ಕೃಷಿ ಮಸೂದೆ ರೈತಪರವಿಲ್ಲ; ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾಳ ಕಾಯ್ದೆ ರದ್ದುಮಾಡುತ್ತೇವೆ: ರಾಹುಲ್‌ಗಾಂಧಿ

ಕೃಷಿ ಮಸೂದೆಗಳು ರೈತರ ಪರವಾಗಿದ್ದರೆ ಪ್ರತಿಭಟನೆಗಳು ನಡೆಯುತ್ತಿದ್ದವೆ? ರೈತರ ಬೀದಿಗಳಿದಿದು ಹೋರಾಟ ಮಾಡುತ್ತಿದ್ದರೆ? ರೈತರು ಹೋರಾಟ ಮಾಡುತ್ತಿದ್ದಾರೆ ಎಂದರೆ ಈ ನೀತಿಗಳು ರೈತ ವಿರೋಧಿಯಾಗಿವೆ ಎಂದಲ್ಲವೇ? ರೈತರನ್ನು ನಾಶ ಮಾಡಲು ನಾವು ಬಿಡುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಈ ರೈತ ವಿರೋಧಿ ಕೃಷಿ ಕಾಯ್ದೆ ಗಳನ್ನು ಕಿತ್ತುಹಾಕುತ್ತೇವೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ “ಖೇತಿ ಬಜಾವೋ ಯಾತ್ರಾ” ಟ್ರ್ಯಾಕ್ಟರ್ ರ್‍ಯಾಲಿ ಉದ್ಘಾಟಸಿ ಮಾತನಾಡಿರುವ ರಾಹುಲ್‌ಗಾಂಧಿ, ಕನಿಷ್ಠ ಬೆಂಬಲ ಬೆಲೆ, ಆಹಾರ ಸಂಗ್ರಹಣೆ ಮತ್ತು ಸಗಟು ವ್ಯಾಪಾರಗಳು ದೇಶದ ಮೂರು ಸ್ತಂಭಗಳಿದ್ದಂತೆ. ಪ್ರಧಾನಿ ನರೇಂದ್ರ ಮೋದಿ ಈ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಬಿಜೆಪಿಯ ಏಕೈಕ ಗುರಿ ಕನಿಷ್ಠ ಬೆಂಬಲ ಬೆಲೆ ಮತ್ತು ಆಹಾರ ಸಂಗ್ರಹಣೆಯನ್ನು ನಾಶಪಡಿಸುವುದೇ ಆಗಿದೆ. ಆದರೆ ಎಂದಿಗೂ ಇದನ್ನು ಮಾಡಲು ಕಾಂಗ್ರೆಸ್ ಬಿಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಕರಾಳ ಕಾಯ್ದೆಗಳನ್ನು ತೆಗೆದುಹಾಕುತ್ತದೆ ಎಂಬುದನ್ನು ನಾನು ಖಾತರಿಪಡಿಸುತ್ತೇನೆ” ಎಂದು ಹೇಳಿದ್ದಾರೆ.

ಬಿಜೆಪಿ ತನ್ನ ಕಾರ್ಪೋರೇಟ್‌ ಹಿತಾಸಕ್ತಿಗಳನ್ನು ಪೂರೈಸುವ ಉದ್ದೇಶದಿಂದ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಜಾರಿಗೆ ತಂದಿದೆ. ಆದರೆ, ಇದು ಐತಿಹಾಸಿಕ ಸುಧಾರಣೆಗಳು ಎಂದು ಬಿಜೆಪಿ ಹೇಳಿಕೊಂಡಿದೆ. ಇವು ರೈತರನ್ನು ನಾಶ ಮಾಡುವ ಮಸೂದೆಗಳಾಗಿವೆ ಎಂದು ರಾಹುಲ್‌ಗಾಂಧಿ ಆರೋಪಿಸಿದ್ದಾರೆ.

ಪಂಜಾಬ್‌ ಸೇರಿದಂತೆ ದೇಶಾದ್ಯಂತ ಕೇಂದ್ರ ಕೃಷಿ ಮಸೂದೆಯ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಭಾರತ್‌ ಬಂದ್‌ ಕೂಡ ಯಶಸ್ವಿಯಾಗಿದೆ. ಅಲ್ಲದೆ, ಕರ್ನಾಟಕದಲ್ಲಿ ಕರ್ನಾಟಕ ಬಂದ್‌ ಕೂಡ ಮಾಡಲಾಗಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ರೈತವಿರೋಧಿ ಕಾನೂನುಗಳನ್ನು ವಿರೋಧಿಸಿ, ಪಂಜಾಬ್‌ನ ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಕಳೆದ ತಿಂಗಳು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಿದ್ದಾರೆ.

ಕಾಂಗ್ರೆಸ್‌ ಕೂಡ ದೇಶಾದ್ಯಂತ ಕೃಷಿ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದು, ನವೆಂಬರ್‌ 10ರವರೆಗೆ ಪಂಜಾಬ್‌ನಿಂದ ದೆಹಲಿಯ ವರೆಗೆ “ಖೇತಿ ಬಜಾವೋ ಯಾತ್ರಾ” ನಡೆಸುತ್ತಿದೆ.


ಇದನ್ನೂ ಓದಿ: ಅಜಯ್ ಸಿಂಗ್ ಬಿಷ್ಠ್ ಎಂಬಾತ ಯೋಗಿ ಆದಿತ್ಯನಾಥ್ ಆದದ್ದು ಹೇಗೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights