ಸಿಎಎ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ವಿರುದ್ಧ ದೆಹಲಿಯಲ್ಲಿ ಇಂದು ಹಲವಾರು ಪ್ರತಿಭಟನೆಗಳು ನಡೆದಿದ್ದು ಎಲ್ಲಾ ಕಡೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

“ಯುಪಿಯಲ್ಲಿ ಸುಮಾರು 20 ಜನರು ಕೊಲ್ಲಲ್ಪಟ್ಟರು!, 5000 ಕ್ಕಿಂತಲೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಸ್ಲಿಂ ಪ್ರದೇಶಗಳು ಮತ್ತು ಮನೆಗಳ ಮೇಲೆ ಯುಪಿ ಪೊಲೀಸರು ದಾಳಿ ಮತ್ತು ನಿಂದನೆ ನಡೆಸುತ್ತಿದ್ದಾರೆ. ಹಲವೆಡೆ ಇಂಟರ್ನೆಟ್‌ ಬ್ಲಾಕ್‌ ಮಾಡಲಾಗಿದೆ. 21,000 ಕ್ಕೂ ಹೆಚ್ಚು ಜನರ ಮೇಲೆ ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನ ಜಾಮಿಯಾ ಸಮನ್ವಯ ಸಮಿತಿಯು ಖಂಡಿಸಿ ದೆಹಲಿಯ ಯುಪಿ ಭವನ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಇನ್ನೊಂದೆಡೆ ಸಿಎಎ ವಿರೋಧಿಸಿ ಮತ್ತು ಭೀರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ರವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೀಮ್‌ ಆರ್ಮಿ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದ್ದಾರೆ. ಭೀಮ್‌ ಆರ್ಮಿ ಸದಸ್ಯರು ಜೋರ್‌ ಬಾಗ್‌ನಿಂದ ಪ್ರಧಾನಮಂತ್ರಿ ಮನೆಯವರೆಗೆ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು ಎಂದು ಖುಷ್‌ರವರು ತಿಳಿಸಿದ್ದಾರೆ.

ಚಂದ್ರಶೇಖರ್‌ ಅಜಾದ್‌ರವರು ಕಳೆದ ವಾರ ಶಾಂತಿಯುತವಾಗಿ ಜಮಾ ಮಸೀದಿಯಲ್ಲಿ ಹೋರಾಟ ನಡೆಸುತ್ತಿದ್ದರು. ಅಲ್ಲಿಂದ ದೆಹಲಿ ಗೇಟ್‌ 2 ಕಿ.ಮೀ ದೂರದಲ್ಲಿದೆ. ಆದರೆ ಪೊಲೀಸರು ದೆಹಲಿ ಗೇಟ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಚಂದ್ರಶೇಖರ್‌ ಕಾರಣರೆಂದು ಬಂಧಿಸಿ ಅವರ ಮೇಲೆ ಗಲಭೆ ಸೇರಿದಂತೆ ಹಲವು ಗಂಭೀರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಎ, ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ದೇಶಾದ್ಯಂತ ನಡೆಯುತ್ತಿದೆ. ಆದರೆ ಬಿಜೆಪಿ ಆಳ್ವಿಕೆಯುಳ್ಳ ರಾಜ್ಯಗಳಲ್ಲಿ ಮಾತ್ರ ಹಿಂಸಾಚಾರ ಉಲ್ಭಣಿಸಿದೆ. ಉಳಿದ ಕಡೆ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಮುಸ್ಲಿಮರು ಮತ್ತು ದಲಿತರು ಎಲ್ಲಿಯೂ ಹಿಂಸಾಚಾರಕ್ಕಿಳಿದಿಲ್ಲ. ಪೊಲೀಸರು ಹಿಂಸಾಚಾರಕ್ಕೆ ಕಾರಣ ಎಂದು ಖುಷ್‌ ಆರೋಪಿಸಿದ್ದಾರೆ.

ಇನ್ನು ಕಳೆದ ವಾರ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ಜಾಮಾ ಮಸೀದಿಯಲ್ಲಿ ಸಾವಿರಾರು ಜನರು ಇಂದೂ ಸಹ ಸೇರಿ ಪ್ರತಿಭಟನೆ ಆರಂಭಿಸಿದ್ದಾರೆ.