ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲವೇ? ಸುಳ್ಳು ಹೇಳಿದ ಕೇಂದ್ರ ಸರ್ಕಾರ; ಸಾಕ್ಷ್ಯಗಳು ಹೀಗಿವೆ!

ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಗ್ಗೆ ನಿರ್ದಿಷ್ಟವಾದ ವರದಿಯನ್ನೂ ಮಾಡಿಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ.

ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಒಂದು ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು, ಆರೋಗ್ಯವು ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದೆ. ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರಗಳು ಕಾಳಜಿವಹಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ, “2ನೇ ಅಲೆಯಲ್ಲಿ ಸಾವುಗಳ ಬಗ್ಗೆ ವರದಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ನೀಡಿತ್ತು. ಎಲ್ಲಾ ರಾಜ್ಯಗಳು/ಯುಟಿಗಳು ಸಚಿವಾಲಯಕ್ಕೆ ಸಾವುಗಳ ಬಗ್ಗೆ ವರದಿಯನ್ನು ನೀಡಿವೆ. ಆದರೆ, ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳ ಬಗ್ಗೆ ನಿರ್ದಿಷ್ಟ ವರದಿಯಿಲ್ಲ. ಹಾಗಾಗಿ ಆಮ್ಲಜನಕ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ” ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, COVID-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ. ಹಾಗಿದ್ದ ಮೇಲೆ, ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಲಿಲ್ಲವೇ?

ಆಸ್ಪತ್ರೆಗಳು ಆಕ್ಸಿಜನ್ ಶಾರ್ಟೇಜ್ ಅನ್ನು ಒಂದು ಕಾರಣವೆಂದು ಉಲ್ಲೇಖಿಸಿವೆ:

ಚಾಮರಾಜನಗರ ಜಿಲ್ಲಾಸ್ಪತ್ರೆ, ಕರ್ನಾಟಕ: ಮೇ 2 ರಂದು ರಾತ್ರಿ 10.30 ರಿಂದ ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಕಾರಣ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕರ ಸಮಿತಿಯನ್ನು ರಚಿಸಿತ್ತು. ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಎ ಎಸ್ ವೇಣುಗೋಪಾಲ್ ಗೌಡ ನೇತೃತ್ವದ ಸಮಿತಿಯು, ಆಕ್ಸಿಜನ್‌ ಕೊರತೆಯಿಂದಲೇ ಈ ಸಾವುಗಳು ಸಂಭವಿಸಿವೆ ಎಂದು ಪ್ರಥಮಿಕ ವರದಿಯಲ್ಲಿ ದೃಢಪಡಿಸಿತ್ತು.

ಇದನ್ನೂ ಓದಿ:  ಚಾಮರಾಜನಗರದಲ್ಲಿ 24 ಸಾವುಗಳ ಹಿಂದೆ ಆಮ್ಲಜನಕದ ಕೊರತೆ ಇದೆ ಎಂದು ಖಚಿತಪಡಿಸಿದ ವರದಿ!

ಬಾತ್ರಾ ಆಸ್ಪತ್ರೆ, ದೆಹಲಿ: ಆಮ್ಲಜನಕದ ಕೊರತೆಯಿಂದಾಗಿ ತಮ್ಮ ಆಸ್ಪತ್ರೆಯಲ್ಲಿ 11 ರೋಗಿಗಳು ಮತ್ತು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ದೆಹಲಿಯ ಬಾತ್ರಾ ಆಸ್ಪತ್ರೆ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಆಸ್ಪತ್ರೆಯಲ್ಲಿ ಭಾರೀ ಪ್ರಮಾಣದ ಆಮ್ಲಜನಕ ಕೊರತೆಯಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಂಶು ಬಂಕಟಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಆಕ್ಸಿಜನ್‌ ಕೊರತೆಯಿಂದಾಗಿ ಅವರು ರೋಗಿಗಳನ್ನು ಕಳೆದುಕೊಂಡರು.

ಜೈಪುರ ಗೋಲ್ಡನ್ ಆಸ್ಪತ್ರೆ, ದೆಹಲಿ: ಆಮ್ಲಜನಕದ ಕೊರತೆಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ ಎಂದು ಈ ಆಸ್ಪತ್ರೆ ಕೂಡ ಏಪ್ರಿಲ್ 24 ರಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

ಏತನ್ಮಧ್ಯೆ, ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ತನಿಖೆ ನಡೆಸಲು ದೆಹಲಿ ಸರ್ಕಾರ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಜೂನ್ 4 ರಂದು ವರದಿ ಮಾಡಿದೆ.

ನಂತರ, ಸಮಿತಿಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಲಿಲ್ಲ ಎಂದು ಸಿಸೋಡಿಯಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ದೆಹಲಿ ಘಟಕವು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಇದೇ ರೀತಿಯ ಸಮಿತಿಯನ್ನು ರಚಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಲೇಖನವೊಂದು ಉಲ್ಲೇಖಿಸಿದೆ.

ಆನಂದ್ ಆಸ್ಪತ್ರೆ ಮತ್ತು ಉತ್ತರ ಪ್ರದೇಶದ ಕೆಎಂಸಿ ಆಸ್ಪತ್ರೆ: ಏಪ್ರಿಲ್ 27 ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಕನಿಷ್ಠ ಏಳು ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ ಮೂವರು ಆನಂದ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಉಳಿದವರು ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆಸ್ಪತ್ರೆಯ ಅಧಿಕಾರಿಗಳು ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಸಾವುಗಳನ್ನು ದೃಢಪಡಿಸಿದ್ದರು. ಆದರೆ ಮೀರತ್‌ನ ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್ ಅವರು ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಸಾವುಗಳ ಬಗ್ಗೆ ಆಸ್ಪತ್ರೆಗಳು ಯಾವುದೇ ವರದಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್‌ಗಾಗಿ ಸೆಕ್ಸ್: ತನ್ನೊಂದಿಗೆ ಮಲಗಿದರೆ ಆಕ್ಸಿಜನ್‌ ಸಿಲಿಂಡರ್‌ ನೀಡುತ್ತೇನೆ ಎಂದ ದುಷ್ಟ; ನೆಟ್ಟಿಗರ ಆಕ್ರೋಶ

ನೀಲಕಂಠ ಆಸ್ಪತ್ರೆ, ಪಂಜಾಬ್: ವೈದ್ಯಕೀಯ ಆಮ್ಲಜನಕದ ಪೂರೈಕೆ ಕೊರತೆಯಿಂದಾಗಿ ಅಮೃತಸರದ ನೀಲಕಂಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಘಟನೆಗೆ ಆಸ್ಪತ್ರೆ ಅಧಿಕಾರಿಗಳು ಜಿಲ್ಲಾಡಳಿತವನ್ನು ಹೊಣೆಗಾರರನ್ನಾಗಿ ಮಾಡಿದ್ದರು. ಹೀಗಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಆದೇಶದ ಮೇರೆಗೆ ಇಬ್ಬರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು.

ರಾಜಸ್ಥಾನದ ಹೊಸ ವೈದ್ಯಕೀಯ ಕಾಲೇಜು ಆಸ್ಪತ್ರೆ: ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜಸ್ಥಾನದ ಕೋಟಾದ ಹೊಸ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧೀಕ್ಷಕ ನಿಲೇಶ್ ಜೈನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಏಪ್ರಿಲ್ 21 ರಂದು ವರದಿ ಮಾಡಿದೆ.

ಹರಿಯಾಣದ ಸೋನಿ ಬರ್ನ್ ಆಸ್ಪತ್ರೆ: ಹರಿಯಾಣದ ಹಿಸಾರ್‌ನ ಸೋನಿ ಬರ್ನ್ ಆಸ್ಪತ್ರೆಯಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಐದು ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಸಾವುಗಳು ಆಕ್ಸಿಜನ್‌ ಕೊರತೆಯಿಂದಲೇ ಸಂಭವಿಸಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಆಮ್ಲಜನಕದ ಪೂರೈಕೆಯ ಕೊರತೆಯ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಆದರೆ “ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಸೋನಿ ಆರೋಪಗಳನ್ನು ನಿರಾಕರಿಸಿದ್ದರು. ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

ಆಕ್ಸಿಜನ್ ಕೊರತೆಯಿಂದ ಸಂಭವಿಸದ ಸಾವುಗಳ ಬಗ್ಗೆ ಸ್ವಯಂಸೇವಾ ಸಂಸ್ಥೆಗಳ ಡೇಟಾಬೇಸ್: 

ಆಮ್ಲಜನಕದ ಕೊರತೆ ಅಥವಾ ಆಮ್ಲಜನಕದ ದೊರೆಯದೇ ಇದ್ದಿದ್ದರಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆಯ ಡೇಟಾಬೇಸ್ ಅನ್ನು ಸ್ವಯಂಸೇವಕರು, ಸಂಶೋಧಕರು, ವಕೀಲರು, ಜರ್ನಲಿಸ್ಟ್‌ಗಳು, ವಿದ್ಯಾರ್ಥಿಗಳು ಕಲೆಹಾಕಿದ್ದಾರೆ.

ಕೊನೆಯದಾಗಿ ಮೇ 27 ರಂದು ನವೀಕರಿಸಿದ ಡೇಟಾಬೇಸ್ ಪ್ರಕಾರ, ಆಮ್ಲಜನಕದ ಕೊರತೆಯಿಂದಾಗಿ ದೇಶದಲ್ಲಿ 619 ಸಾವುಗಳು ದಾಖಲಾಗಿವೆ.

ಇದನ್ನೂ ಓದಿ: ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ : ಆಂಧ್ರ ಆಸ್ಪತ್ರೆಯಲ್ಲಿ 11 ಕೋವಿಡ್ ರೋಗಿಗಳು ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights