ಗೆಳೆಯನ ಮಡಿಲಲ್ಲಿ ಕೊನೆಯುಸಿರೆಳೆದ ಸ್ನೇಹಿತ: ಲಾಕ್‌ಡೌನ್‌ಗೆ ಮತ್ತೊಂದು ಬಲಿ

‌ ಜ್ವರ ಮತ್ತು ವಾಂತಿಯಿಂದ ಬಳಲುತ್ತಿರುವ 24 ವರ್ಷದ ಸ್ನೇಹಿತ ಅಮೃತ್‌ನನ್ನು ತನ್ನ ತೊಡೆಮೇಲೆ ಮಲಗಿಸಿಕೊಂಡು ಯಾಕೂಬ್ ಎಂಬ ಯುವಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ. ಆದರೆ ಕೊರೊನಾ ಭಯದಿಂದ ಸಹಾಯ ಮಾಡಲು ಯಾರು ಮುಂದಾಗುತ್ತಿಲ್ಲ. ಪ್ರಾಣ ಉಳಿಸಲು ಯಾರ ನೆರವು ಸಿಗದೆ ಯಾಕೂಬ್‌ನ ಸ್ನೇಹಿತ ತನ್ನ ತೊಡೆಯ ಮೆಲೆ ಅಸುನೀಗಿದ್ದಾರೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿನ ಈ ಹೃದಯವಿದ್ರಾವಕ ಘಟನೆಯನ್ನು ದಾರಿಹೋಗನೊಬ್ಬ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾನೆ. ಅಮೃತ್‌ ತನ್ನ ಸ್ನೇಹಿತರ ತೊಡೆಮೇಲೆ ಮೃತಪಟ್ಟಿದ್ದಾನೆಂಬ ಈ ಫೋಟೊ ವೈರಲ್‌ ಆಗಿದೆ. ಆದರೆ ಕೊನೆಗೂ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ತೀವ್ರ ಅನಾರೋಗ್ಯ, ಬಿಸಿಲಿನ ಝಳ ಮತ್ತು ಪ್ರಯಾಣದ ಆಯಾಸದಿಂದ ಅಮೃತ್‌ ಕೊನೆಯುಸಿರೆಳೆದಿದ್ದಾನೆ.

ಗುಜರಾತ್‌ನಿಂದ ತಮ್ಮ ಊರು ಉತ್ತರಪ್ರದೇಶಕ್ಕೆ ಹೊರಟ ವಲಸೆ ಕಾರ್ಮಿಕರ ಕಣ್ಣೀರ ಕತೆ ಇದು. ಸೂರತ್‌ನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಸ್ನೇಹಿತರಿಬ್ಬರು ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಇನ್ನು ಸಾಕು ಎಂದು ಎಲ್ಲರಂತೆ ತಮ್ಮ ಊರಿಗೆ ವಾಪಸ್‌ ಹೊರಟಿದ್ದಾರೆ. ತಲಾ 4000 ರೂ ನೀಡಿ ಈಗಾಗಲೇ ತುಂಬಿಹೋಗಿದ್ದ ಟ್ರಕ್‌ವೊಂದರಲ್ಲಿ ನಿಂತುಕೊಂಡು ಹೋಗಲು ಅವಕಾಶ ಪಡೆದ ಇವರು ಪ್ರಯಾಣ ಹೊರಟಿದ್ದಾರೆ. ಈ ಮಧ್ಯೆ ಅಮೃತ್‌ಗೆ ತೀವ್ರ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಪ್ರಯಾಣ ಮುಂದುವರೆಸಲಾಗದೇ ಮಧ್ಯಪ್ರದೇಶದ ಶಿವಪುರಿಯಲ್ಲಿ ಇಳಿದುಕೊಂಡಿದ್ದಾನೆ. ಆಗ ಆತನ ಜೊತೆಗೆ ನಿಂತ ಏಕೈಕ ವ್ಯಕ್ತಿ ಆತನ ಸ್ನೇಹಿತ ಯಾಕೂಬ್‌.

ವೈರಲ್ ಆಗಿರುವ‌ ಚಿತ್ರದಲ್ಲಿ ಯಾಕೂಬ್ ತನ್ನ ಸ್ನೇಹಿತ ಅಮೃತ್‌ನನ್ನು ತೊಡಮೇಲೆ ಮಲಗಿಸಿಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದಾನೆ. ಯಾರೂ ಅತ್ತ ಸುಳಿಯಲಿಲ್ಲ. ಅಮೃತ್‌ ತೀವ್ರ ಜ್ವರ ಮತ್ತು ವಾಂತಿಯಿಂದ ಸೊರಗಿದ್ದಾನೆ. ಆತನನ್ನು ಶಿವಪುರಿಯ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿದಿಲ್ಲ. ಆತನ ಮತ್ತು ಯಾಕೂಬ್‌ ಇಬ್ಬರ ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಕಳಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ. ಯಾಕೂಬ್‌ನನ್ನು ಶಿವಪುರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಸರ್ಜನ್ ಪಿ.ಕೆ ಖಾರೆ ತಿಳಿಸಿದ್ದಾರೆ.

ಲಕ್ಷಾಂತರ ವಲಸೆ ಕಾರ್ಮಿಕರು ತಾವಿದ್ದ ಸ್ಥಳ ತೊರೆದು ತಮ್ಮ ಮೂಲ ಸ್ಥಳಗಳಿಗೆ ನಡೆದುಕೊಂಡೇ ತೆರಳುತ್ತಿರುವ ಹಲವಾರು ಚಿತ್ರಗಳು ದಿನನಿತ್ಯ ಕಾಣಸಿಗುತ್ತಿವೆ. ಈಗಾಗಲೇ ಹಲವಾರು ಮಂದಿ ಈ ನಡಿಗೆಯಲ್ಲಿ ಪ್ರಾಣತೆತ್ತಿದ್ದಾರೆ. ಅವರ ಗುಂಪಿಗೆ ಅಮೃತ್‌ ಹೊಸ ಸೇರ್ಪಡೆಯಾಗಿದ್ದಾನೆ. ಇವರೆಲ್ಲರಿಗೆ ಸೂಕ್ತ ಪ್ರಯಾಣ ವ್ಯವಸ್ಥೆ ಮಾಡಲು ಆಳುವ ಸರ್ಕಾರಗಳು ಸಂರ್ಪೂಣವಾಗಿ ವಿಫಲವಾಗಿವೆ.

ಈ ಕುರಿತು ಸುಪ್ರೀಂ ಕೋರ್ಟ್‌‌ನಲ್ಲಿ ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಿ “ನಡೆಯುತ್ತಿರುವ ವಲಸೆ ಕಾರ್ಮಿರಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕು” ಎಂದು ವಾದಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ ಮಾತ್ರ ಯಾರು ನಡೆಯುತ್ತಿದ್ದಾರೆ, ಯಾರು ನಡೆಯುತ್ತಿಲ್ಲ ಎಂದು ತಿಳಿಯಲು ಮತ್ತು ತಡೆಯಲು ಸಾಧ್ಯವಿಲ್ಲ. ಈ ಕುರಿತು ಸರ್ಕಾರಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅದನ್ನು ರಾಜ್ಯಗಳು ನಿರ್ಧರಿಸಲಿ ಎಂದು ಹೇಳಿ ಕೈತೊಳೆದಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights