ಗುಮ್ಮಟ ನಗರಿಯಲ್ಲೊಂದು ಹಂದಿ ಗಾರ್ಡನ್- ಇಲ್ಲಿನ ಸಮಸ್ಯೆ ಯಾವುದು ಗೊತ್ತಾ?

ಇಲ್ಲೊಂದು ಉದ್ಯಾನವಿದೆ. ಈ ಹಿಂದೆ ಇಲ್ಲಿಗೆ ಕುಟುಂಬ ಸಮೇತ, ಸ್ನೇಹಿತರೊಡನೆ ಆಗಮಿಸುತ್ತಿದ್ದರು ಜನ. ಇಲ್ಲಿನ ಉದ್ಯಾನ ಪ್ರೇಮಿಗಳ ಪಾಲಿಗೂ ಹೇಳಿ ಮಾಡಿಸಿದಂತಿತ್ತು. ಎಲ್ಲಿ ನೋಡಿದರೂ ಸುಂದರ ಹರಿಸು ಹುಲ್ಲಿನ ಹಾಸು. ಪಕ್ಕದಲ್ಲಿಯೇ ಇರುವ ಕಂದಕದ ನೀರು ಈ ಉದ್ಯಾನದ ಸೌಂದರ್ಯವನ್ನು ಇಮ್ಮಡಿ ಗೊಳಿಸಿತ್ತು. ನಗರದ ಹೃದಯ ಭಾಗದಲ್ಲಿದ್ದ ಈ ಉದ್ಯಾನಕ್ಕೆ ಬರಲು ಎಂಥವರೂ ಖುಷಿ ಪಡುತ್ತಿದ್ದರು. ಬೇಸರ ಕಳೆಯಲು, ದಣಿದ ದೇಹಕ್ಕೆ ವಿಶ್ರಾಂತಿ ನೀಡಲು ಇಲ್ಲಿಗೆ ಬಂದು ಕುಳಿತು ಮತ್ತು ಅಲ್ಲಿಯೇ ಹುಲ್ಲು ಹಾಸಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು ಜನ.

         

ಬರದ ನಾಡು, ಬಿಸಿಲ ಬೀಡು ಎಂದು ಹೆಸರಾಗಿದ್ದರೂ ಇಲ್ಲಿಗೆ ಬರುತ್ತಿದ್ದ ವಿದೇಶಿ ಪ್ರವಾಸಿಗರೂ ಈ ಉದ್ಯಾನದಲ್ಲೊಂದು ಸುತ್ತು ಹೊಡೆದು, ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದರು. ಆದರೆ, ಇಂದು ಈ ಉದ್ಯಾನಕ್ಕೆ ಬರಲು ದಾರಿಯಿಲ್ಲ. ಬಂದರೂ ಇಲ್ಲಿ ನಿಲ್ಲಲು, ಕುಳಿತುಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ.

ಅಂದ ಹಾಗೆ ಇದಕ್ಕೆ ಇಲ್ಲಿನ ಜನ ಆಡುಭಾಷೆಯಲ್ಲಿ ಈ ಇಟ್ಟಿರುವ ಹೆಸರು ಹಂದಿ ಗಾರ್ಡನ್. ಇದು ಗುಮ್ಮಟ ನಗರಿ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಉದ್ಯಾನದ ಕಥೆ-ವ್ಯಥೆ. ಈ ಹಿಂದೆ ಈ ಉದ್ಯಾನವನ್ನು ನರಸಿಂಹ ದೇವರ ಗುಡಿ ಗಾರ್ಡನ್ ಎಂದು ಇಡೀ ವಿಜಯಪುರ ನಗರ ಮತ್ತು ಜಿಲ್ಲೆಯ ಜನ ಕರೆಯುತ್ತಿದ್ದರು. ಕುಡಿಯಲು ನೀರಿಲ್ಲದಾಗಲೂ ಇಲ್ಲಿನ ಉದ್ಯಾನ ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿತ್ತು. ಉದ್ಯಾನದ ಮಧ್ಯೆ ಇರುವ ರಸ್ತೆ, ಆ ರಸ್ತೆಯ ಇಕ್ಕೆಲಗಳಲ್ಲಿರುವ ಆಗಸದೆತ್ತರದ ಅಲಂಕಾರಿಕ ಗಿಡಗಳು ಈ ಗಾರ್ಡನ್ ಅಂದ ಮತ್ತು ಚೆಂದವನ್ನು ಹೆಚ್ಚಿಸಿದ್ದವು. ಆದರೆ, ಈಗ ಈ ಉದ್ಯಾನದ ಹೆಸರೆತ್ತಿದರೆ ಸಾಕು ಮೂಗು ಮುರಿಯುತ್ತಾರೆ. ಇಲ್ಲಿಗೆ ಬರಲು ಹಿಂಜರಿಯುತ್ತಾರೆ. ಬಂದರೂ ಕ್ಯಾಕರಿಸಿ ಉಗಿದು ಹೋಗುತ್ತಾರೆ. ಹೀಗಾಗಿದೆ ಈ ಉದ್ಯಾನದ ಪರಿಸ್ಥಿತಿ.
ಇದಕ್ಕೆಲ್ಲ ಕಾರಣ ಇಲ್ಲಿರುವ ಚರಂಡಿ ನೀರಿನ ಸಮಸ್ಯೆ.

ಇಡೀ ವಿಜಯಪುರ ಜಿಲ್ಲೆಯ ಜನ ತಲೆ ತಗ್ಗಿಸುವಂಥಹ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಿಗಳಿಂದ ನಿರ್ಮಿತವಾಗಿರುವ ಕೃತಕ ಸಮಸ್ಯೆ ಈ ಉದ್ಯಾನದ ಸುತ್ತಮುತ್ತಲಿನ ಜನರ ಪಾಲಿಕೆ ಶಾಪವಾಗಿ ಪರಿಣಿಸಿದೆ. ಇದು ವಿಜಯಪುರ ಜಿಲ್ಲಾಧಿಕಾರಿ ನಿವಾಸದ ಎದುರು ನರಸಿಂಹ ದೇವಸ್ಥಾನ ಹಾಗೂ ಗಗನ ಮಹಲ್ ಮಧ್ಯೆ ಇರುವ ಉದ್ಯಾನವನ. ಈಗ ಹೆಸರಿಗಷ್ಟೇ ಇದು ಉದ್ಯಾನವನ. ಇಲ್ಲಿಗೆ ಕಾಲಿಟ್ಟರೆ ಸಾಕು, ಯಾರೂ ನಿಲ್ಲಲು ಇಷ್ಟ ಪಡುವುದಿಲ್ಲ. ಯಾಕಂದ್ರೆ ಇಲ್ಲಿನ ಪರಿಸ್ಥಿತಿಯೇ ಹಾಗಿದೆ. 2017ರಲ್ಲಿ ಈ ಉದ್ಯಾನವನ ಸುಂದರ ಪರಿಸರದಿಂದ ಕೂಡಿತ್ತು. ಇಲ್ಲಿ ಜನಜಂಗುಳಿ ಅಡಿ ಇಡುತ್ತಿತ್ತು. ಆದರೆ, ವಿಹಾರಕ್ಕಾಗಿಯೂ ಜನ ಬರುತ್ತಿದ್ದರು. ಆದರೆ, ಇಲ್ಲಿ ಸಂಗ್ರಹವಾಗಿರುವ ಚರಂಡಿ ನೀರು ಜನರನ್ನು ದೂರವಿರುವಂತೆ ಮಾಡಿದೆ.

ಜಿಲ್ಲಾಧಿಕಾರಿ ನಿವಾಸದ ಎದುರಿದ್ದರೂ ಸಿಕ್ಕಿಲ್ಲ ಸಮಸ್ಯೆಗೆ ಮುಕ್ತಿ

ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಈ ಉದ್ಯಾನ ಜಿಲ್ಲಾಧಇಕಾರಿ ನಿವಾಸದ ಎದುರಿಗೆದೆ. ಇಲ್ಲಿಂದ ಅಣತಿ ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿಯೂ ಇದೆ. ವಿಜಯಪುರ ನಗರದ ಮುಖ್ಯ ಪ್ರದೇಶವಾದ ಬಸವೇಶ್ವರ ಚೌಕ್, ಗಾಂಧಿ ಚೌಕ್ ಮತ್ತು ಅಂಬೇಡ್ಕರ ಚೌಕ್ ಗಳೂ ಇವೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಆರಂಭವಾದ ಕಾಮಗಾರಿ ಇಷ್ಟೇಲ್ಲ ರಾದ್ಧಾಂಕ್ಕೆ ಕಾರಣವಾಗಿದೆ.

ಹಗಲಿರಲಿ ಅಥವಾ ರಾತ್ರಿಯಾಗಿರಲಿ. ಈ ಉದ್ಯಾನದ ಪಕ್ಕ ತಿರುಗಾಡಿದರೆ ಸಾಕು ದುರ್ನಾತ ಗಬ್ಬೆದ್ದು ನಾರುತ್ತದೆ. ಸಂಜೆಯಾದರೆ ಸಾಕು ಈ ಉದ್ಯಾನದ ಪಕ್ಕದಲ್ಲಿರುವ ವ್ಯಾಪಾರಿಗಳ ಅಂಗಡಿಗಳಿಗೆ ಧಾಳಿ ಮಾಡುವ ಸೊಳ್ಳೆಗಳು ಚಿಕೂನ್ ಗುನ್ಯಾ, ಮಲೇರಿಯಾ ಸೇರಿದಂತೆ ನಾನಾ ರೋಗಗಳನ್ನು ಪಸರಿಸುತ್ತಿವೆ. ಇದುವರೆಗೆ ಬತ್ತಿದ್ದ ಕಂದಕದಲ್ಲಿ ಸಾಕಷ್ಟು ಮುಂಜಾಗೃತೆ ವಹಿಸದೆ ಕೈಗೊಂಡ ಅಭಿವೃದ್ಧಿ ಕಾರ್ಯದಿಂದಾಗಿ ಕೊಳಚೆ ನೀರು ತುಂಬಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

2017ರಲ್ಲಿ ಇಲ್ಲಿ ತುಂಬಿ ತುಳುಕುತ್ತ ಜಿಲ್ಲಾಧಿಕಾರಿ ನಿವಾಸದ ಎದುರೇ ರಸ್ತೆಯ ಮೇಲೆ ಹರಿಯುತ್ತಿದ್ದ ಚರಂಡಿ ನೀರನ್ನು ಪರ್ಯಾಯ ಮಾರ್ಗದ ಮೂಲಕ ಹಳೆಯ ಕಾಲದ ಚರಂಡಿಗೆ ಜೋಡಿಸಲು ಕ್ರಮ ಕೈಗೊಳ್ಳಲಾಯಿತು. ಆದರೆ, ಮಹಾನಗರ ಪಾಲಿಕೆಯ ಈ ಉಪಾಯ ಹಳ್ಳ ಹಿಡಿಯಿತು. ಅಷ್ಟೇ ಅಲ್ಲ, ಈ ಉದ್ಯಾನದ ಒಂದು ಪಕ್ಕದಲ್ಲಿರುವ ನರಸಿಂಹ ಸಾಗರ ಅಂದರೆ ಗಗನ ಮಹಲ ಕಂದಕದಲ್ಲಿ ಮಳೆ ನೀರು ಮುಂಚೆಯಿಂದಲೂ ಸಂಗ್ರಹವಾಗುತ್ತಿದ್ದ ಕಾರಣ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಈ ಹಂದಿ ಗಾರ್ಡನ್ನ ಮತ್ತೋಂದು ಪಕ್ಕದ ಚರಂಡಿ ನೀರು ಸರಾಗವಾಗಿ ಹೋಗಲು ಕೆಬಿಜೆಎನ್ಎಲ್ ಅನುದಾನದಲ್ಲಿ ಸುಮಾರು ರೂ. 3. ಕೋ. ವೆಚ್ಚದಲ್ಲಿ ಸಿಮೆಂಟಿನಿಂದ ಚರಂಡಿ ನಿರ್ಮಿಸಲಾಯಿತು. ಆದರೆ, ಆ ಚರಂಡಿ ಇಲ್ಲಿ ಸಂಗ್ರಹವಾದ ನೀರಿಗಿಂತಲೂ ಮೇಲ್ಭಾಗದಲ್ಲಿದ್ದ ಕಾರಣ ಇದು ಅವೈಜ್ಞಾನಿಕವಾಯಿತು.

ಅಷ್ಟರಲ್ಲಿ ಅಂದಿನ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶೆಟ್ಟಿ ವಿಜಯಪುರದಿಂದ ವರ್ಗವಾಗಿ ಹೋದರು. ಈಗ ಮತ್ತೆ ಅದೇ ಹರ್ಷಾಶೆಟ್ಟಿ ಮತ್ತೆ ವಿಜಯಪುರಕ್ಕೆ ವರ್ಗವಾಗಿ ಬಂದಿದ್ದರೂ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಪ್ರದೇಶ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಬರುವುದರಿಂದ ಅಲ್ಲಿ ಅನುಮತಿ ಪಡೆಯಬೇಕಾದರೆ ಭಗೀರಥ ಪ್ರಯತ್ನವನ್ನೇ ಮಾಡಬೇಕು. ಆದರೂ, ಅನುಮತಿ ಸಿಗುವ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಪರಿಣಾಮ ಇಲ್ಲಿಗೆ ಬಂದರೆ ಸಾಕು ಇಲ್ಲಿನ ದುರ್ಗಂಧ ಬೀರುತ್ತಿದೆ. ಸಂಜೆಯಾದರೆ ಸಾಕು ಈ ಪ್ರದೇಶದ ಸುತ್ತಮುತ್ತ ಬರುವ ಜಿಲ್ಲಾಧಿಕಾರಿ ನಿವಾಸ, ಸರಸಿಂಹ ದೇವಸ್ಥಾನ, ಜೆಡಿಎಸ್ ಕಚೇರಿ, ಡ್ರೀಮಲ್ಯಾಂಡ್ ಥೇಟರ್ ಬಳಿ ಸೊಳ್ಳೆಗಳು ಸೈನಿಕರಂತೆ ಜನರ ಮೈಮೇಲೆ ಧಾಳಿ ನಡೆಸುತ್ತವೆ. ಪರಿಣಾಮ, ಇಲ್ಲಿನ ಜನ ನಾನಾ ಕಾಯಿಲೆಗಳಿಂದ ಬಳಲುವಂತಾಗಿದೆ. 2017ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ.ಪಾಟೀಲ ಅವರು ಕೆಬಿಜೆಎನ್ಎಲ್ ವತಿಯಿಂದ ನೀಡಿದ್ದ ರೂ. 3 ಕೋಟಿ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಹಂದಿ ಗಾರ್ಡನ್ ಹೆಸರೇಕೆ ಬಂತು?
ಈ ಮುಂಟೆ ಜನಜಂಗುಳಿಯಿಂದ ಕೂಡಿರುತ್ತಿದ್ದ ಈ ಗಾರ್ಡನ್ 2016ರ ವರೆಗೆ ಸುಂದರವಾಗಿಯೇ ಇತ್ತು. ಆದರೆ, ನಂತರ ಇಲ್ಲಿ ಕೊಳಚೆ ನೀರು ಸಂಗ್ರಹವಾಗ ತೊಡಗಿತು. ಆಗ, ಜನ ಇಲ್ಲಿಗೆ ಬರುವುದನ್ನು ಕಡಿಮೆ ಮಾಡಿದರು. ಪರಿಣಾಮ ಕೊಳಚೆ ಪ್ರದೇಶಗಳು ವರಾಹಗಳಿಗೆ ಹೇಳಿ ಮಾಡಿಸಿದ ಜಾಗವಾದ್ದರಿಂದ ಹಂದಿಗಳು ಇಲ್ಲಿಗೆ ಬಂದು ನೆಲೆಯೂರಿದವು. ಈಗ ಅಲ್ಲಿ ಹಂದಿಗಳು ಇಲ್ಲವಾದರೂ ಜನ ಈಗಲೂ ಇದನ್ನು ಹಂದಿ ಗಾರ್ಡನ್ ಎಂದು ಆಡು ಭಾಷೆಯಲ್ಲಿ ಕರೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ವಿಜಯಪುರ ನಗರದ ಮಧ್ಯ ಭಾಗದಲ್ಲಿಯೇ ಎಲ್ಲರ ಕಣ್ಣಿಗೆ ಕಾಣಿಸುವ ಈ ಹಂದಿ ಗಾರ್ಡನ್ ಸಮಸ್ಯೆಯನ್ನು ವಿಜಯಪುರ ಜಿಲ್ಲಾಡಳಿತ ಬಗೆಹರಿಸಲು ಸಾಧ್ಯವಾಗದಿದ್ದರೆ ಇನ್ನು ಉಳಿದ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಪರಿಹಾರ ಸಿಗಲಿದೆ ಎಂಬುದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights