FACT CHECK | ಭಾರತೀಯ ಸೈನಿಕರಿಗೆ ಸಿಕ್ಕಿಬಿದ್ದ ಜಿಹದಿಗಳು ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
ವ್ಯಕ್ತಿಗಳಿಬ್ಬರು ರಸ್ತೆಯ ಬದಿಯಲ್ಲಿರುವ ಅಂಗಡಿಯೊಂದರ ಬಾಗಿಲನ್ನು ಆಯುದಗಳನ್ನು ಬಳಸಿ ಹೊಡೆದು ಹಾಕುತ್ತಿರುವ ಸಂದರ್ಭದಲ್ಲಿ ಇಬ್ಬರು ಸೇನಾ ಸಿಬ್ಬಂದಿಗಳು ತಮ್ಮ ವಾಹನವನ್ನು ನಿಲ್ಲಿಸಿ ಅವರ ಮೇಲೆ ಗನ್‌ಪಾಯಿಂಟ್ ತೋರಿಸಿ ನೆಲದ ಮೇಲೆ ಕುಳಿತುಕೊಳ್ಳಲು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
“ಭಾರತೀಯ ಸೈನಿಕರು ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ತಪ್ಪದೆ ಅರ್ಥ ಮಾಡಿಕೊಳ್ಳಿ. ಏಕೆಂದರೆ ಜಿಹಾದಿಗಳಿಗೆ ನಮ್ಮ ಹೆಮ್ಮೆಯ ಖಡಕ್ ಸೈನಿಕರು ಮಾತ್ರ ಬುದ್ಧಿ ಕಲಿಸಬಲ್ಲರು. ಜಾಗೋ ಭಾರತ್ ಭಾರತೀಯ ಸನಾತನ ಹಿಂದೂ ನಾವೆಲ್ಲ ಒಂದು. ಜಿಹಾದಿಗಳ ಹುಟ್ಟಡಗಿಸಲು ಬಿಜೆಪಿ ಭಾರತ ದೇಶಕ್ಕೆ, ಬಹಳ ಮುಖ್ಯವಾಗಿ ಬೇಕಾಗಿದೆ”ಎಂಬ ಬರಹದೊಂದಿಗೆ 17, ಸೆಪ್ಟೆಂಬರ್ 2024 ರಂದು ಮಲ್ಲಿಕಾರ್ಜುನ ಎಂಬ ಎಕ್ಸ್ ಖಾತೆ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ನಡೆದ ಘಟನೆ ಭಾರತದಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಮಾಹಿತಿಗಾಗಿ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 17, 2024 ರಂದು ಬಾಂಗ್ಲಾದೇಶದ ಮಾಧ್ಯಮ ಜಮುನಾ ಟಿವಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಕಂಡುಬಂದಿದೆ. ವಿಡಿಯೋಗೆ ನೀಡಿದ ವಿವರಣೆಯ ಪ್ರಕಾರ ಫರೀದ್‌ಪುರದಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸೇನೆಯು ವ್ಯಕ್ತಗಳನ್ನು ಬಂಧಿಸಿದೆ ಎಂಬ ಮಾಹಿತಿ ಇದರಲ್ಲಿದೆ.
ಆಗಸ್ಟ್ 17, 2024 ರಂದು, ಬಾಂಗ್ಲಾದೇಶದ ವೆಬ್ಸೈಟ್ ಢಾಕಾ ಪೋಸ್ಟ್ ಈ ಕುರಿತು ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ‘ಆಗಸ್ಟ್ 14 ರಂದು ಫರೀದ್‌ಪುರದ ಬೋಲ್ಮರಿಯಲ್ಲಿ ಬಿಎನ್ಪಿ ಬಣಗಳ ನಡುವಿನ ಗಲಾಟೆಯ ಸಂದರ್ಭ ಬಾಂಗ್ಲಾದೇಶ ಸೇನೆಯು ಈ ವ್ಯಕ್ತಿಗಳನ್ನು ಬಂಧಿಸಿದೆ. ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಅಂಗಡಿಗಳನ್ನು ಧ್ವಂಸಗೊಳಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಬಂಧಿತ ವ್ಯಕ್ತಿಗಳನ್ನು ಮೊಹಮ್ಮದ್ ತುತುಲ್ ಹೊಸೈನ್(28) ಮತ್ತು ದುಖು ಮಿಯಾ(30) ಎಂದು ಗುರುತಿಸಲಾಗಿದೆ. ವೈರಲ್ ವಿಡಿಯೋದಲ್ಲಿರುವ ಇಬ್ಬರನ್ನು ಸೇನೆಯು ಬಂಧಿಸಿ ಪೊಲೀಸರಿಗೆ ಒಪ್ಪಿಸಿದೆ ಎಂದು ಬೋಲ್ಮರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಶಾಹಿದುಲ್ ಇಸ್ಲಾಂ ಹೇಳಿದ್ದಾರೆ’ ಎಂದು ವರದಿಯಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಂಗಡಿ ಬಾಗಿಲುಗಳನ್ನು ಹೊಡೆದು ಧ್ವಂಸಗೊಳಿಸುತ್ತಿದ್ದ ಇಬ್ಬರು ಜಿಹದಿಗಳನ್ನು ಭಾರತೀಯ ಸೈನಿಕರು ಬಂಧಿಸಿದ್ದಾರೆ ಎಂದು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ನಡೆದ ಘಟನೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಇದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬೆಂಗಳೂರಿಗೆ ಕ್ಷುದ್ರಗ್ರಹ ಅಪ್ಪಳಿಸಿದ್ದು ನಿಜವೇ?