ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯದಿದ್ದಲ್ಲಿ ಕಸವನ್ನು ಬಿಬಿಎಂಪಿಗೆ ರವಾನಿಸುವ ಎಚ್ಚರಿಕೆ ಕೊಟ್ಟ AAP!

ಮೂರು ದಿನಗಳ ಒಳಗಾಗಿ ಬೆಂಗಳೂರಿನ ಕಸದ ಸಮಸ್ಯೆಯನ್ನು ಬಗೆಹರಿಯದಿದ್ದಲ್ಲಿ ನಗರದ ಕಸವನ್ನು ಬಿಬಿಎಂಪಿ ಕಚೇರಿಗೆ ಸುರಿಯಲಾಗುವುದು.

ದಿನೇ ದಿನೇ ಕಸದ ಸಮಸ್ಯೆ ಬಿಡಿಸಲಾಗದ ಕಗ್ಗಂಟಿನಂತೆ ಉಲ್ಬಣಿಸುತ್ತಿದೆ. ಬಿಬಿಎಂಪಿ ಆರಂಭಗೊಂಡಾಗಿನಿಂದ ಇಲ್ಲಿಯವರೆಗೂ ಕಸದ ಸಮಸ್ಯೆಯದ್ದೇ ತಲೆ ನೋವಾಗಿ ಕಾಡುತ್ತಿದ್ದರೂ, ಬಿಬಿಎಂಪಿಯ ಅಧಿಕಾರ ಹಿಡಿದಿರುವವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಆಮ್ ಆದ್ಮಿ ಪಕ್ಷವು 2016ರಲ್ಲಿ ಇದೇ ರೀತಿ ಕಸದ ಸಮಸ್ಯೆ ತಾರಕಕ್ಕೆ ಏರಿದ್ದಾಗ, ಬೆಂಗಳೂರು ತುಂಬಾ ಕಸ ತುಂಬಿ ನಾರುತ್ತಿದ್ದಾಗ ಮಲಗಿ ನಿದ್ದೆ ಹೋಗಿದ್ದ ಬಿಬಿಎಂಪಿಯನ್ನು ಎಚ್ಚರಿಸಿ ಕಸದ ಸಮಸ್ಯೆ ಅಂದಿಗೆ ಕಸ ಸಮಸ್ಯೆ ಬಗೆಹರಿಯುವಂತೆ ಮಾಡಿತ್ತು. ಅದಾಗ್ಯೂ ಕೂಡ ಡೊಂಕು ಬಾಲದಂತಿರುವ ರಾಜಕಾರಣಿಗಳು ಮತ್ತು ನಿಷ್ಕ್ರಿಯ ಬಿಬಿಎಂಪಿ ಅಧಿಕಾರಿಗಳು ಮತ್ತೊಮ್ಮೆ ಬೆಂಗಳೂರು ಗಬ್ಬು ನಾರುವಂತೆ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷವು ನಿರಂತರವಾಗಿ ಕೇವಲ ಕಸ ವಿಷಯವಾಗಿ ಇದುವರೆಗೂ 17 ಬಾರಿ ಪತ್ರಿಕಾ ಗೋಷ್ಟಿ ಮತ್ತು ವಾರ್ಡ್ ಮಟ್ಟದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದು, ನಿರಂತರವಾಗಿ ಬಿಬಿಎಂಪಿಯನ್ನು ಎಚ್ಚರಿಸುತ್ತಿದೆ. ಬಿಬಿಎಂಪಿ ಕುಂಬ ಕರ್ಣನಂತೆ ನಿದ್ರೆ ಮಾಡುತ್ತಿದೆ.

ಈಗಾಗಲೇ ಮಿಟಗಾನಹಳ್ಳಿ, ಬೆಳ್ಳಹಳ್ಳಿ, ಮಾರೇನಹಳ್ಳಿ ಕ್ವಾರಿಗಳು ಭೂಭರ್ತಿಯಾಗಿದ್ದು, ಕಸವನ್ನು ಸುರಿಯಲು ಯಾವುದೇ ಕ್ವಾರಿಗಳಿಲ್ಲದೇ ಕಸದ ರಾಶಿ ತುಂಬಿದ ಲಾರಿಗಳು ಹಾಗೇ ನಿಂತು ಗಬ್ಬು ನಾರುತ್ತಿವೆ. ಇಂತಹ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳ್ಬೇಕಿದ್ದ ಬಿಬಿಎಂಪಿ ಯಾವ ಕೆಲಸವನ್ನೂ ಮಾಡದೆ ಕೇವಲ ಕಾಲಹರಣ ಮಾಡುತ್ತಿದೆ. 2019ರ ಜನವರಿಯಲ್ಲಿ ಹಸಿ ಕಸವನ್ನು ಬೇರ್ಪಡಿಸಿ ವಾರ್ಡ್ ಮಟ್ಟದಲ್ಲಿ ವಿಲೇಮಾರಿ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತು. ಅದು ಇನ್ನೂ ಆರಂಭಿಕ ಹಂತದಲ್ಲೇ ಲಕ್ವ ಹೊಡೆದುಕೊಂಡು ಕುಂತಿದ್ದು, ಒಂದಿಂಚೂ ಮುಂದೆ ಹೋಗಿಲ್ಲ.

ಹೊಸ ಮೇಯರ್ ಆಯ್ಕೆಯಾಗಿ ಬಿಜೆಪಿ ನೇತೃತ್ವದ ಆಡಳಿತ ರಚನೆಯಾಗಿ ಮೂರು ತಿಂಗಳುಗಳು ಕಳೆದಿವೆ. ಬಿಜೆಪಿ ತನ್ನ ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಚ್ಛನಗರವೇ ತಮ್ಮ ಆಧ್ಯತೆಯೆಂದು ಘೋಷಿಸಿತ್ತು. ಆ ಆದ್ಯತೆ ಬರೀ ಮಾತಿಗಷ್ಟೇ ಸೀಮಿತವಾಗಿದ್ದು, ಕಸ ಬೀದಿಯಲ್ಲೇ ಕೊಳೆತು ನಾರುತ್ತಿದೆ. ಬೆಂಗಳೂರನ್ನು ಗಾರ್ಡನ್ ಸಿಟಿ ಮಾಡುತ್ತೇವೆಂದು ಹೇಳಿದ್ದ ಬಿಜೆಪಿ ಗಾರ್ಬೇಜ್ ಸಿಟಿಯನ್ನಾಗಿ ಮಾಡಿದೆ. ಮೇಯರ್ ಗೌತಮ್ ಕುಮಾರ್ ಇಂಧೋರ್ ಮಾದರಿಯಲ್ಲಿ ಕಸ ವಿಲೇವಾರಿ ಮಾಡುತ್ತೇವೆಂದು ಆರಂಭಗೊಂಡಿದ್ದ ಟೆಂಡರ್ನ್ನು ತಡೆಹಿಡಿದಿದ್ದಾರೆ, ಇವರ ಸ್ವಚ್ಛ ಮಾದರಿ ಬರೀ ಮಾತಿನಲ್ಲೇ ನಗರವನ್ನು ಸ್ವಚ್ಛಗೊಳಿಸುತ್ತಿದೆಯೇ ಹೊರತು ನಗರ ಕಸ ಬೀದಿಯಲ್ಲೇ ಉಳಿದಿದೆ.

ಹಾಗಾಗಿ ಇಂತಹ ಮಾತಿನಲ್ಲೇ ಹೊಟ್ಟೆ ತುಂಬಿಸುವಂತಹ ಕೆಲಸವನ್ನು ಬಿಟ್ಟು, ಇನ್ನು ಮೂರು ದಿನಗಳೊಳಗಾಗಿ ಕಸದ ಸಮಸ್ಯೆಯನ್ನು ಬಗೆಹರಿಸಬೇಕು. ತಡೆಹಿಡಿದಿರುವ ಟೆಂಡರ್ ಗಳನ್ನು ಜಾರಿಮಾಡಬೇಕು. ಇಲ್ಲವಾದಲ್ಲಿ ಆಮ್ ಆದ್ಮಿ ಪಕ್ಷವು ನಗರದಲ್ಲಿ ಕೊಳೆತು ನಾರುತ್ತಿರುವ ಕಸವನ್ನು ತಂದು ಬಿಬಿಎಂಪಿ ಕಚೇರಿಗೆ ಸುರಿದು ಪಾಠ ಕಲಿಸುತ್ತೇವೆಂದು ಈ ಮೂಲಕ ಬಿಬಿಎಂಪಿಗೆ ಎಚ್ಚರಿಕೆ ನೀಡುತ್ತಿದ್ದೇವೆ.

ಮೋಹನ್ ದಾಸರಿ
ಅಧ್ಯಕ್ಷರು, ಆಮ್ ಆದ್ಮಿ ಪಕ್ಷ ಬೆಂಗಳೂರು.
9900120071

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights