ಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ; ಬಂಗಾಳಿ ಏಕೆ ಹೋಗಬಾರದು: ಮಮತಾ ಬ್ಯಾನರ್ಜಿ
ಗುಜರಾತಿಯೊಬ್ಬರು ದೇಶದಾದ್ಯಂತ ಹೋಗಬಹುದಾದರೆ, ಬಂಗಾಳಿಯೊಬ್ಬ ಏಕೆ ಹೋಗಬಾರದು?” ಎಂದು ಟಿಎಂಸಿ ನಾಯಕಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗೋವಾದ ಅಸ್ಸೋನೋರಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ನಾನು ಬಂಗಾಳಿ ಎಂದು ನನಗೆ ಹೇಳಲಾಗಿದೆ. ಹಾಗಾದರೆ ಅವರು ಯಾರು? ಅವರು ಗುಜರಾತಿ? ಅವರು ಗುಜರಾತಿ ಆಗಿರುವುದರಿಂದ ಅವರು ಇಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆಯೇ? ಒಬ್ಬ ಬಂಗಾಳಿ ರಾಷ್ಟ್ರಗೀತೆಯನ್ನು ಬರೆಯಬಹುದು. ಆದರೆ, ಒಬ್ಬ ಬಂಗಾಳಿ ಗೋವಾಕ್ಕೆ ಬರಲು ಸಾಧ್ಯವಿಲ್ಲವೇ? ನಾವೆಲ್ಲರೂ ಗಾಂಧೀಜಿಯನ್ನು ಗೌರವಿಸುತ್ತೇವೆ. ಗಾಂಧೀಜಿ ಬೆಂಗಾಲಿಯೋ ಅಥವಾ ಬೆಂಗಾಲಿ ಅಲ್ಲದವರೋ ಅಥವಾ ಗೋವಾನಿಯೋ ಅಥವಾ ಯುಪಿಯವರೋ ಎಂದು ನಾವು ಎಂದಾದರೂ ಪ್ರಶ್ನಿಸಿದ್ದೇವೆಯೇ? ದೇಶ್ ಕಾ ನೇತಾ ವೋಹಿ ಹೋತಾ ಹೈ ಜೋ ಸಬ್ಕೋ ಸಾಥ್ ಲೇಕೆ ಚಲತಾ ಹೈ (ರಾಷ್ಟ್ರೀಯ ನಾಯಕ ಎಂದರೆ ಎಲ್ಲರನ್ನು ಕರೆದುಕೊಂಡು ಹೋಗುವವರು)” ಎಂದು ಹೇಳಿದ್ದಾರೆ.
ಗೋವಾದ ರಾಜಕೀಯಕ್ಕೆ ತಮ್ಮ ಪಕ್ಷದ ಪ್ರವೇಶವನ್ನು ಇತರ ಪಕ್ಷಗಳು ಪ್ರಶ್ನಿಸಿವೆ. ಆದಾಗ್ಯೂ, ಗೋವಾದಲ್ಲಿರುವ ಟಿಎಂಸಿ ನಾಯಕರನ್ನು ರಿಮೋಟ್ ಕಂಟ್ರೋಲ್ ಮಾಡಲು ನಾವು ಗೋವಾಕ್ಕೆ ಬಂದಿಲ್ಲ. ನಾವು ಅವರನ್ನು ಬೆಂಬಲಿಸಲು ಬಂದಿದ್ದೇವೆ. “ಯೇ ಲೋಗ್ ಕ್ಯಾ ದೇಶ್ ಕಾ ನೇತಾ ಬನೇಗಾ? ಗೋವಾ ಗುಜರಾತ್ ಸೆ ಚಲತಾ ಹೈ. (ಅವರು ರಾಷ್ಟ್ರೀಯ ನಾಯಕರಾಗುತ್ತಾರೆಯೇ? ಅವರು ಗೋವಾವನ್ನು ಗುಜರಾತ್‌ನಿಂದ ನಿಯಂತ್ರಿಸುತ್ತಾರೆ). ಗೋವಾವನ್ನು ಗುಜರಾತ್ ಅಥವಾ ದೆಹಲಿಯಿಂದ ನಡೆಸಲಾಗುವುದಿಲ್ಲ. ಗೋವಾದ ಜನರು ಗೋವಾವನ್ನು ಮುನ್ನಡೆಸುತ್ತಾರೆ” ಎಂದು ಅವರು ಹೇಳಿದ್ದಾರೆ.
ನಮಗೆ ಬಿಜೆಪಿಯಿಂದ “ಕ್ಯಾರೆಕ್ಟರ್ ಸರ್ಟಿಫಿಕೇಟ್” ಅಗತ್ಯವಿಲ್ಲ. “ನಾವು ಚುನಾವಣೆಯ ಸಮಯ ಬಂದಾಗ ಮಾತ್ರ ಗಂಗಾ ತೀರಕ್ಕೆ ಹೋಗಿ ಪೂಜೆ ಮಾಡುವುದಿಲ್ಲ. ಚುನಾವಣಾ ಸಮಯ ಬಂದಾಗ ಮೋದಿಜಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಅವರು ತಪಸ್ಸಿಗಾಗಿ ಉತ್ತರಾಖಂಡದ ದೇವಸ್ಥಾನಕ್ಕೆ ಹೋಗುತ್ತಾರೆ. ಮತದಾನದ ಸಮಯ ಬಂದಾಗ ಅವರೇ ಪುರೋಹಿತ ಆಗುತ್ತಾರೆ. ಇರಲಿ, ಅದನ್ನು ಮಾಡುವ ಸ್ವಾತಂತ್ರ್ಯ ಅವರಿಗಿದೆ. ಆದರೆ ವರ್ಷದ ಉಳಿದ ದಿನಗಳಲ್ಲಿ ಅವರು ಎಲ್ಲಿರುತ್ತಾರೆ? ಯುಪಿ ಸರ್ಕಾರವು ಕೊರೊನಾದಿಂದ ಸಾವನ್ನಪ್ಪಿದ ಮೃತ ದೇಹಗಳನ್ನು ನದಿಗೆ ಎಸೆಯುತ್ತದೆ. ಅವರು ಗಂಗಾ ತಾಯಿಯನ್ನು ಅಶುದ್ಧಗೊಳಿಸಿದ್ದಾರೆ. ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ (ಡೇಟಾ) ಅವರ ಬಳಿ ಇಲ್ಲ. ನಾವು ಗಂಗೆಯನ್ನು ನಮ್ಮ ತಾಯಿ ಎಂದು ಕರೆಯುತ್ತೇವೆ. ಬಿಜೆಪಿಯವರು ಕೋವಿಡ್ ಮೃತ ದೇಹಗಳನ್ನು ಗಂಗಾ ನದಿಯಲ್ಲಿ ಎಸೆದಿದ್ದಾರೆ. ಇದನ್ನು ಸಹಿಸಲಾಗದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತವನ್ನು ಮತ್ತೊಂದು ತಾಲಿಬಾನ್ ದೇಶವಾಗಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ನಾಲ್ವರು ರೈತರು ಮತ್ತು ಪತ್ರಕರ್ತರನ್ನು ಕೊಂದ ಲಖಿಂಪುರ ಖೇರಿ ಘಟನೆಯ ಬಗ್ಗೆ ಎಸ್‌ಐಟಿ ತನಿಖೆಯನ್ನು ಉಲ್ಲೇಸಿದ ಬ್ಯಾನರ್ಜಿ, ಲಖಿಂಪುರ್ ಘಟನೆಯು “ಯೋಜಿತ ಪಿತೂರಿ” ಎಂದು ಎಸ್‌ಐಟಿ ಹೇಳಿದೆ. “ಯುಪಿ ಸಿಎಂ ರಾಜೀನಾಮೆ ನೀಡಬೇಕಲ್ಲವೇ? ಗೃಹ ಸಚಿವರು ರಾಜೀನಾಮೆ ನೀಡಬಾರದೇ? ಪ್ರಧಾನಿಯವರು ಇದರ ಬಗ್ಗೆ ಮಾತನಾಡಬೇಕು? ಎಂದು ಹೇಳಿದ್ದಾರೆ.
“ಬಿಜೆಪಿಯನ್ನು ಸೋಲಿಸಲು ಬಯಸುವವರು ಮತಗಳನ್ನು ವಿಭಜಿಸಬೇಡಿ, ನಮ್ಮೊಂದಿಗೆ ಸೇರಿಕೊಳ್ಳಿ” ಎಂದು ಮಮತಾ ಮನವಿ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡುವ ಬಗ್ಗೆ ಗಂಭೀರವಾಗಿರುವ ಯಾವುದೇ ಪಕ್ಷದೊಂದಿಗೆ ಕೆಲಸ ಮಾಡಲು ತಮ್ಮ ಪಕ್ಷವು ಮುಕ್ತವಾಗಿದೆ. “ಕಾಂಗ್ರೆಸ್ ದೊಡ್ಡ ದೊಡ್ಡ ವಿಷಯಗಳನ್ನು ಹೇಳುತ್ತದೆ. ಏಕಾಂಗಿಯಾಗಿ ಹೋರಾಡುತ್ತೇವೆ ಎನ್ನುತ್ತಾರೆ. ಈಗಲೂ ನಮ್ಮೊಂದಿಗೆ ಜಗಳವಾಡುತ್ತಿದ್ದಾರೆ. ಮೊದಲು ಬಿಜೆಪಿ ವಿರುದ್ಧ ಹೋರಾಡಿ ನಂತರ ದೊಡ್ಡದಾಗಿ ಮಾತನಾಡಿ. ಕಾಂಗ್ರೆಸ್ ವಿರುದ್ದ ಮಾತನಾಡಲು ಏನೂ ಇಲ್ಲ” ಎಂದು ಬ್ಯಾನರ್ಜಿ ಪಣಜಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಟಿಎಂಸಿ ಎಂದರೆ ದೇವಾಲಯ, ಮಸೀದಿ, ಚರ್ಚ್; ಗೋವಾದಲ್ಲಿ ಮಮತಾ ಬ್ಯಾನರ್ಜಿ