ಆಕ್ಸಿಜನ್ ಸಾವುಗಳ ಬಗ್ಗೆ ಕೇಂದ್ರ ಸರ್ಕಾರ ಅಂಕಿಅಂಶವನ್ನೇ ಕೇಳಿಲ್ಲ: ಛತ್ತಿಸ್‌ಘಡ ಆರೋಗ್ಯ ಸಚಿವ

ದೇಶಾದ್ಯಂತ ಅಪ್ಪಳಿದ ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದರ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಗಳಿಂದ ಅಂಕಿಅಂಶಗಳನ್ನೇ ಕೇಳಿಲ್ಲ ಎಂದು ಛತ್ತಿಸ್‌ಘಡ ಆರೋಗ್ಯ ಸಚಿವ ಟಿಎಸ್‌ ಸಿಂಗ್‌ ಡಿಯೋ ಹೇಳಿದ್ದಾರೆ.

ಆಮ್ಲಜನಕ ನಿರ್ವಹಣೆಯಲ್ಲಿ ಛತ್ತೀಸ್‌ಘಡವು ಪ್ರಮುಖ ರಾಜ್ಯವಾಗಿದೆ. 2ನೇ ಅಲೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ರೋಗಿಗಳು ಬಲಿಯಾಗಿದ್ದಾರೆಯೇ ಎಂದು ತಿಳಿಯಲು ರಾಜ್ಯ ಸರ್ಕಾರವು ದಾಖಲಾದ ಸಾವುಗಳ ಮರು ಲೆಕ್ಕಪರಿಶೋಧನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಜುಲೈ 20 ರಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಆಕ್ಸಿಜನ್‌ ಕೊರತೆಯ ಸಾವುಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿಯನ್ನು ನೀಡಿಲ್ಲ ಎಂದು ಹೇಳಿತ್ತು. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಂಗ್‌ ಡಿಯೋ, “ಭಾರತ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ನಿರಂತರ ಮಾಹಿತಿ ನೀಡಲಾಗಿದೆ. ಆದಾಗ್ಯೂ, ಅವರು ಆಮ್ಲಜನಕದ ಕೊರತೆಯಿಂದ ಉಂಟಾಗುವ ಸಾವುಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕೇಳಲಿಲ್ಲ. ಆದರೆ, ಈಗ ಅವರು, ರಾಜ್ಯಗಳು ಸರಿಯಾದ ಡೇಟಾ ನೀಡಲ್ಲ ಎಂದು ಹೇಳುತ್ತಿದ್ದಾರೆಎ. ಇದು ಅವರ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಹೇಳುತ್ತಿರುವ ದುರುದ್ದೇಶದ ಹೇಳಿಕೆಯಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್‌ಗಾಗಿ ಸೆಕ್ಸ್: ತನ್ನೊಂದಿಗೆ ಮಲಗಿದರೆ ಆಕ್ಸಿಜನ್‌ ಸಿಲಿಂಡರ್‌ ನೀಡುತ್ತೇನೆ ಎಂದ ದುಷ್ಟ; ನೆಟ್ಟಿಗರ ಆಕ್ರೋಶ

ಛತ್ತಿಸ್‌ಘಡದಲ್ಲಿ ಆಕ್ಸಿಜನ್‌ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆ. ಹೀಗಾಗಿ ನಾವು ಆಕ್ಸಿಜನ್‌ ಕೊರತೆಗೆ ಸಂಬಂಧಿಸಿದ ಸಾವುಗಳನ್ನು ದಾಖಲಿಸಿಲ್ಲ. ಆದರೆ, ಈ ಬಗ್ಗೆ ನಾವು ಮೊಂಡುತನವನ್ನು ಪ್ರದರ್ಶಿಸುವುದಿಲ್ಲ. ನಾವು ಆಕ್ಸಿಜನ್‌ ಸಾವುಗಳ ಬಗ್ಗೆ ಜನರು ಮತ್ತು ಇತರ ಪಾಲುದಾರರಲ್ಲಿ ಮಾಹಿತಿ ಕೇಳಲು ಸಿದ್ದರಿದ್ದೇವೆ. ಆಕ್ಸಿಜನ್‌ ಸಂಬಂಧಿ ಸಾವುಗಳ ಬಗ್ಗೆ ಮರು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

“ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಕೊರೊನಾ ರೋಗಿಯು ಸಾವನ್ನಪ್ಪಿದ್ದರೆ, ಆ ಬಗ್ಗೆ ಮಾಹಿತಿ ನೀಡುವಂತೆ ಎನ್‌ಜಿಒಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜ್ಯದ ಪತ್ರಕರ್ತರಿಗೆ ನಾವು ಮನವಿ ಮಾಡುತ್ತೇವೆ. ಪಾರದರ್ಶಕಯು ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರ್ಕಾರದ ಒಂದು ಅಂಶವಾಗಿದೆ. ಪಾರದರ್ಶಕತೆಗೆ ಕಾಂಗ್ರೆಸ್‌ ಬದ್ದವಾಗಿದೆ” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

“ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೂ, ಕೆಲವು ದೂರುಗಳನ್ನು ಪಡೆಯಲಾಗಿದೆ. ಹಾಗಾಗಿ, ಎಲ್ಲಾ ಅನುಮಾನಗಳನ್ನು ಹೋಗಲಾಡಿಸಲು ನಾವು ಮತ್ತೆ ಸಾವುಗಳ ಅಂಕಿಅಂಶಗಳನ್ನು ಮರು ಲೆಕ್ಕಪರಿಶೋಧನೆ ಮಾಡುತ್ತಿದ್ದೇವೆ”ಎಂದು ಸಿಂಗ್ ಡಿಯೋ ತಿಳಿಸಿದ್ದಾರೆ.

ಇದನ್ನೂ ಓದಿ: ‘ಚಾಮರಾಜನಗರ ದುರಂತಕ್ಕೆ ಆಕ್ಸಿಜನ್ ಕಾರಣವಾಗಿದ್ದರೆ ಸರ್ಕಾರವೇ ನೇರ ಹೊಣೆ’- ಸಿ ಟಿ ರವಿ

ದೇಶಾದ್ಯಂತ ಇದೇ ರೀತಿಯ ಸಾವುಗಳ ಲೆಕ್ಕಪರಿಶೋಧನೆ ನಡೆಸಬೇಕೆಂದು ಕೇಂದ್ರವನ್ನು ಸಿಂಗ್ ಡಿಯೋ ಒತ್ತಾಯಿಸಿದ್ದಾರೆ.

“ಯಾವುದೇ ಪುರಾವೆಗಳಿಲ್ಲದೆ ಲಸಿಕೆ ವ್ಯರ್ಥವಾಗಿದೆಯೆಂದು ಕೇಂದ್ರದ ಸರ್ಕಾರವು ಛತ್ತಿಸ್‌ಘಡದ ಮೇಲೆ ಆರೋಪ ಮಾಡುತ್ತಿದೆ. ಈ ರೀತಿಯ ನಡೆ ಅನುಸರಿಸುತ್ತಿರುವ ಕೇಂದ್ರವು ದೇಶಾದ್ಯಂತ ತಮ್ಮ ತಂಡಗಳನ್ನು ಕಳುಹಿಸುವ ಮೂಲಕ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲವೇ?” ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನಾ ಸಾಮರ್ಥ್ಯ 388.87 ಮೆಟ್ರಿಕ್ ಟನ್ ಆಗಿದ್ದು, ಏಪ್ರಿಲ್ 26 ರಂದು 180 ಮೆ.ಟನ್ ಗರಿಷ್ಠ ಬಳಕೆಯಾಗಿದೆ ಎಂದು ಸಿಂಗ್ ಡಿಯೋ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲವೇ? ಸುಳ್ಳು ಹೇಳಿದ ಕೇಂದ್ರ ಸರ್ಕಾರ; ಸಾಕ್ಷ್ಯಗಳು ಹೀಗಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights