ಜಸ್ಟೀಸ್‌ ಲೋಯಾ ಸಾವಿನ ಮರುತನಿಖೆಗೆ ಸೂಚಿಸಿದ ವ್ಯಕ್ತಿಯೊಬ್ಬ ಕೊರಳಿಗೆ ಹಾಕಿದ್ದ ಭಿತ್ತಿಫಲಕ

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಿಂದ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರ ಕೆಲಸ ಮುಗಿಸಿ ಹೊರಬರುವಾಗ ಅವರೆದುರು ಅಚ್ಚರಿಯೊಂದು ಕಾದಿತ್ತು.

ಅದೆಂದರೆ “ಜಸ್ಟೀಸ್‌ ಲೋಯಾ ಸಾವಿನ ಮರುತನಿಖೆ ನಡೆಸಿ. ಸತ್ಯಮೇವ ಜಯತೆ, #ನ್ಯಾಯ” ಎಂದು ಆಂಗ್ಲ ಅಕ್ಷರಗಳಲ್ಲಿ ಬರೆದ ಭಿತ್ತಿಫಲಕವೊಂದು ಎಲ್ಲರ ಗಮನ ಸೆಳೆಯಿತು.

ನಡುವಯಸ್ಸಿನ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಕೊರಳಿಗೆ ಈ ಬೇಡಿಕೆ ಫಲಕವನ್ನು ನೇತುಹಾಕಿಕೊಂಡು ಮೌನವಾಗಿ ನಿಲ್ಲುವ ಮೂಲಕ, ಅಲ್ಲಿ ಬರುವ ಜಡ್ಜ್‌ಗಳು ಹಾಗೂ ಕಕ್ಷಿದಾರರಿಗೆ ಈ ವಿಷಯ ಮುಟ್ಟಿಸಲು ಪ್ರಯತ್ನಿಸುತ್ತಿದ್ದರು.

ಯಾರು ಈ ಜಸ್ಟೀಸ್‌ ಲೋಯಾ?

ಬ್ರಜ್‍ಗೋಪಾಲ್ ಹರಕಿಷನ್ ಲೋಯಾ ಸಿಬಿಐ ಕೋರ್ಟಿನ ಜಡ್ಜ್. ಗುಜರಾತಿನ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಕೇಸಿನ ವಿಚಾರಣೆ ನಡೆಸುತ್ತಿದ್ದವರು. ಇವರು 2014ರ ಡಿಸೆಂಬರ್ 1ರಂದು ಸಂಬಂಧಿಕರ ಮದುವೆಗೆಂದು ನಾಗಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅನುಮಾನಾಸ್ಪ ರೀತಿಯಲ್ಲಿ ‘ಹೃದಯಾಘಾತ’ದಿಂದ ಸಾವನ್ನಪ್ಪಿದರು. ಅವರ ಅಂತ್ಯಕ್ರಿಯೆಗಳನ್ನೂ ಕೂಡ ತರಾತುರಿಯಲ್ಲಿ ಮುಗಿಸಲಾಗಿತ್ತು.

ಇದಾದ ಕೆಲದಿನಗಳಲ್ಲಿ ಜ.ಲೋಯಾ ಕುಟುಂಬದವರು ಸ್ಫೋಟಕ ವಿಷಯಗಳನ್ನು ಬಿಚ್ಚಿಟ್ಟರು. ಅವರ ಪ್ರಕಾರ ‘ಈ ಕೇಸಿನಲ್ಲಿ ತಮಗೆ ಅನುಕೂಲಕರ ತೀರ್ಪು ನೀಡುವಂತೆ ಲೋಯಾ ಅವರ ಮೇಲೆ ಭಾರೀ ಒತ್ತಡ ಇತ್ತು. ಅದಕ್ಕಾಗಿ ನೂರು ಕೋಟಿ ರೂಪಾಯಿಗಳ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ನ್ಯಾಯಪ್ರಜ್ಞೆಗೆ ಹೆಸರಾಗಿದ್ದ ಲೋಯಾ ಅವರು ಇಂಥ ಆಮಿಷವನ್ನು ತಿರಸ್ಕರಿಸಿದರು. ಬೆದರಿಕೆಗೆ ಅವರು ಸೊಪ್ಪು ಹಾಕಲಿಲ್ಲ. ಪರಿಣಾಮವಾಗಿಯೇ ಅವರನ್ನು ಕೊಲೆ ಮಾಡಲಾಗಿದೆ’ ಎಂಬ ಸ್ಫೋಟಕ ಸುದ್ದಿಗಳನ್ನು ಹೊರಹಾಕಿದ್ದರು.

ಇಷ್ಟಕ್ಕೂ ಈ ಕೇಸಿನಲ್ಲಿ ಆರೋಪಿ ಸ್ಥಾನದಲ್ಲಿದ್ದದ್ದು ಯಾರಂತೀರಿ? ಪ್ರಧಾನಿ ಮೋದಿಯವರಿಗೆ ಪರಮಾಪ್ತ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಹಾಲಿ ಭಾರತದ ಗೃಹ ಸಚಿವ ಅಮಿತ್ ಶಾ. ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಕೇಸಿನಲ್ಲಿ 2010ರಲ್ಲಿ ಅಮಿತ್ ಶಾ 3 ತಿಂಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಈ ಕೇಸಿನಲ್ಲಿ ಶಾ ಕೈವಾಡದ ಬಗ್ಗೆ ಅನೇಕ ಸಾಕ್ಷ್ಯಾಧಾರಗಳನ್ನು ಸುಪ್ರಿಂ ಕೋರ್ಟ್ ಪರಿಗಣಿಸಿತ್ತು. ಸಾಕ್ಷ್ಯನಾಶ ಮಾಡುವ ಸಾಧ್ಯತೆಯನ್ನು ಮನಗಂಡು ಇವರನ್ನು ಎರಡು ವರ್ಷಗಳ ಕಾಲ ಗುಜರಾತ್‍ನಿಂದ ಗಡಿಪಾರು ಮಾಡಿತ್ತು. ಅಂದಹಾಗೆ ಆಗ ಅಮಿತ್ ಶಾ ಗುಜರಾತ್‍ನ ಗೃಹಮಂತ್ರಿಯಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಈ ಕೇಸಿನಲ್ಲಿ ಅಮಿತ್ ಶಾ ಜೊತೆ ಡಿಐಜಿ ವಂಜಾರ ಒಳಗೊಂಡು 6 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳೂ ಜೈಲು ಪಾಲಾಗಿದ್ದರು. ಮೋದಿ ಪ್ರಧಾನಿಯಾಗಿ ಪಂಜರದ ಗಿಳಿ ಕುಖ್ಯಾತಿಯ ಸಿಬಿಐ ಅವರ ಹಿಡಿತಕ್ಕೆ ಬಂದ ಮೇಲೆ ಈ ಅಧಿಕಾರಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು ಕಾಕತಾಳಿಯವೇನಲ್ಲ.

ಗುಜರಾತ್‍ನಿಂದ ಹೊರಗಡೆ ಈ ಕೇಸಿನ ವಿಚಾರಣೆ ನಡೆಸಬೇಕೆಂಬ ಸುಪ್ರಿಂ ಆದೇಶದ ಪ್ರಕಾರ ಸಿಬಿಐ ಕೋರ್ಟ್ ವಿಚಾರಣೆ ನಡೆಸಿತ್ತು. ಈ ಹಿಂದೆ ವಿಚಾರಣೆ ನಡೆಸುತ್ತಿದ್ದ ಜ.ಉತ್ಪಾತ್ ಅವರು ಅಮಿತ್ ಶಾ ಕೋರ್ಟಿನ ಮುಂದೆ ಖುದ್ದು ಹಾಜರಾಗಬೇಕೆಂದು ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಎತ್ತಂಗಡಿಯಾದರು. ಅವರ ಸ್ಥಾನಕ್ಕೆ ಬಂದವರೇ ನತದೃಷ್ಟ ಜ.ಲೋಯಾ.

ಜಸ್ಟೀಸ್ ಲೋಯಾ ಅನುಮಾನಾಸ್ಪದ ಸಾವಿನ ನಂತರ ಏನಾಯ್ತು ಗೊತ್ತೆ? ಅವರ ಸ್ಥಾನಕ್ಕೆ ಬಂದ ಜ.ಗೋಸ್ವಾಮಿ ಎಂಬುವವರು ಈ ಕೇಸಿನಲ್ಲಿ ಅಮಿತ್ ಶಾಗೆ ಕ್ಲೀನ್ ಚಿಟ್ ದಯಪಾಲಿಸಿಬಿಟ್ಟರು. ಅಲ್ಲಿಗೆ ಒಂದು ಅಧ್ಯಾಯ ಮುಗಿದಂತಾಯ್ತು.

ನ್ಯಾಯಾಧೀಶರ ನಿಗೂಡ ಸಾವಿನ ತನಿಖೆ ಕೈಗೊಂಡ ಕ್ಯಾರವಾನ್ ಪತ್ರಿಕೆ ಅವರ ಕುಟುಂಬದವರು, ಬಂಧುಮಿತ್ರರು, ಸಹೋದ್ಯೋಗಿಗಳು ಮುಂತಾದವರಿಂದ ಮಾಹಿತಿ ಸಂಗ್ರಹಿಸಿ 2017ರ ನವೆಂಬರ್‌ನಲ್ಲಿ ತನಿಖಾ ವರದಿ ಪ್ರಕಟಿಸಿತು. ಮೂರು ವರ್ಷಗಳ ಹಿಂದೆ ಹೂತುಹೋಗಿದ್ದ ನಿಗೂಡ ಸಾವಿನ ಪ್ರಕರಣಕ್ಕೆ ಆಗಲೇ ಮರುಜೀವ ಬಂದಿದ್ದು. ಇಂಥಾ ಪ್ರಾಮಾಣಿಕ ನ್ಯಾಯಾಧೀಶರ ನಿಗೂಡ ಸಾವಿನ ಪೋಸ್ಟ್‌ ಮಾರ್ಟಂ ವರದಿ ಹಾಗೂ ಕಾನೂನು ಪ್ರಕ್ರಿಯೆಗಳಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿರುವುದರಿಂದ ಸ್ವತಂತ್ರ ತನಿಖೆಗೆ ಆದೇಶಿಸಬೇಕೆಂದು ಕೋರಿ ಸುಪ್ರಿಂಕೋರ್ಟ್‍ನಲ್ಲಿ ಒಂದು ಪಿಐಎಲ್ ದಾಖಲಾಯಿತು. ಇದೇ ಅವಧಿಯಲ್ಲಿ ಬಾಂಬೆ ಹೈಕೋರ್ಟ್‍ನಲ್ಲೂ ಒಂದು ಪಿಐಎಲ್ ದಾಖಲಾಯ್ತು.

ಆದರೆ ಅವರೆಡೂ ಕೋರ್ಟ್‌‌ಗಳು ಸಹ ಜಸ್ಟೀಸ್‌ ಲೋಯಾರವರದು ಸಹಜ ಸಾವು ಎಂದೇಳಿ ಮರುಪರಿಶೀಲನಾ ಅರ್ಜಿಗಳನ್ನು ವಜಾ ಮಾಡಿವೆ. ಅಲ್ಲಿಗೆ ಪ್ರಕರಣಕ್ಕೆ ಎಳ್ಳುನೀರು ಬಿಟ್ಟೆವೆಂದು ಬಿಜೆಪಿಯವರು ಭಾವಿಸಿದ್ದರು. ಆದರೆ ಯಾವಾಗ ಮಹಾರಾಷ್ಟ್ರದಲ್ಲಿ ರಾಜಕೀಯ ಪಲ್ಲಟಗಳು ಸಂಭವಿಸಿ ಬಿಜೆಪಿ ಶಿವಸೇನೆ ಬದಲು ಶಿವಸೇನೆ, ಕಾಂಗ್ರೆಸ್‌ ಎನ್‌ಸಿಪಿ ಅಧಿಕಾರದ ಚುಕ್ಕಾಣಿ ಹಿಡಿದವೊ ಅಲ್ಲಿಗೆ ಈ ಕೇಸಿಗೆ ಮತ್ತೆ ಮರುಜೀವ ಬಂದಿದೆ.

ಸ್ಥಳೀಯ ಮರಾಠಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ ’ನ್ಯಾಯಾಧೀಶ ಲೋಯಾ ಅವರ ಸಾವಿನ ಕುರಿತು ತನಿಖೆಯ ಬೇಡಿಕೆ ಮತ್ತು ಅಗತ್ಯವಿದ್ದರೆ ಪ್ರಕರಣವನ್ನು ಮರುಪರಿಶೀಲಿಸಬೇಕು’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಶರದ್‌ ಪವಾರ್‌ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಲು ಸಜ್ಜಾಗಿದ್ದರು. ಆದರೆ ಪವಾರ್‌ ಇದು ಚುನಾವಣಾ ಸಮಯ ಎಂದು ತಿರುಗೇಟು ನೀಡಿದ್ದರು. ಚುನಾವಣಾ ಫಲಿತಾಂಶದ ನಂತರ ಪವಾರ್‌ ಕೈ ಮೇಲಾಗಿದ್ದು ಈಗ ಅಮಿತ್‌ ಶಾ ಆರೋಪಿಯಾಗಿರುವ ಮತ್ತು ಮಹಾರಾಷ್ಟ್ರದಲ್ಲಿಯೇ ಸಂಭವಿಸಿರುವ ಜಸ್ಟೀಸ್‌ ಲೋಯಾ ಕೇಸ್‌ ರೀಓಪನ್‌ ಮಾಡುತ್ತೇವೆ ಎನ್ನುವ ಮಾತು ಸಣ್ಣ ವಿಷಯವಲ್ಲ. ಇದೊಂದು ರೀತಿ ಅಮಿತ್‌ ಶಾಗೆ ಶರದ್‌ ಪವಾರ್‌ ಕೊಡುವ ಎಚ್ಚರಿಕೆಯೂ ಆಗಿದೆ ಎಂಬುದು ಹಲವಾರು ವಿಶ್ಲೇಷಕರ ಅಭಿಮತ.

ತನಿಖೆಗೆ ನಿಲ್ಲದ ಬೇಡಿಕೆ:

ಸುಪ್ರೀಂ ಕೋರ್ಟ್‌ ಸಾಕ್ಷಿಗಳಿಲ್ಲ ಎಂದೇ ಏನೇ ತೀರ್ಪು ನೀಡಿದ್ದರೂ ಸಹ ದೇಶದ ಹಲವಾರು ಜನ ಜಸ್ಟೀಸ್‌ ಲೋಯಾರವರ ಸಾವನ್ನು ಸಹಜ ಸಾವು ಎಂದು ಸ್ವೀಕರಿಸಲು ಸಿದ್ದರಿಲ್ಲ. ಹಾಗಾಗಿ ಮರುತನಿಖೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುತ್ತಲೇ ಇದ್ದಾರೆ.

ಹಾಲಿ ಬೆಂಗಳೂರು ಕೋರ್ಟ್‌ ಮುಂದೆ ವಿಭಿನ್ನ ಪ್ರತಿಭಟನೆ ನಡೆಸುತ್ತಿರುವ ವ್ಯಕ್ತಿಯ ಹೆಸರು ಶ್ರೀನಿವಾಸ್. ಅವರ ಬಗ್ಗೆ ಮತ್ತಷ್ಟು ವಿವರಗಳನ್ನು ಕೇಳಿದಾಗ “ನಾನು ಈ ಹೋರಾಟ ನಡೆಸುತ್ತಿರುವುದು ಭಾರತದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕೆಂದು. ಒಬ್ಬ ನ್ಯಾಯಾಧೀಶರ ಸಾವಿಗೆ ನ್ಯಾಯ ಸಿಗದಿದ್ದರೆ ಜನಸಾಮಾನ್ಯರ ಪರಿಸ್ಥಿತಿಯೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನಗೆ ಭಯವಾಗಲಿ, ಮತ್ತೊಂದು ಇಲ್ಲ. ಆದರೆ ನಾನು ಎತ್ತುತ್ತಿರುವ ವಿಷಯ ಚರ್ಚೆಯಾಗಬೇಕೆ ಹೊರತು ನನ್ನ ಬಗ್ಗೆ ಅಲ್ಲ” ಎನ್ನುತ್ತಾರೆ.

“ನೀವು ಬಂದು ಮಾತನಾಡಿಸಿ, ವಿಷಯ ತಿಳಿದುಕೊಂಡಿದ್ದಕ್ಕೆ ಧನ್ಯವಾದಗಳು. ಇದೇ ರೀತಿ ಹೆಚ್ಚಿನ ಜನಕ್ಕೆ ಸತ್ಯ ತಲುಪಬೇಕು. ಮುಖ್ಯವಾಗಿ ವಕೀಲರು ಮತ್ತು ನ್ಯಾಯಾಧೀಶರಿಗೆ ಈ ವಿಚಾರ ತಲುಪಬೇಕು ಎಂಬುದು ನನ್ನ ಉದ್ದೇಶ ಎಂದು ಶ್ರೀನಿವಾಸ್‌ ಹೇಳುತ್ತಾರೆ.”

ಏನೇ ಇರಲಿ ಎಲ್ಲರಿಗೂ ಸಮಾಧಾನ ತರುವ ರೀತಿಯಲ್ಲಿ ವಿಚಾರಣೆಯ ಪ್ರಕ್ರಿಯೆಗಳು ಮತ್ತು ತೀರ್ಪುಗಳು ಇರಬೇಕು. ಅಲ್ಲಿ ಅನುಮಾನಕ್ಕೆ ಆಸ್ಪದವಿರಬಾರದು. ಆ ನಿಟ್ಟಿನಲ್ಲಿ ಜಸ್ಟೀಸ್‌ ಲೋಯಾರವರ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂಬುದು ಬಹಳ ಜನರ ಅಭಿಪ್ರಾಯ. ಶರದ್‌ ಪವಾರ್‌ ಕೂಡ ಅದೇ ಮಾತನ್ನಾಡಿದ್ದಾರೆ. ಏನಾಗಲಿದೆ ಎಂಬುದನ್ನು ಭವಿಷ್ಯವಷ್ಟೇ ಹೇಳಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights