ವಿದೇಶಿ ಹಕ್ಕಿಗಳಿಂದ ತುಂಬಿದೆ ಮಾಗಡಿ ಕೆರೆ : ಪಕ್ಷಿಪ್ರಿಯರ ಸೆಳೆಯುತ್ತಿದೆ ಈ ಕೆರೆ….

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆ ಬರೀ ನೀರು ತುಂಬಿಕೊಂಡಿಲ್ಲ. ಬದಲಾಗಿ ಆಕಾಶದತ್ತರಕ್ಕೆ ಹಾರೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ತೂಗೋ ತೊಟ್ಟಿಲಾಗೋ ಮೂಲಕ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ಬನ್ನಿ ಹಾಗಾದ್ರೆ ಭೂಲೋಕದ ಈ ಬಾನಾಡಿಗಳ ತಾಣವಾಗಿದೆ..

ಹೀಗೆ ಸ್ವಚ್ಛಂದವಾಗಿ ಹಾರಾಡ್ತಿರೋ ಹಕ್ಕಿಗಳು.ತಂಪಾದ ಕೆರೆಯಲ್ಲಿ ಈಜುತ್ತಿರೋ ಬಾನಾಡಿಗಳು.ಕಣ್ಣು ಹಾಯಿಸಿದಲ್ಲೆಲ್ಲಾ ಶ್ವೇತ ವರ್ಣದ ವಿವಿಧ ಪ್ರಭೇದದ ಪಕ್ಷಿಗಳು.

ಹೌದು ಈ ಬಾನಾಡಿಗಳ ಮನಮೋಹಕ ದೃಶ್ಯಗಳು ಕಂಡು ಬರೋದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ. ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತ ಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನು ಬೆರಗು ಮೂಡಿಸ್ತಾ ಇದೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ವಿಶಾಲವಾದ ಕೆರೆಯಿದೆ. ಗದಗದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರದಿಂದ 12 ಕಿಲೋ ಮೀಟರ್ ಅಂತರದಲ್ಲಿ 138 ಎಕರೆ ವಿಸ್ತಾರದ ಈ ಕೆರೆಯಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಢಾಕ್, ಟಿಬೆಟ್ ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ. ಇವುಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರ್ತಾಯಿದೆ.

ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಬಾತು ಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಬ್ರಾಹ್ಮೀಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲೀಟಲ್ ಕಾರ್ಮೊರಂಟ್ ಹೀಗೆ ಸುಮಾರು 16ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ವೆ. ಸದ್ಯ 3000 ಕ್ಕೂ ಅಧಿಕ ಪಕ್ಷಿಗಳು ಇಲ್ಲಿದ್ದು ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಪಕ್ಷಿಗಳು ಕಾಣಸಿಗುತ್ತವೆ.

ಇವುಗಳ ಈಜು, ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಪಕ್ಷಿ ಪ್ರಿಯರು, ಶಾಲಾ ಮಕ್ಕಳು ಪ್ರವಾಸಕ್ಕಾಗಿ ಆಗಮಿಸಿ ಈ ಪಕ್ಷಿಗಳನ್ನು ನೋಡ್ತಿದ್ದಾರೆ. ಈ ಪಕ್ಷಿಗಳು ಇಲ್ಲಿಗೆ ಬರೋದು ಗದಗ ಜಿಲ್ಲೆಯವರಿಗೆ ಹೆಮ್ಮೆಯ ವಿಷಯ ಜೊತೆಗೆ ವಿದೇಶಿ ಪಕ್ಷಿಗಳು ಸ್ವದೇಶದಲ್ಲಿ ನೋಡಲು ಸಿಗುತ್ತಿರುವ ಬಗ್ಗೆ ಸಂತಸ ಕೂಡಾ ಇದೆ ಅಂತಿದ್ದಾರೆ ಪಕ್ಷಿಪ್ರಿಯರು.


ಬೆಳಿಗ್ಗೆ ಸೂರ್ಯ ಉದಯಿಸುವ ವೇಳೆಗೆ ಈ ಪಕ್ಷಿಗಳು ಆಹಾರ ಆರಿಸಿಕೊಂಡ ಕೆರಯಿಂದ ಹಾರಿ ಹೋಗುತ್ತವೆ. ನೂರಾರು ಕಿಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ತಿಂದು ಮೂರು ಘಂಟೆಯಲ್ಲಿ ಮತ್ತೆ ಕೆರೆಗೆ ಬಂದು ಠಿಕಾಣಿ ಹೂಡುತ್ತವೆ. ಮತ್ತೆ ಸಂಜೆ ಸೂರ್ಯ ಮರೆಯಾಗುವ ಮುನ್ನ ಮತ್ತೊಮ್ಮೆ ಅಹಾರ ಹರಸಿ ಹೋಗಿ ಕಾಳು ಕಡಿ ತಿಂದು ಬರುತ್ತವೆ. ಹೀಗೇ ಅಹಾರ ಆರಿಸಿಕೊಂಡು ಗುಂಪು ಗುಂಪಾಗಿ ಹಾರಿ ಹೋಗುವ ಹಕ್ಕಿಗಳನ್ನು ನೋಡೋದೇ ಕಣ್ಣಿಗೆ ಹಬ್ಬ. ಹಕ್ಕಿಗಳು ಆಗಸದಲ್ಲಿ ಹಾರೋವಾಗ ಬಾನಿನಲ್ಲಿ ರಂಗವಲ್ಲಿ ಬಿಡಿಸಿದ ರೀತಿ ಕಾಣುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿದೇಶಿ ಅತಿಥಿಗಳು ಈ ಕೆರೆಗೆ ಬರ್ತಾ ಇದ್ದು ಈ ಪಕ್ಷಿಗಳಿಂದ್ಲೇ ಮಾಗಡಿ ಕೆರೆ ಪ್ರಸಿದ್ದಿಯಾಗಿದೆ. ಆದ್ರೆ ಇಂತಹ ವಿದೇಶಿ ಹಕ್ಕಿಗಳಿಗೆ ಆಶ್ರಯ‌ ನೀಡಿರೋ ಕೆರೆ ಮಾತ್ರ ಯಾವುದೇ ರೀತಿಯಿಂದ ಅಭಿವೃದ್ದಿಯಾಗಿಲ್ಲ. ಇನ್ನು ದೂರದ ಊರಿನಿಂದ ಪಕ್ಷಿಗಳನ್ನು ನೋಡಲಿಕ್ಕೆ ಬರುವವರಿಗೆ ಸರಿಯಾದ ವ್ಯವಸ್ಥೆಗಳು ಆಗಬೇಕು ಅನ್ನೋದು ನೋಡುಗರ ಅಭಿಪ್ರಾಯ.

ನವೆಂಬರ್ ತಿಂಗಳ ಕೊನೆಯ ವಾರದಿಂದ ಕೆರೆಗೆ ಆಗಮಿಸುವ ಈ ಪಕ್ಷಿಗಳು ಮಾರ್ಚ್ ಅಂತ್ಯಕ್ಕೆ ತಮ್ಮ ದೇಶದತ್ತ ಕಾಲು ಕೀಳುತ್ತವೆ. ಈ ಅವಧಿಯಲ್ಲಿ ತಮ್ಮ ಸಂತಾನ ವೃದ್ದಿಸಿಕೊಳ್ಳುತ್ತವೆ. ಹೀಗಾಗಿ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ ಈ ಕೆರೆ. ಆದ್ರೆ ಇದನ್ನೊಂದು ಪ್ರಸಿದ್ದ ಪಕ್ಷಿಧಾಮವನ್ನಾಗಿ ಅಭಿವೃದ್ದಿಗೊಳಿಸುವಲ್ಲಿ ಮಾತ್ರ ಸರ್ಕಾರ ಮುಂದಾಗದಿರೋದು ವಿಷಾದದ ಸಂಗತಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights