ಡ್ರೋನ್ ಪ್ರತಾಪ್‌ ಬಂಧನಕ್ಕೆ ಆದೇಶ; ಪ್ರತಾಪ್‌ ಹುಡುಕಾಟಕ್ಕೆ ಮೂರು ತಂಡಗಳ ರಚನೆ!

ಭಾರತದ ಮಾಧ್ಯಮಗಳು ಯುವ ವಿಜ್ಞಾನಿಯೆಂದು ಅಟ್ಟಕ್ಕೇರಿಸಿದ್ದ ಡ್ರೋನ್‌ ಪ್ರಾತಾಪ್‌ನ ಸುಳ್ಳಿನ ಮುಖವಾಡ ಕಳಚಿ ಬಿದ್ದಿದೆ. ಆತ ವಿಜ್ಞಾನಿಯೂ ಅಲ್ಲ, ಡ್ರೋನ್‌ನಲ್ಲಿ ಆತನ ಸಾಧನೆಯೇನೂ ಇಲ್ಲ ಎಂಬುದನ್ನು ಜರ್ಮನಿಯ ಡ್ರೋನ್‌ ಸಂಸ್ಥೆಯೂ ಸೇರಿದಂತೆ ಎಲ್ಲವೂ ಬಹಿರಂಗ ಪಡಿಸಿವೆ. ಈ ಬೆನ್ನಲ್ಲೇ ಪ್ರತಾಪ್‌ನ ಬಂಧನಕ್ಕೆ ಆದೇಶಿಸಿದ್ದು ಪೊಲೀಸರ ತಂಡ ಹುಡುಕಾಟ ಆರಂಭಿಸಿದ್ದಾರೆ.

ಡ್ರೋನ್‌ ಪ್ರತಾಪ್‌ನನ್ನು ಬಂಧಿಸುತ್ತಿರುವುದು ಆತ ಡ್ರೋನ್‌ ತಯಾರಿಸಿರುವುದಾಗಿ ಹೇಳಿಕೊಂಡು ದೇಶಾದ್ಯಂತ ಎಲ್ಲರಿಗೂ ಕಾಗೆ ಹಾರಿಸದ ಕಾರಣಕ್ಕಾಗಿ ಅಲ್ಲ. ಬದಲಿಗೆ, ಪ್ರತಾಪ್‌ನ ಅಸಲಿಯತ್ತು ಹೊರಬಂದಾಗ ಆತ ಮೊನ್ನೆ (ಜುಲೈ 15)  ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್​ವೊಂದರಲ್ಲಿ ಪ್ರತಾಪ್  ಹೋಂ ಕ್ವಾರಂಟೈನ್ ಆಗಿದ್ದ.  ನಿಯಮದ ಪ್ರಕಾರ ಆತ 14ದಿನಗಳ ಕಾಲ ಕ್ವಾರಂಟೈನ್​ ಆಗಬೇಕಿತ್ತು.  ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್​ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.

ಆತ ಹೈದರಾಬಾದ್‌ನಿಂದ ಬಂದಿರುವ ಬಗ್ಗೆ ಹಾಗೂ ಆತನ ಕ್ವಾರಂಟೈನ್‌ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ, ಆತ ಇಲ್ಲಿಯವರೆಗೆ ಎಲ್ಲಿ ನೆಲೆಸಿದ್ದ, ಆತನ ಪ್ರಯಾಣದ ಇತಿಹಾಸದ ಬಗ್ಗೆ ಮಾಹಿತಿಯನ್ನೂ ಪಡೆಯದೆ, ಆತನಿಗೆ ಕೊರೊನಾ ಟೆಸ್ಟ್‌ ಅಗಿದೆಯೇ, ಇಲ್ಲವೇ ಎಂಬದನ್ನೂ ತಿಳಿಯದೆ ಟಿಆರ್‌ಪಿಗೊಸ್ಕರ ಆತನನ್ನು ನೇರವಾಗಿ ಸ್ಟುಡಿಯೋಗೆ ಕರೆತಂದಿರುವ ಬಿಟಿವಿಯ ಬೇಜವಾಬ್ದಾರಿತನದಿಂದ ನಿರೂಪಕ ಸೇರಿದಂತೆ, ಕೆಲವು ಸಿಬ್ಬಂದಿಗಳನ್ನೂ ಸಹ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಪ್ರತಾಪ್​ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್​ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಡ್ರೋನ್ ಪ್ರತಾಪ್ ಬಂಧನಕ್ಕಾಗಿ ಮೂರು ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್​ಗಾಗಿ  ಹುಡುಕಾಟ ನಡೆಸುತ್ತಿದೆ.

ಸದ್ಯ ಪ್ರತಾಪ್​ ಫೋನ್​ ಸ್ವಿಚ್ ಆಫ್ ಆಗಿದೆ. ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಪ್ರತಾಪ್​ ಇದ್ದಾನೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.​ ಡ್ರೋನ್​ ತಯಾರಿಸಿದ್ದೇನೆ, ಬೇರೆ ರಾಷ್ಟ್ರಗಳಲ್ಲಿ ತನ್ನನ್ನು ಕರೆದು ಗೌರವಿಸಿವೆ ಎಂದು ಪ್ರತಾಪ್​ ಹೇಳಿಕೊಂಡಿದ್ದ. ಅಲ್ಲದೆ, ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದ. ಆದರೆ, ಇದೆಲ್ಲವೂ ಸುಳ್ಳು ಎಂಬುದು ಇತ್ತೀಚೆಗೆ ಗೊತ್ತಾಗಿತ್ತು.


ಇದನ್ನೂ ಓದಿFact Check: ಡ್ರೋಣ್‌ ಬಾಯ್‌ ಪ್ರತಾಪ್ ಸುಳ್ಳಿಗೆ ಯಾಮಾರಿದ ಮೋದಿ; ಪ್ರತಾಪ್‌ನನ್ನು DRDOಗೆ ನೇಮಿಸಿದ್ರಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights