ಜಾತಿ ಭೇದವಿಲ್ಲದೇ ನೋಡಲು ಎರಡು ಕಣ್ಣು ಸಾಲದಂತಿರೋ‌ ರೊಟ್ಟಿ ಬುತ್ತಿ ಜಾತ್ರೆ…

ಆಹಾಃ ..ಅಲ್ಲಿ ಎಲ್ಲಿ ನೋಡಿದ್ರೂ ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರೋ ಮಹಿಳೆಯರ ದಂಡು..ನೋಡಲು ಎರಡು ಕಣ್ಣು ಸಾಲದಂತಿರೋ‌ ರೊಟ್ಟಿ ಬುತ್ತಿಯ ಜಾತ್ರೆ…ಹಿಂದು ಮುಸ್ಲಿಂ ಸೇರಿದಂತರ ಜಾತಿ ಭೇದವಿಲ್ಲದೇ ಮಠದಲ್ಲಿ ಅನಾವರಣಗೊಂಡ ಗ್ರಾಮೀಣ ಭಾರತದ ಸೊಗಡು.. ಇಂತಹ ಅತ್ಯದ್ಭುತ ಜಾತ್ರೆ ನಡೆದಿದ್ದಾದ್ರೂ ಎಲ್ಲಿ ಗೊತ್ತಾ?

ಸಾಲು ಸಾಲಾಗಿ ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು… ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಸರ್ವಧರ್ಮ ಸಹಿಷ್ಣುತೆ ಸಂದೇಶ ಬೋಧಿಸುತ್ತಿರುವ ಸ್ವಾಮೀಜಿ… ಮನ ಸೆಳೆಯುವಂತಿರುವ ಹಳ್ಳಿ ಗುಡಿಸಲು, ಗರಡಿ ಮನೆ, ನಾಟಿ ವೈದ್ಯನ ರೂಪಕ..ಹೌದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಯಲ್ಲಾಲಿಂಗ ಮಹಾರಾಜರ 34 ನೇ ಪುಣ್ಯಸ್ಮರಣೆ ನಿಮಿತ್ಯವಾಗಿ ರೊಟ್ಟಿ ಬುತ್ತಿ ಜಾತ್ರೆಯನ್ನು ಆಯೋಜನೆ ಮಾಡಲಾಗಿತ್ತು.

ಪಟ್ಟಣದ ವಿಠ್ಠಲ ಮಂದಿರದಿಂದ ಆರಂಭಗೊಂಡ ರೊಟ್ಟಿ ಬುತ್ತಿ ಜಾತ್ರೆಗೆ ಮುಗಳಖೋಡ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮುಗಳಖೋಡ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ 30 ಕ್ಕೂ ಹೆಚ್ಚು ಗ್ರಾಮಗಳ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ರೊಟ್ಟಿ, ಶೇಂಗಾ ಚಟ್ನಿ, ವಿವಿಧ ಪಲ್ಯ, ಹೋಳಿಗೆ ಸೇರಿದಂತೆ ತರಹೇವಾರಿಯಾದ ಬುತ್ತಿಯನ್ನು ತಲೆ ಮೇಲೆ ಹೊತ್ತು ಮಠಕ್ಕೆ ಅರ್ಪಿಸಿದ್ರು. ಭಕ್ತರು ಸಮರ್ಪಿಸಿರೋ ರೊಟ್ಟಿ ಬುತ್ತಿಯಿಂದಲೇ ಜಾತ್ರೆಯ ನಿಮಿತ್ಯವಾಗಿ ಅನ್ನ ದಾಸೋಹವನ್ನು ಲಕ್ಷಾಂತರ ಭಕ್ತರಿಗೆ ಉಣಬಡಿಸಲಾಗುತ್ತದೆ. ಹೀಗಾಗಿ ತಮಗೆ ಶಕ್ತಿ ಮುಕ್ತಿ ಭಕ್ತಿ ಎಲ್ಲವೂ ಮಠದ ಯಲ್ಲಾಲಿಂಗ ಮುತ್ಯಾನ ಆಶೀರ್ವಾದದ ಫಲ ಎಂಬ ನಂಬಿಕೆ ಭಕ್ತರದ್ದಾಗಿದೆ.

ಇನ್ನೂ, ರೊಟ್ಟಿ ಬುತ್ತಿ ಜಾತ್ರೆಯ ಅಂಗವಾಗಿ ಹಮ್ಕಿಕೊಂಡ ರೊಟ್ಟಿ ಜಾತ್ರೆಯಲ್ಲಿ ಮುಸ್ಲಿಂ, ಲಂಬಾಣಿ, ಜೈನರು ಸೇರಿದಂತೆ ಯಾವುದೇ ಜಾತಿ ಬೇಧ ಎಎನ್ನದೇ ಬುತ್ತಿ ಹೊತ್ತು ತಂದಿರೋದು ಭಾವೈಕ್ಯತೆ ಸಾಕ್ಷಿಯಾಗಿತ್ತು. ಹೀಗೆ 10 ಸಾವಿರ ಹೆಚ್ಚು ಭಕ್ತರು 1 ಕೋಟಿಗೂ ಹೆಚ್ಚು ರೊಟ್ಟಿಗಳನ್ನು ಮಠದ ದಾಸೋಹಕ್ಕೆ ಸಮರ್ಪಿದರು. ಜಾತ್ರೆ ನಿಮಿತ್ಯ ಮಠದ ಆವರಣದಲ್ಲಿ ದೇಶಿ ಸೊಗಡಿನ ವೇದಿಕೆಯನ್ನು ಕಬ್ಬಿನ ಗರಿಗಳಿಂದ ನಿರ್ಮಿಸಲಾಗಿತ್ತು. ವೇದಿಕೆಯ ಎಡಬಲದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಗುಡಿಸಲಿನ ಮನೆ ನಿರ್ಮಾಣ ಮಾಡಿದ್ದು ಹಳ್ಳಿಯ ಜೀವನ ಶೈಲಿಯ ಪ್ರತಿರೂಪದಂತಿತ್ತು. ಇದಕ್ಕೆ ಹೊಂದಿಕೊಂಡಂತೆ ಗರಡಿ ಮನೆ ನಿರ್ಮಾಣ ಮಾಡಿ ಯುವಕರಿಬ್ಬರು ಕುಸ್ತಿ ಹಿಡಿಯುತ್ತಿರೋದು, ನಾಟಿ ವೈದ್ಯಕೀಯ ಪದ್ಧತಿ ಬಿಂಬಿಸುವ ರೂಪಗಳು ಜಾತ್ರೆಯಲ್ಲಿ ಗಮನ ಸೆಳೆಯುವಂತಿದ್ದವು.

ಈ ಸಂದರ್ಭದಲ್ಲಿ ಬ್ರಹ್ಮಾಂಡ ಗುರೂಜಿ ಉಪಸ್ಥಿತಿಯಲ್ಲಿ ಮುಗಳಖೋಡ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅವರು 10 ಸಾವಿರಕ್ಕೂ ಹೆಚ್ಚು ಭಕ್ಯರಿಗೆ ಹಿಂದು, ಮುಸ್ಲಿಂ ಸೇರಿದಂತೆ ಎಲ್ಲರೂ ಧರ್ಮ ಸಹಿಷ್ಣುತೆಯಿಂದ ಜೀವನ ಸಾಗಿಸುವ ಪ್ರತಿಜ್ಞಾ ವಿಧಿ ಭೋಧಿಸಿದ್ರು. ನಿಜಕ್ಕೂ ರೊಟ್ಟಿ ಜಾತ್ರೆಯಲ್ಲ..ಇದು ರೊಟ್ಟಿ ಕುಂಭ‌ಮೇಳದಂತಿದ್ದು, ಭಾರತದ ಗ್ರಾಮೀಣ ಸೊಗಡು ಮಠದಲ್ಲಿ ಅನಾವರಣಗೊಂಡಿರುವುದು ಅನ್ನದ ಮಹತ್ವಕ್ಕೆ ಸಾಕ್ಷಿಯಾಗಿದ್ದು ಮಠದ ಹೆಮ್ಮೆ ಎಂದು ಸ್ವಾಮೀಜಿ ಅಭಿಪ್ರಾಯ.

ಒಟ್ಟಿನಲ್ಲಿ, ಇಳಕಲ್ ಸೀರೆ ಉಟ್ಟುಕೊಂಡು , ತಲೆ ಮೇಲೆ ಬುತ್ತಿಗಂಟು ಹೊತ್ತುಕೊಂಡು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಜಾತ್ರೆ ಕಣ್ಣಿಗೆ ಅಂದ..ಮನಸ್ಸಿಗೆ ಚಂದ …ಚಂದವೋ ಚಂದ..ನೋಡಿ ಖುಷಿ ಆಯ್ತಲ್ವಾ..ಮತ್ತೇಕೆ ತಡ ಜಾತ್ರೆಗೆ ಹೊರಡಿ..ಜನೆವರಿ 22 ರ ವರೆಗೆ ನಡೆಯೋ ಜಾತ್ರೆಗೆ ತಾವೂ ಬನ್ನಿ..ಬರ್ತೀರಲ್ಲಾ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights