ಪೌರತ್ವ ತಿದ್ದುಪಡಿ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ : ಎಎಂಯು ವಿದ್ಯಾರ್ಥಿಗಳ ಬಿಡುಗಡೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಭಟನೆ ಹಿಸಾಂಚಾರಕ್ಕೆ ತಿರುಗಿದ್ದು, ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂಟರ್​ನೆಟ್​ ಸೇವೆಯನ್ನು ರದ್ದು ಮಾಡಲಾಗಿದೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಿನ್ನೆ ರಾತ್ರಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ಎಲ್ಲಾ 50 ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ಬಿಡುಗಡೆಗೊಳಿಸಲಾಗಿದೆ. ದೆಹಲಿ ಶಾಂತ ಸ್ಥಿತಿಯತ್ತ ಮರಳುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು , ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ಮತ್ತೆ ಭುಗಿಲೇಳುವುದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ಭಾರತ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಹೋರಾಟ ತಣ್ಣಗಾದ ಬೆನ್ನಲ್ಲೇ, ಇತ್ತ ದೆಹಲಿ ಮತ್ತು ಉತ್ತರಪ್ರದೇಶದ ಅಲಿಗಢದಲ್ಲಿ ನಿನ್ನೆ ಹಿಂಸಾಚಾರ ಭುಗಿಲೆದ್ದಿತ್ತು.

ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. 4 ಬಸ್, 2 ಅಗ್ನಿಶಾಮಕ ವಾಹನಗಳು ಹಾಗೂ ಅನೇಕ ದ್ವಿಚಕ್ರ ವಾಹನಗಳು ಅಗ್ನಿಗೆ ಆಹುತಿಯಾಗಿವೆ.
ಜೆಎಂಐ ವಿಶ್ವವಿದ್ಯಾಲಯ ಆವರಣ ನಿನ್ನೆ ರಾತ್ರಿ ಅಕ್ಷರಶಃ ರಣರಂಗವಾಗಿದ್ದು , ಹಿಂಸಾಚಾರ , ದಾಂಧಲೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರು ವಾಯು ಪ್ರಯೋಗಿಸಿದರು.

ಈ ವೇಳೆ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‍ನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಿಂಸಾಚಾರದ ವೇಳೆ ಭಾಗಿಯಾಗಿದ್ದ ಪ್ರತಿಭಟನಾ ನಿರತ 50 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ. ವಶಕ್ಕೆ ಪಡೆದಿದ್ದ 50 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿಗಳನ್ನು ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 15 ಮಂದಿ ವಿದ್ಯಾರ್ಥಿಗಳನ್ನು ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ರಾತ್ರಿಯಷ್ಟೇ ದೆಹಲಿ ಅಲ್ಪಸಂಖ್ಯಾತ ಆಯೋಗ ಕಲ್ಕಾಜಿ ಪೊಲೀಸ್ ಠಾಣಾಧಿಕಾರಿಗಳಿಗೆ ನಿರ್ದೇಶನವೊಂದನ್ನು ನೀಡಿತ್ತು. ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸಿ, ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಆಗ್ರಹಿಸಿತ್ತು. ಅಲ್ಲದೆ, ಮೂರುಗಂಟೆಯೊಳಗಾಗಿ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದ ಬಳಿಕ ದೆಹಲಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಿನ್ನೆ ರಾತ್ರಿಯಿಂದ ರದ್ದುಗೊಳಿಸಲಾಗಿದ್ದ ಎಲ್ಲಾ ಮಾರ್ಗಗಳ ಮೆಟ್ರೋ ರೈಲು ಸೇವೆ ಇಂದು ಬೆಳಗ್ಗೆ ಪುನರಾರಂಭಗೊಂಡಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರೆದಿದ್ದು , ಮಹಿಳಾ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಆಗ್ನೇಯ ದೆಹಲಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಅತ್ತ ಉತ್ತರ ಪ್ರದೇಶದ ಅಲಿಗಢ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು , ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights