ಬಡಜನರ ಆರೋಗ್ಯ, ಜೀವ ಉಳಿವಿಗಾಗಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪತ್ರ ಚಳುವಳಿ

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ಕಾರಣಕ್ಕಾಗಿ ಕಳೆದ 40ಕ್ಕೂ ಹೆಚ್ಚು ದಿನಗಳಿಂದ ಮದ್ಯ ಮಾರಾಟಕ್ಕೆ ತಡೆ ಒಡ್ಡಲಾಗಿದೆ. ಆದರೆ ಇಂದು ಎರಡನೇ ಹಂತದ ಲಾಕ್‌ಡೌನ್‌ ಕೊನೆಗೊಳ್ಳಲಿದ್ದು ನಾಳೆಯಿಂದ ಮೂರನೇ ಹಂತದ ಲಾಕ್‌ಡೌನ್‌ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಆತಂಕಿತರಾಗಿದ್ದು, ಮದ್ಯ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಮದ್ಯ ನಿಷೇಧ ಆಂದೋಲನದ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಸಹ ಬರೆದಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ಮಾನ್ಯ ಯಡಿಯೂರಪ್ಪನವರು
ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಮಾನ್ಯರೇ ,

ಮಹಾಮಾರಿಯಂತೆ ಬಂದೆರಗಿರುವ ಕೊರೋನಾದ ಲಾಕ್‍ಡೌನ್, ಬಡವರ ಪಾಲಿಗೆ ಸಂಕಷ್ಟಗಳ ಮೂಟೆಯನ್ನೇ ಹೊತ್ತು ತಂದಿದೆ. ಕೊರೋನಾ ಕಾರಣವಾಗಿ ಮದ್ಯದಂಗಡಿಗಳನ್ನು ಮುಚ್ಚಿಸಿದ್ದು ಮಾತ್ರ ಕುಡುಕರ ಕುಟುಂಬದ ಹೆಣ್ಣುಮಕ್ಕಳಿಗೆ ಕೊಂಚ ನೆಮ್ಮದಿಯನ್ನು ಕೊಟ್ಟಿತ್ತು. ರೇಷನ್ನಿನ ಬರಿಯ ಅಕ್ಕಿಯ ಗಂಜಿಯನ್ನೇ ಕುಡಿದಿರಬಹುದು, ಆದರೆ ಮನೆಯವರೆಲ್ಲ ಹಂಚಿಕೊಂಡು ಕುಡಿದಿದ್ದರು. ಅಪ್ಪ ಕುಡಿದು ಬಂದು ಅಮ್ಮನಿಗೆ ಪೆಟ್ಟು ಕೊಡುವುದು ನಿಂತಿದ್ದರಿಂದ ಮಕ್ಕಳು ಸಮಾಧಾನದ ನಿದ್ದೆ ಮಾಡಿದ್ದವು. ಬಹಳ ದಿನಗಳ ನಂತರ ಮದ್ಯದ ದುಃಸಪ್ನವಿಲ್ಲದೇ ಬಹಳಷ್ಟು ಕುಟುಂಬಗಳು ನೆಮ್ಮದಿಯ ಉಸಿರುಬಿಟ್ಟಿದ್ದವು. ಚಟಕ್ಕೆ ಬಿದ್ದವರೂ ಒಂದೂವರೆ ತಿಂಗಳಿಂದ ಮದ್ಯವಿಲ್ಲದೇ, ಪ್ರಾರಂಭದಲ್ಲಿ ದೈಹಿಕ, ಮಾನಸಿಕ ತೊಂದರೆ ಅನುಭವಿಸಿದರೂ ಈಗ ಎಲ್ಲ ಮೀರಿ ಸಮಚಿತ್ತವನ್ನು ಗಳಿಸಿಕೊಂಡಿದ್ದಾರೆ. ಹೆಚ್ಚಿನವರು ಈಗ ಮದ್ಯನಿಷೇಧದ ಪರವಾಗಿದ್ದಾರೆ.

ನಾವು ತಮ್ಮ ಗಮನಕ್ಕೆ ತರುತ್ತಿರುವುದು ಏನೆಂದರೆ- ಈಗ ಮದ್ಯ ಮಾರಾಟ ಮತ್ತೆ ಪ್ರಾರಂಭಿಸಿದರೆ,  ಕುಡಿದ ಮತ್ತಿನಲ್ಲಿ ಸೋಂಕು ಅಂಟಿಸುವ ಯಾವ ಅನಾಹುತಕಾರಿ ಕೆಲಸವನ್ನಾದರೂ ಕುಡುಕರು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಮತ್ತೆ ಈ ಕಾರಣಕ್ಕೇ ಸೋಂಕು ವ್ಯಾಪಕವಾದರೆ ಅದರ ಹೊಣೆ ಯಾರದ್ದು? ಲಾಕ್‍ಡೌನ್ ನಿಯಂತ್ರಿಸಲು ಹರಸಾಹಸ ಪಟ್ಟು ಹೈರಾಣಾಗಿರುವ ಪೊಲೀಸರು ಈಗ ಮದ್ಯದಂಗಡಿ ಮುಂದೆ ಕುಡುಕರನ್ನೂ ಕಾಯಬೇಕು! ಜೀವ ಪಣಕ್ಕಿಟ್ಟು ಹಗಲಿರುಳು ಜನರ ಜೀವ ರಕ್ಷಿಸಲು ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ಮತ್ತಷ್ಟು ಈ ಆತಂಕದ ಹೊರೆ ಹೊರಿಸಿದಂತಾಗುತ್ತದೆ. ಮದ್ಯದಂಗಡಿ ತೆರೆಯದಿರಲು ಇಷ್ಟೆಲ್ಲ ಗಂಭೀರ ಸಕಾರಣಗಳಿವೆ. ಆದರೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ,  ‘ಮದ್ಯ ಮಾರಾಟಗಾರರ ಹಿತಾಸಕ್ತಿಗೆ ಸರ್ಕಾರ ಮಣಿದಿದೆ’ ಎಂಬ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ನಾಡಿನ ಸ್ವಾಸ್ಥ್ಯ ಮತ್ತು ಜನರ ಆರೋಗ್ಯವನ್ನು ದಯಮಾಡಿ ಪಣಕ್ಕಿಡಬೇಡಿ ಎಂದು ಮನವಿ ಮಾಡುತ್ತೇವೆ.

ಸರಕಾರಕ್ಕೆ ಆದಾಯ ಬೇಕು ನಿಜ.  ಅದಕ್ಕಾಗಿ ಕೋಟಿಗಟ್ಟಲೆ  ಸಂಪತ್ತಿರುವ ಸಿರಿವಂತರಿಗೆ ‘ಕೊರೋನಾ ತೆರಿಗೆ’ ಹಾಕುವುದು ಹಾಗೂ ಮುಜರಾಯಿ ದೇವಸ್ಥಾನಗಳ ಹಣ, ಬಂಗಾರ ಬಳಸಿಕೊಳ್ಳುವುದು ಇವುಗಳೇ ಮುಂತಾದ ಹಲವು ನೈತಿಕ, ಯೋಗ್ಯ ದಾರಿಗಳಿವೆ. ಈ ದಿಕ್ಕಲ್ಲಿ ತಾವು ಯೋಚಿಸಬೇಕೆಂದು ವಿನಂತಿಸುತ್ತೇವೆ. ಆದರೆ ಯಾವ ಕಾರಣಕ್ಕೂ ನೊಂದ ಹೆಣ್ಮಕ್ಕಳ ಬೆವರು, ರಕ್ತ, ಕಣ್ಣೀರಿನಿಂದ ಕಟ್ಟಿರುವ ಲಕ್ಷಾಂತರ ಕುಟುಂಬಗಳು, ಈ ಮದ್ಯ ಮಾರಾಟವಿಲ್ಲದ ದಿನಗಳಲ್ಲಿ ಅನುಭವಿಸಿದ ಕೊಂಚ ನೆಮ್ಮದಿಯನ್ನೂ ಸರ್ಕಾರದ ಆದಾಯದ ಹೆಸರಲ್ಲಿ ಒದ್ದು ಒರೆಸಿ ಹಾಕಿ, ಜೀವಗಳ ಬಲಿ ಕೇಳಬೇಡಿ ಎಂದು  ಪ್ರಾರ್ಥಿಸುತ್ತೇವೆ.  ದಯಮಾಡಿ ‘ಬಡವರ ಬದುಕು, ಜೀವ ಪಣಕ್ಕಿಡಬೇಡಿ. ಮದ್ಯದಂಗಡಿ ತೆರೆಯಬೇಡಿ’ ಎಂದು ಲಕ್ಷಾಂತರ ನೊಂದ ಮಹಿಳೆ ಮತ್ತು ಮಕ್ಕಳ ಪರವಾಗಿ ಇದು ನಮ್ಮ ಕಳಕಳಿಯ ಮನವಿ.

ರೂಪ ಹಾಸನ ಹಾಸನ ಮತ್ತು
ಶಾರದಾ ಗೋಪಾಲ , ಧಾರವಾಡ

 

ಇಂದು ಮಧ್ಯಾಹ್ನದಿಂದ ಪತ್ರ ಚಳುವಳಿ ಆರಂಭಗೊಂಡಿದ್ದು, ಈ ಪತ್ರದ ಕೆಳಕೆ ಸಾಮಾಜಿಕ ಜಾಲತಾಣದಲ್ಲಿ ಜಾಲತಾಣಿಗರು ತಮ್ಮ ಹೆಸರುಗಳನ್ನು ಸೇರಿಸಿ ಹಂಚುತ್ತಿದ್ದಾರೆ. ಪತ್ರವು ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights