ಚೀನಾದೊಂದಿಗೆ ಹಿಂಸಾತ್ಮಕ ಸಂಘರ್ಷ ಭಾರತೀಯ ಸೈನ್ಯದ ಅಧಿಕಾರಿ, 2 ಸೈನಿಕರ ಸಾವು
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಮಿಟಿಟರಿಯೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ದೇಶಗಳ ಗಡಿ ವಿವಾದದ ಬಗೆಗಿನ ಹಲವು ದಿನಗಳಿಂದ ಸೃಷ್ಟಿಯಾಗಿರುವ ಉದ್ವಿಗ್ನತೆಯಿಂದಾಗಿ ಸೋಮವಾರ ರಾತ್ರಿ ಲಡಾಖ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಭಾರತೀಯ ಮತ್ತು ಚೀನಾದ ಮಿಲಿಟರಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ.
“ಗಾಲ್ವಾನ್ ಕಣಿವೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ತಿಕ್ಕಾಟ ಉಲ್ಬಣಗೊಳ್ಳುತ್ತಿದ್ದು, ನಿನ್ನೆ ರಾತ್ರಿ ಸಾವುನೋವುಗಳೊಂದಿಗೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ. ಭಾರತೀಯ ಸೈನ್ಯದ ಅಧಿಕಾರಿ ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.” ಎರಡೂ ಕಡೆಯ ಹಿರಿಯ ಮಿಲಿಟರಿ ಅಧಿಕಾರಿಗಳು ಪ್ರಸ್ತುತ ಸ್ಥಳದಲ್ಲಿ ಸಭೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿ ಎಂದು ಭಾರತೀಯ ಸೇನೆಯ ವಕ್ತಾರರು ಹೇಳಿದ್ದಾರೆ.

ಪ್ಯಾಂಗೊಂಗ್ ತ್ಸೊ ಸರೋವರದ ಬಳಿ ಸಂಭವಿಸಿದ ಹಿಂಸಾತ್ಮಕ ಘರ್ಷಣೆಯ ನಂತರ ಮೇ 5 ರಿಂದ ಭಾರತೀಯ ಮತ್ತು ಚೀನಾದ ಸೈನಿಕರು ರಾಷ್ಟ್ರಗಳ ಗಡಿಯಲ್ಲಿ ನಿರತರಾಗಿದ್ದಾರೆ.
ಭಾರತವು ಪಂಗೊಂಗ್ ತ್ಸೋ ಸರೋವರದ ಸುತ್ತ ಫಿಂಗರ್ ಪ್ರದೇಶದಲ್ಲಿ ಪ್ರಮುಖ ರಸ್ತೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ. ಜೊತೆಗೆ ಜೊತೆಗೆ ಗಾಲ್ವಾನ್ ಕಣಿವೆಯ ಡಾರ್ಬುಕ್-ಶಾಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲು ಯೋಜಿಸಿದೆ. ಈ ರಸ್ತೆಗಳ ನಿರ್ಮಾಣಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದು ಗಡಿಯಲ್ಲಿ ಎರಡೂ ರಾಷ್ಟ್ರಗಳ ಘರ್ಷಣೆಗೆ ಪ್ರಚೋದಿಸುತ್ತಿದೆ.
ಭಾರತಕ್ಕೆ ಗಸ್ತು ತಿರುಗಲು ಪಾಂಗೊಂಗ್ ತ್ಸೋದಲ್ಲಿನ ಫಿಂಗರ್ ಪ್ರದೇಶದಲ್ಲಿನ ರಸ್ತೆ ಅತ್ಯಗತ್ಯವೆಂದು ಪರಿಗಣಿಸಿಲಾಗಿದೆ. ಅಲ್ಲದೆ, ಚೀನಾದ ವಿರೋಧವನ್ನು ಗಮನದಲ್ಲಿಟ್ಟುಕೊಂಡು ಪೂರ್ವ ಲಡಾಕ್‌ನಲ್ಲಿ ಯಾವುದೇ ಗಡಿ ಮೂಲಸೌಕರ್ಯ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭಾರತ ಈಗಾಗಲೇ ನಿರ್ಧರಿಸಿದೆ.

ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಮತ್ತು ಮಲಿಟರಿ ಮಟ್ಟದ ಸಭೆಗಳಲ್ಲಿ ಒಮ್ಮತದ ಅಭಿಪ್ರಾಯವನ್ನು ಹೊಂದಿದ್ದು, ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಸರಾಗಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದಾರೆ.
ಮೇ 5 ಮತ್ತು 6 ರಂದು ಚೈನೀಸ್ ಮತ್ತು ಭಾರತದ ಸುಮಾರು 250 ಸೈನಿಕರು ಮುಖಾಮುಖಿಯಾಗಿ ಹಿಂಸಾತ್ಮಕ ಘರ್ಷಣೆ ನಡೆಸಿದ ನಂತರ ಈ ಪ್ರದೇಶದ ಪರಿಸ್ಥಿತಿ ಹದಗೆಟ್ಟಿತು. ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ನಂತರ ಪಾಂಗೊಂಗ್ ತ್ಸೊದಲ್ಲಿ ಇದು ಉಲ್ಬಣಗೊಂಡಿದೆ.
ಭಾರತ-ಚೀನಾ ರಾಷ್ಟ್ರಗಳ ಗಡಿ ವಿವಾದವು 3,488 ಕಿ.ಮೀ ಉದ್ದದ ಎಲ್‌ಎಸಿಯನ್ನು ಒಳಗೊಂಡಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಳ್ಳುತ್ತಿದೆ, ಭಾರತವು ಚೀನಾದ ಹೇಳಿಕೆಯನ್ನು ತಿರಸ್ಕರಿಸಿದೆ.

