FACT CHECK | ಸೀತಾರಾಂ ಯೆಚೂರಿಯವರಿಗೆ ಅಂತಿಮ ಗೌರವ ನಮನ ಎಂದು 2016ರ ಚೀನಾದ ಫೋಟೊ ಹಂಚಿಕೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶ್ವಾಸಕೋಶದ ಸೋಂಕಿನಿಂದ ಸೆಪ್ಟೆಂಬರ್ 12 ರಂದು ನಿಧನರಾದರು. ಅವರ ಮರಣದ ನಂತರ, ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಜೀವಿತಾವಧಿಯ ಬದ್ಧತೆಗೆ ಅನುಗುಣವಾಗಿ, ಯೆಚೂರಿ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ಶನಿವಾರ (ಸೆಪ್ಟೆಂಬರ್ 14) ನವದೆಹಲಿಯ ಏಮ್ಸ್‌ಗೆ ದಾನ ಮಾಡಲಾಯಿತು.
ಇದೆಲ್ಲದರ ಮಧ್ಯೆ ಸೀತಾರಾಂ ಯೆಚೂರಿಯವರ ದೇಹವನ್ನು AIIMS ಗೆ ಹಸ್ತಾಂತರಿಸಿದ ನಂತರ ಅಲ್ಲಿನ ವೈದ್ಯಕೀಯ ಸಿಬ್ಬಂದಿ, ಅಂಗಾಗಗಳನ್ನು ದಾನ ಮಾಡಿದ ಸೀತಾರಾಂ ಯೆಚೂರಿಯವರಿಗೆ ಅಂತಿಮ ಗೌರವ ನಮನ ಸಲ್ಲಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಫೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯನ್ನು ಯೆಚೂರಿಯವರ ಹಲವು ಅಭಿಮಾನಿಗಳು ಹಂಚಿಕೊಳ್ಳುತ್ತಾ, ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಏಮ್ಸ್ ವೈದ್ಯರು ಮೃತ ದೇಹದ ಮುಂದೆ ನಿಂತು ಗೌರವವನ್ನು ಸಲ್ಲಿಸುತ್ತಿರುವ ಚಿತ್ರದೊಂದಿಗೆ ಇದು ಯೆಚೂರಿಯವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತ, “ಅಂಗಾಂಗ ದಾನಿ (ಸೀತಾರಾಮ್ ಯೆಚೂರಿ)ಗೆ AIIMS ವೈದ್ಯರಿಂದ ಕೊನೆಯ ಸೆಲ್ಯೂಟ್” ಎಂಬ ಬರಹದೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗಳಿಗೆ ಕಮೆಂಟ್ ಮಾಡಿರುವ ಕೆಲವರು ಇದು ಸೀತಾರಂ ಯೆಚೂರಿಯವರ ಮೃತದೇಹವಲ್ಲ ಎಂದು ಪ್ರತಿಕ್ರಯಿಸಿದ್ದಾರೆ. ಹಾಗಿದ್ದರೆ ಈ ಫೋಟೊ ಎಲ್ಲಿಯದ್ದು ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸೀತಾರಂ ಯೆಚೂರಿಯವರ ದೇಹವನ್ನು AIIMS ದಾನ ಮಾಡಿದಾಗ, ಅಂಗಾಗ ದಾನ ಮಾಡಿದ ಯೆಚೂರಿಯವರ ಪಾರ್ಥೀವ ಶರೀರಕ್ಕೆ ಏಮ್ಸ್ ನ ವೈದ್ಯರು ಗೌರವ ನಮನ ಸಲ್ಲಿಸಿದ ಅಂತಿಮ ಕ್ಷಣದ ಫೋಟೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಫೋಟೊವನ್ನು ಪರಿಶೀಲಿಸಿದಾಗ, ಐದು ವರ್ಷಗಳ ಹಿಂದೆ ಪ್ರಕಟವಾದ ರಷ್ಯಾದ ಲೇಖನದಲ್ಲಿ “ಕೃತಜ್ಞತೆಯ ಕಾಯಿದೆ” ಎಂಬ ಶೀರ್ಷಿಕೆಯ ಚಿತ್ರ ಲಭ್ಯವಾಗಿದೆ.
ವೆಬ್‌ಸೈಟ್ ಪ್ರಕಾರ, ಚೀನಾದ ಅನ್ಹುಯಿ ಪ್ರಾಂತ್ಯದ 41 ವರ್ಷದ ವೈದ್ಯ ಝಾವೋ ಜು ಟಿಬೆಟ್‌ನಲ್ಲಿ ಸೇವೆ ಸಲ್ಲಿಸಲು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವಾಗ ಮೆದುಳಿನ ಸಂಬಂಧಿ ಖಾಯಿಲೆ(ಮೆದುಳಿನ ಅನ್ಯಾರಿಸಂ) ಯಿಂದ ಸಾವನಪ್ಪಿದ್ದರು. ಝಾವೋ ಅವರ ಕುಟುಂಬವು ಅವರ ಉದಾತ್ತ ಕೊನೆಯ ಆಸೆಗಳನ್ನು ಗೌರವಿಸಿತು ಮತ್ತು ಅವರ ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಿದರು ಎಂದು ಉಲ್ಲೇಖಿಸಲಾಗಿದೆ.
ಚೀನಾದ ಹೆಫೀಯಲ್ಲಿರುವ ಆಸ್ಪತ್ರೆಯ ಸಿಬ್ಬಂದಿಗಳು ಝಾವೋ ಅವರ ಗೌರವಾರ್ಥವಾಗಿ ಅಂತಿಮ ನಮನ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಈ ಚಿತ್ರವನ್ನು ಪ್ರಕಟಿಸಿದೆ.ಇದೇ ಚಿತ್ರವನ್ನು ಫೇಸ್‌ಬುಕ್‌ನಲ್ಲು ಹಂಚಿಕೊಳ್ಳಲಾಗಿದೆ.
ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ, ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (CGTN), ಸೆಪ್ಟೆಂಬರ್ 30, 2016 ರಂದು ವರದಿಯಲ್ಲಿ ಚಿತ್ರವನ್ನು ಪ್ರಕಟಿಸಿತು, “ಟಿಬೆಟ್‌ನಲ್ಲಿ ಸ್ವಯಂಸೇವಕರಾಗಿದ್ದಾಗ ಚೀನೀ ವೈದ್ಯ ಝಾವೋ ಜು ಸಾವನಪ್ಪಿದ್ದರು, ಅವರ ಕುಟುಂಬವು ವೈದ್ಯರ ಅಂಗಗಳನ್ನು ದಾನ ಮಾಡಿದೆ ಎಂದು ಉಲ್ಲೇಖಿಸಿದೆ.”
ವರದಿಯ ಪ್ರಕಾರ, ಅನ್ಹುಯಿ ಪ್ರಾಂತ್ಯದ ರಾಜಧಾನಿಯಾದ ಹೆಫೀ ಸಿಟಿಯ ಆಸ್ಪತ್ರೆಯಲ್ಲಿ ಸಹ ವೈದ್ಯರು ಝಾವೊಗೆ ಅಂತಿಮ ಗೌರವ ಸಲ್ಲಿಸುತ್ತಿರುವುದನ್ನು ಚಿತ್ರ ತೋರಿಸುತ್ತದೆ. “ನನ್ನ ಮಗ ವೈದ್ಯನಾಗಿದ್ದನು, ಗಾಯಾಳುಗಳನ್ನು ಗುಣಪಡಿಸುತ್ತಿದ್ದನು ಮತ್ತು ಸಾಯುತ್ತಿರುವವರನ್ನು ರಕ್ಷಿಸುತ್ತಿದ್ದನು ಮತ್ತು ಇತರರ ಒಳಿತಿಗಾಗಿ ಅವನು ಯಾವಾಗಲೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದನು” ಎಂದು ಅವರ ತಂದೆ ಹೇಳಿದ್ದಾರೆ ಎಂದು ತಿಳಿಸಲಾಗಿದೆ.
ಸಿಕ್ಸ್ತ್ ಟೋನ್ ವೆಬ್‌ಸೈಟ್ ಪ್ರಕಾರ 2018 ರ ಲೇಖನದಲ್ಲಿ ಇದೇ ಚಿತ್ರ ಕಂಡುಬಂದಿದ್ದು, ಚೀನಾದಲ್ಲಿ ಅಂಗಾಂಗ ದಾನದ ಬೆಳವಣಿಗೆಯ ಪ್ರವೃತ್ತಿಯನ್ನು ಚರ್ಚಿಸಲಾಗಿದೆ. ಲೇಖನದ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಅಂಗಾಂಗ ದಾನಿಗಳಿಗೆ ವೈದ್ಯರು ಮತ್ತು ದಾದಿಯರು ಗೌರವ ಸಲ್ಲಿಸುತ್ತಿರುವುದನ್ನು ಫೋಟೋ ತೋರಿಸುತ್ತದೆ. ಸೆಪ್ಟೆಂಬರ್ 29, 2016 ರಂದು ಅನ್ಹುಯಿ ಪ್ರಾಂತ್ಯದ ಹೆಫೀಯಲ್ಲಿರುವ ಆಸ್ಪತ್ರೆಯಲ್ಲಿ ರೋಗಿಗೆ ಬಳಸಬಹುದಾದ ಅಂಗಗಳನ್ನು ತೆಗೆದುಹಾಕುವುದನ್ನು ಈ ಪ್ರಕ್ರಿಯೆಯು ಒಳಗೊಂಡಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 2016ರಲ್ಲಿ ಚೀನಾದ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮರಣದ ನಂತರ ತನ್ನ ಅಂಗಾಂಗಗಳನ್ನು ದಾನ ಮಾಡಿದ ಸಹೋದ್ಯೋಗಿಗೆ ವೈದ್ಯರು ಗೌರವ ಸಲ್ಲಿಸುತ್ತಿರುವ ಹಳೆಯ ಚಿತ್ರಣವನ್ನು AIIMS ವೈದ್ಯರು CPI(M) ನಾಯಕ ಸೀತಾರಾಮ್ ಯೆಚೂರಿ ಅವರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತೀಯ ಸೈನಿಕರಿಗೆ ಸಿಕ್ಕಿಬಿದ್ದ ಜಿಹದಿಗಳು ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ