ನೆರೆ ನೋವು ಹೇಳತೀರದು! : ಮುರಿದ ಶಾಲೆಯಲ್ಲೇ ವಾಸ ಮಾಡ್ತಿರೋ ಕುಟುಂಬ

2018ರಲ್ಲಿ ಮಲೆನಾಡಲ್ಲಿ ಸುರಿದ ಮಳೆ ಆ ಕುಟುಂಬವನ್ನ ಸಂಪೂರ್ಣ ಬೀದಿಗೆ ತಂದಿತ್ತು. ಮನೆಯ ಗೋಡೆಗಳು ಬಿರುಕು ಬಿಟ್ಟು ಕುಸಿಯುತ್ತಿದ್ದಾಗ ಅಧಿಕಾರಿಗಳು ಅವ್ರಿಗೆ ನೆಲೆ ಕೊಟ್ಟಿದ್ದು ಸರ್ಕಾರಿ ಶಾಲೇಲಿ. ಮುಚ್ಚಿದ ಗೌರ್ನಮೆಂಟ್ ಸ್ಕೂಲಲ್ಲಿ ಸಂಸಾರ ಆರಂಭಿಸಿದ ಆ ಕುಟುಂಬಕ್ಕೆ ಒಂದೂವರೆ ವರ್ಷಗಳಿಂದ ಬಿಡುಗಡೆಯ ಭಾಗ್ಯವೇ ಸಿಕ್ಕಿಲ್ಲ. ಜನವರಿ, ಫೆಬ್ರವರಿ, ಮಾರ್ಚ್‍ಗೆ ಮನೆ ಎಂದೇಳ್ತಿರೋ ಸರ್ಕಾರ ಒಂದೂವರೆ ವರ್ಷದಿಂದ ಅತ್ತ ತಿರುಗಿಯೂ ನೋಡಿಲ್ಲ. ಆಗೊಮ್ಮೆ-ಈಗೊಮ್ಮೆ ಬರೋ ಅಧಿಕಾರಿಗಳು ಬರುತ್ತೆ-ಬರುತ್ತೆ ಅಂತ ಭರವಸೆಯ ಮನೆಯನ್ನೇ ಕಟ್ತಿದ್ದಾರೆ. ಇದು ಕಾಫಿನಾಡ ನೊಂದ ಕುಟುಂಬದ ಕಥೆ…..

ಬಿರುಕು ಬಿಟ್ಟ ಸೂರು. ಕುಸಿದು ಬಿದ್ದ ಮನೆ. ಮನೆ ಸ್ಥಿತಿ ಕಂಡು ಕಂಗಲಾದ ಯಜಮಾನ. ಕತ್ತಲ ಕೋಣೇಲಿ ಅಡುಗೆ ಮಾಡ್ತಿರೋ ಯಜಮಾನ್ತಿ. ಅದು ಸರ್ಕಾರಿ ಶಾಲೇಲಿ. ಇಂತಹಾ ಕರುಣಾಜನಕ ಕಥೆಗೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹುಲಿಗರಡಿ ಗ್ರಾಮದ ರಾಘವೇಂದ್ರ-ಶಾಂಭವಿ ದಂಪತಿ. ಯಾಕಂದ್ರೆ, 2018ರಲ್ಲಿ ಮಲೆನಾಡ ಜಲಪ್ರಳಯಕ್ಕೆ ಇವ್ರ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಹಾಗಾಗಿ, 2018 ಆಗಸ್ಟ್ 25ನೇ ತಾರೀಕೆ ಅಧಿಕಾರಿಗಳು ಮುಚ್ಚಿದ ಶಾಲಾ ಕೊಠಡಿಗೆ ತಂದು ಬಿಟ್ಟಿದ್ರು. ಅಂದಿನಿಂದ ಇಲ್ಲೆ ಬದುಕ್ತಿದ್ದಾರೆ. ಅಡುಗೆ, ಊಟ, ವಾಸ, ನಿದ್ರೆ ಎಲ್ಲಾ ಇಲ್ಲೆ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯವನ್ನ ಕೇಳೋದೇ ಬೇಡ. ತಾತ್ಕಾಲಿಕವಾಗಿರಿ ಎಂದ ಅಧಿಕಾರಿಗಳು ಒಂದೂವರೆ ವರ್ಷದಿಂದ ಇವ್ರಿಗೆ ಮನೆ ಕಟ್ಟಿಸಿಕೊಡೋದ್ರಲ್ಲೇ ಇದ್ದಾರೆ. ಬಂದೋರು ತಿಂಗಳುಗಳ ಹೆಸರು ಹೇಳಿ ಹೋಗ್ತಿದ್ದಾರೋ ವಿನಃ ಬದಲಿ ವ್ಯವಸ್ಥೆ ಮಾಡಿಲ್ಲ. ಇವ್ರ ಬದುಕಿನ ಶೈಲಿ ನೋಡುದ್ರೆ ಸರ್ಕಾರ ಇದ್ಯಾ ಅದು ಬೇಕಾ ಅನ್ಸತ್ತೆ.

 

ಮಲೆನಾಡು ಈ ಬಾರಿಯೂ ಭೀಕರ ಜಲಪ್ರಳಯಕ್ಕೆ ಸಾಕ್ಷಿಯಾಗಿತ್ತು. ನಿರಾಶ್ರಿತರು-ನಿರ್ಗತಿಕರಾದೋರು ಸಾವಿರಾರು ಜನ. ಅವ್ರಿಗೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಿದೆ. ಆದ್ರೆ, ವಿಪರ್ಯಾಸವೋ-ದುರಂತವೋ ಈ ಕಟುಂಬಕ್ಕೆ 2018ರ ಮಳೆಗೆ ಸೂರು ಕಳೆದುಕೊಂಡ್ರು ಇಲ್ಲಿವರೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ. ಮನೆ ಕನಸಿನ ಮಾತಾಗಿದೆ. ಚುನಾವಣೆ ಸಂದರ್ಭದಲ್ಲಿ ಇದೇ ಶಾಲೆ ಕೊಠಡಿ ಬೂತ್ ಆಗಿತ್ತು. ಆಗ ಬಂದಿದ್ದ ತಹಶೀಲ್ದಾರ್ ಇನ್ನೂ ಸಿಕ್ಕಿಲ್ವಾ, ಇವ್ರಿಗೆ ಬೇಗ ಮನೆ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ರು. ಆದ್ರೆ, ಎಲೆಕ್ಷನ್ ಮುಗಿದ ಮೇಲೆ ಎಲ್ಲರೂ ಮರೆತ್ರು. ಶಾಸಕರು ಬಂದೇ ಇಲ್ಲ. ಅಧಿಕಾರಿಗಳು ಬಂದ್ರು ಉಪಯೋಗವಿಲ್ಲ. ಒಂದು ಎಕರೆ ಅಡಕೆ ತೋಟ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಇರೋ ಮಗನನ್ನ ಹಾಸ್ಟೆಲ್‍ನಲ್ಲಿ ಬಿಟ್ಟು ಕೂಲಿ ಮಾಡ್ತಾ ಸರ್ಕಾರದ ನೆರವಿನ ಹಾದಿ ಕಾಯ್ತಿದ್ದಾರೆ.

ಪಾಪ, ಈ ಮುಗ್ಧ ಹಳ್ಳಿಗರು ಯಾರ ಬಗ್ಗೆಯೂ ಅಸಮಾಧಾನ ತೋರ್ತಿಲ್ಲ. ಸರ್… ನಮಗೊಂದು ಮನೆ ಕಟ್ಟಿಸಿಕೊಡಿ ಅಂತ ಅಂಗಲಾಚ್ತಾರೆ. ಇವ್ರ ಮುಗ್ಧತೆಯನ್ನೇ ಬಂಡವಾಳ ಮಾಡ್ಕೊಂಡಿರೋ ಅಧಿಕಾರಿಗಳು ಅತ್ತ ತಲೆ ಹಾಕಿಲ್ಲ. ಹೋದ್ರು ಸಮಾಧಾನ ಮಾಡೋದ್ನ ಚೆನ್ನಾಗಿ ಕಲ್ತಿದ್ದಾರೆ. ಇವ್ರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಲಿಗೆ ಉಗಿದು ಉಪ್ಪು ಹಾಕ್ತಿದ್ದಾರೆ. ಅದೇನೆ ಇರ್ಲಿ, ಒಂದೂವರೆ ವರ್ಷದ ಹಾಳಾಗ್ ಹೋಗ್ಲಿ, ಈಗ್ಲಾದ್ರು, ಅಧಿಕಾರಿಗಳು ಈ ಬಡಕುಟುಂಬದ ನೆರವಿಗೆ ನಿಲ್ಲಲಿ ಅನ್ನೋದು ನಮ್ಮ ಆಶಯ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights