ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯಕ್ಕೆ ಕತ್ತರಿ ಹಾಕಲು ಮುಂದಾದ ಕೇಂದ್ರ ಸರ್ಕಾರ

ಹಸಿರು ಕಾಡುಗಳು ಬರಿದಾಗಿ, ಕಾಂಕ್ರಿಟ್‌ ಕಾಡುಗಳು ಹೆಚ್ಚಾಗುತ್ತಿರುವ ದಿನಗಳಲ್ಲಿ ಬೆಂಗಳೂರು ನಾನೇನು ಕಮ್ಮಿಯಿಲ್ಲ ಎನ್ನುವಂತೆ ಕಾಂಕ್ರಿಟ್‌ ಮಯವಾಗುತ್ತಿದೆ. ಸಧ್ಯಕ್ಕೆ ಬೆಂಗಳೂರಿಗೆ ಶುದ್ಧಗಾಳಿ ನೀಡುತ್ತಿರುವುದು ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ನಂತಹ ನಗರದ ಮಧ್ಯ ಇರುವ ಬೆರಳೆಣಿಕೆಯಷ್ಟು ಉದ್ಯಾನವನಗಳು ಮಾತ್ರ.

ಬೆಂಗಳೂರಿನ ಸುತ್ತ-ಮುತ್ತಲ ಹೊರವಲಯದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವುದು, ಬೆಂಗಳೂರು ತಂಪಾಗಿರಲು ಕಾರಣವಾಗಿರುವುದೂ, ಒಂದಷ್ಟು ಮಳೆ ತರುತ್ತಿರುವುದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ. ಈಗ ಕೇಂದ್ರ ಸರ್ಕಾರ ಬನ್ನೇರುಘಟ್ಟ ಉದ್ಯಾನಕ್ಕೂ ಬೆಂಕಿ ಹಚ್ಚಲು ಮುಂದಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಗಳನ್ನು(ಇಎಸ್ ಝೆಡ್)268.96 ಚದರ ಕಿಲೋ ಮೀಟರ್ ನಿಂದ 168.84 ಚದರ ಕಿಲೋ ಮೀಟರ್ ಗೆ ಕಿರಿದುಗೊಳಿಸುವುದಾಗಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತ 100 ಮೀಟರ್ ನಿಂದ 1 ಕಿಲೋ ಮೀಟರ್ ವರೆಗೆ ಪರಿಸರ ಸೂಕ್ಷ್ಮ ವಲಯವಾಗಿದೆ. ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನದಿಂದ 2 ವರ್ಷದೊಳಗೆ ಸ್ಥಳೀಯರು ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಜೊತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ವಲಯ ಯೋಜನೆಯನ್ನು ತಯಾರು ಮಾಡಬಹುದು ಎಂದು ಗೆಜೆಟ್ ಅಧಿಸೂಚನೆ ಹೇಳಿದೆ.

ಕೇಂದ್ರ ಸರ್ಕಾರದ ಈ ಗೆಜೆಟ್ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರ ಪರಿಸರದ ಕಾಳಜಿಯೊಂದಿಗೆ ಯೋಚಿಸಿ ಅಧಿಸೂಚನೆ ಹೊರಡಿಸಬಹುದು ಎಂದುಕೊಂಡಿದ್ದೆವು. ಆದರೆ ರಾಜ್ಯ ಸರ್ಕಾರ ಮತ್ತು ಸಂಪುಟ ಉಪಸಮಿತಿ ಕಳುಹಿಸಿರುವುದಕ್ಕೆ ಅದು ಮುದ್ರೆಯೊತ್ತಿ ಕೊಟ್ಟಿದೆಯಷ್ಟೆ. ಪರಿಸರ ಸಂರಕ್ಷಣೆ ಬಗ್ಗೆ ಆದ್ಯತೆ ಕೊಟ್ಟಿದೆ ಎಂದು ಅನಿಸುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು ಇಲ್ಲಿ ಉಸಿರಾಟಕ್ಕೆ ಶುದ್ಧ ಗಾಳಿ, ಓಡಾಟಕ್ಕೆ ಶುದ್ಧ ಪರಿಸರ, ಜಾಗ ಸಿಗದಂತೆ ಮಾಡುತ್ತಿದೆ. ಸರ್ಕಾರದ ಗೆಜೆಟ್ ಅಧಿಸೂಚನೆಗೆ ತಡೆ ತರಬೇಕೆಂದು ಕೋರ್ಟ್ ಮೊರೆ ಹೋಗಲು ಪರಿಸರ ಹೋರಾಟಗಾರರು ಸಿದ್ಧತೆ ನಡೆಸುತ್ತಿದ್ದಾರೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಸುತ್ತಮುತ್ತ ಪಿಲ್ಲಿಗನಹಳ್ಳಿ, ಗೊಟ್ಟಿಗೆರೆ, ಬಸವನಪುರ, ಹೊಮ್ಮದೇವನಹಳ್ಳಿ, ಕಲ್ಕೆರೆ, ಬಿಲ್ವರದಹಳ್ಳಿ, ಬುಥನಹಳ್ಳಿ, ದೋಡಾಗುಲಿ, ಹೆರಾಂಡ್ಯಪನ್ಹಳ್ಳಿ, ಟಿಪ್ಪುರು, ಬಿಜಳ್ಳಿ, ಬೊಮ್ಮಸಂದ್ರ, ಹೊಸದುರ್ಗ, ಸಾಲ್ಬನ್ನಿ, ಮತ್ತು ಗುಡ್ಡೇವರಹನವನ್ನು ಸೂಕ್ಷ್ಮ ವಲಯಗಳಾಗಿ ಗೆಜೆಟ್ ನಲ್ಲಿ ಸೂಚಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights