ ಎಂದು ಹೇಳುವಷ್ಟು ಸುಲಭದ ಕೆಲಸವೂ ಅಲ್ಲ. ಆ ಹುದ್ದೆಗೆ ಅದರದ್ದೆ ಆದ ತೂಕ, ಜವಬ್ದಾರಿ ನಿರ್ವಹಣೆ ಎಂಬುದಿರುತ್ತದೆ. ಅದನ್ನು ಎಲ್ಲಾ ಪ್ರಧಾನಿಗಳು ಪಾಲಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ರಾಜಕೀಯ ಪಕ್ಷವೊಂದರ ಬೆಂಬಲಿಗರು ಪ್ರಧಾನಿ ಕೆಲಸಕ್ಕೆ ರಜೆಯನ್ನೆ ತೆಗೆದುಕೊಂಡಿಲ್ಲ ಎನ್ನುವಷ್ಟು ಕೆಳಮಟ್ಟದ ಮಾರ್ಕೆಟಿಂಗ್ ಮಾಡಿದ ಉದಾಹರಣೆ ಇಲ್ಲ.
ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ 10ವರ್ಷದಲ್ಲಿ ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ, ಒಂದೇ ಒಂದು ಹಗರಣ ಮಾಡಿಲ್ಲ, ಆಸ್ತಿ ಮನೆ ಮಾಡಿಲ್ಲ ಎಂಬುದನ್ನು ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುವುದನ್ನು ನೋಡುವಾಗ ಕ್ಲೀಷೆ ಎನ್ನಿಸುತ್ತದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ