ಹೈಟಿಯಲ್ಲಿ ಭೀಕರ ದುರಂತ: ಟ್ರಕ್ ಸ್ಪೋಟಗೊಂಡು 60ಕ್ಕೂ ಹೆಚ್ಚು ಜನರು ಸಾವು
ಹೈಟಿಯ ಎರಡನೇ ಅತಿದೊಡ್ಡ ನಗರ ಕ್ಯಾಪ್-ಹೈಟಿಯನ್‌ನಲ್ಲಿ ಇಂಧನ ಟ್ರಕ್ ಉರುಳಿಬಿದ್ದು ಸ್ಫೋಟಗೊಂಡಿದೆ. ದುರಂತ ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ನಗರದ ಪೂರ್ವ ತುದಿಯಲ್ಲಿರುವ ಸನ್ಮಾರಿ ಪ್ರದೇಶದಲ್ಲಿ ಮಧ್ಯರಾತ್ರಿಯ ವೇಳೆ ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ. ನಂತರ ಅದು ಸ್ಪೋಟಗೊಂಡಿದ್ದು, ಪ್ರದೇಶದಲ್ಲಿದ್ದವರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ಥಳೀಯ ಆಸ್ಪತ್ರೆಯನ್ನು ವಿಸ್ತರಿಸಲಾಗಿದೆ ಎಂದು ಮೇಯರ್ ಪಿಯರೆ ವೈವ್ರೋಸ್ ಹೇಳಿದ್ದಾರೆ. ಗಾಯಗೊಂಡವರ ಒಟ್ಟು ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
“ನಮಗೆ ಮಾನವ ಸಂಪನ್ಮೂಲಗಳು ಮತ್ತು ಸೀರಮ್, ಗಾಜ್ ಮತ್ತು ಗಂಭೀರವಾದ ಸುಟ್ಟಗಾಯಗಳ ಸಂದರ್ಭದಲ್ಲಿ ಬಳಸಬಹುದಾದಂತಹ ವಸ್ತು ಸಂಪನ್ಮೂಲಗಳ ಅಗತ್ಯವಿದೆ” ಎಂದು ವೈವ್ರೋಸ್ ಹೇಳಿದ್ದಾರೆ.
ಸ್ಫೋಟದ ನಂತರ ರಕ್ಷಣಾ ಸಿಬ್ಬಂದಿ ಪ್ರದೇಶವನ್ನು ಶುಚಿಗೊಳಿಸುವ ವೇಳೆ, ಅವಶೇಷಗಳ ಕೆಳಗೆ ಮೃತ ದೇಹಗಳು ಬಿದ್ದಿದ್ದವು. ಆ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಸ್ಫೋಟದಿಂದಾಗಿ ಬೀದಿಯಲ್ಲಿರುವ ಮನೆಗಳು ಮತ್ತು ಅಂಗಡಿಗಳ ಮುಂಭಾಗಗಳಿಗೆ ಹಾನಿಯಾಗಿದೆ ಮತ್ತು ಮೋಟರ್‌ಬೈಕ್‌ಗಳು ಮತ್ತು ಕಾರುಗಳು ಸುಟ್ಟುಹೋಗಿವೆ ಎಂದು ರಾಯಿಟರ್ಸ್ ಪತ್ರಕರ್ತರು ತಿಳಿಸಿದ್ದಾರೆ.
ಮೃತರಿಗೆ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು; ಐವರ ಬಂಧನ