ಬಯಲಿನಲ್ಲಿ ಶೌಚ ಮಾಡಲು ಹೋಗಿದ್ದ ಇಬ್ಬರು ದಲಿತ ಮಕ್ಕಳ ಕೊಲೆಯ ಹಿಂದೆ ನಿರ್ದಿಷ್ಟ ಜಾತಿ ಮನಸ್ಥಿತಿ…!

ಬಯಲಿನಲ್ಲಿ ಶೌಚ ಮಾಡಲು ಹೋಗಿದ್ದ ಇಬ್ಬರು ದಲಿತ ಮಕ್ಕಳ ಕೊಲೆಯ ಹಿಂದೆ ನಿರ್ದಿಷ್ಟ ಜಾತಿ ಮನಸ್ಥಿತಿ ಇದೆ.

ಭಾರತವನ್ನು ೨೦೧೯ರ ಅಕ್ಟೋಬರ್ ೨ರ ವೇಳೆಗೆ ಬಯಲು ಶೌಚ ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ೨೦೧೪ರ ಅಕ್ಟೋಬರ್ ೨ ರಂದು ಸ್ವಚ್ಚ ಭಾರತ್ ಅಭಿಯಾನ (ಎಸ್‌ಬಿಎ)ವನ್ನು ಪ್ರಾರಂಭಿಸಲಾಯಿತು. ವಿಪರ್ಯಾಸವೆಂದರೆ, ಈ ಅಭಿಯಾನವನ್ನು ಅಹಿಂಸೆಯ ಮಹಾನ್ ಪ್ರತಿಪಾದಕನ ಹುಟ್ಟುದಿನದಂದು ಪ್ರಾರಂಭಿಸಲಾಗಿದ್ದರೂ, ಬಯಲು ಶೌಚವನ್ನು ಬೇರೆಬೇರೆ ಕಾರಣಗಳಿಗಾಗಿ ವಿರೋಧಿಸುವವರೆಲ್ಲರೂ ಅಹಿಂಸಾವಾದಿಗಳೇನೂ ಆಗಿಲ್ಲ. ಬದಲಿಗೆ ಕೊಲೆಯನ್ನೂ ಒಳಗೊಂಡಂತೆ  ಹಲವಾರು ಬಗೆಯ ಹಿಂಸಾಚಾರಗಳಲ್ಲಿ ಮಾಡಬಲ್ಲ ಹಿಂಸಾವಾದಿಗಳೂ ಆಗಿದ್ದಾರೆ. ಅಂಥಾ ಹಿಂಸಾವಾದಿ ಬಯಲು ಶೌಚ ವಿರೋಧಿಗಳೇ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವ್‌ಕೇಡಿ ಗ್ರಾಮದಲ್ಲಿ ಬಯಲಿನಲ್ಲಿ ಶೌಚ ಮಾಡಿದ್ದಕ್ಕಾಗಿ ಕೇವಲ ೧೦ ಮತ್ತು ೧೨ ವರ್ಷ ವಯಸ್ಸಿನ ವಾಲ್ಮೀಕಿ ಜಾತಿಗೆ ಸೇರಿದ ಇಬ್ಬರು ಮಕ್ಕಳನ್ನು ಬಡಿಗೆಗಳಿಂದ ಬಡಿದು ಕೊಂಡಿದ್ದಾರೆ. ಕಾಕತಾಳೀಯವಾಗಿ ಈ ಇಬ್ಬರು ಮಕ್ಕಳನ್ನು ಕೊಂದ ಸೆಪ್ಟೆಂಬರ್ ೨೫ರಂದೇ ಪ್ರಧಾನಿ ನರೇಂದ್ರ ಮೋದಿಯವರು ನ್ಯೂಯಾರ್ಕಿನಲ್ಲಿ ಸ್ವಚ್ಚ ಭಾರತ್ ಅಂದೋಲನದ ಯಶಸ್ಸಿಗಾಗಿ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಸಂಸ್ಥೆಯಿಂದ ಪ್ರಶಸ್ತಿಯನ್ನೂ ಸ್ವೀಕರಿಸುತ್ತಿದ್ದರು. ಅದೇ ರೀತಿ ೨೦೧೮ರ ಆಗಸ್ಟಿನಲ್ಲಿ ರಾಜಸ್ಥಾನದ ಪ್ರತಾಪ್ ಗರ್ ಜಿಲ್ಲೆಯಲ್ಲಿ ಬಯಲು ಶೌಚಕ್ಕೆ ಹೋಗಿದ್ದ ಮಹಿಳೆಯರ ಫೋಟೋಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಸ್ಥಳೀಯ ಪೌರಾಡಳಿತ ಸಂಸ್ಥೆಯ ಸಿಬ್ಬಂದಿಗಳನ್ನು ಆಕ್ಷೇಪಿಸಿದ್ದಕ್ಕೆ ಜಾಫರ್ ಹುಸೇನ್ ಎಂಬುವರನ್ನು ಕೊಲ್ಲಲಾಯಿತೆಂದು ಪತ್ರಿಕೆಗಳು ವರದಿ ಮಾಡಿದ್ದವು. ಇದಕ್ಕೂ ಮುಂಚೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕಟ್‌ಘಟ್ ನಲ್ಲಿ ಬಯಲಿನಲ್ಲಿ ಶೌಚಕ್ಕೆ ಕುಳಿತಿದ್ದವರ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಟಿವಿಗಳು ಪ್ರಸಾರ ಮಾಡಿದ್ದವು.

ಭಾವ್‌ಕೇಡಿ ಪ್ರಕರಣ ಸಭವಿಸಿದ ಎರಡು ದಿನಗಳ ನಂತರ ಬಯಲು ಶೌಚ ಮುಕ್ತ ಪ್ರದೇಶಗಳನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಬಪ್ರಯೋಗ ಮಾಡಬಾರದೆಂಬ ಸಲಹೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿತು. ಆದರೆ ಕೇಂದ್ರ ಸರ್ಕಾರದ ಈ ಸಲಹೆಯನ್ನು ಅಭಿಯಾನದಲ್ಲಿ ಭಾಗಿಯಾಗಿರುವ ಯಾವ ಸಿಬ್ಬಂದಿಯೂ ದೇಶದ ಯಾವುದೇ ಭಾಗದಲ್ಲೂ ಅನುಸರಿಸುತ್ತಿಲ್ಲ. ಸರ್ವೇಗಳು ಮತ್ತು ಮಾಧ್ಯಮ ವರದಿಗಳೂ ಸ್ಪಷ್ಟಪಡಿಸುವಂತೆ ತಮಗೆ ನೀಡಲಾಗಿರುವ ಗುರಿಗಳನ್ನು ಕೊಟ್ಟ ಸಮಯದಲ್ಲೆ ಸಾಧಿಸಲೇಬೇಕಾದ ಒತ್ತಡಕ್ಕೆ ಈಡಾಗಿ ಈ ಅಧಿಕಾರಿಗಳು ಸಾಕಷ್ಟು ಸಂಖ್ಯೆಯ ಶೌಚಾಲಯಗಳಿಲ್ಲದ ಕಡೆ ಅಥವಾ ಒಂದೂ ಶೌಚಾಲಯವೂ ಇಲ್ಲದ ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಆ ನಿರ್ದಿಷ್ಟ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೋಷಿಸುವ ಆತುರವನ್ನು ತೋರುತ್ತಿದ್ದಾರೆ. ಆದರೆ ಸುಮಾರು ಎರಡು ವರ್ಷದಷ್ಟೂ ಹಿಂದೆಯೇ ಮುಂಬೈ ನಗರವನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಿಸಲಾಗಿದ್ದರೂ ಇತ್ತೀಚಿನ ಮಾಧ್ಯಮ ವರದಿಗಳು ಸ್ಪಷ್ಟಪಡಿಸುವಂತೆ ಭಾರತದ ಈ ಹಣಕಾಸು ರಾಜಧಾನಿಯಲ್ಲಿ ಈಗಲೂ ಅತ್ಯಂತ ಬಡ ಕೊಳೆಗೇರಿ ಪ್ರದೇಶಗಳಲ್ಲಿ ಮತ್ತು ಸಮುದ್ರ ತೀರದ ಪ್ರದೇಶಗಳಲ್ಲಿ ಬಯಲು ಶೌಚ ಮುಂದುವರೆದಿದೆ. ಇದಕ್ಕೆ ಕಾರಣಗಳು ನಿಗೂಢವಾದದ್ದೇನಲ್ಲ: ಶೌಚಾಲಯಗಳು ಸಾಕಷ್ಜು ಸಂಖ್ಯೆಯಲ್ಲಿ ಇಲ್ಲದಿರುವುದು, ಇರುವ ಶೌಚಾಲಯಗಳಲ್ಲಿ ನೀರು ಮತ್ತು ವಿದ್ಯುತ್ ವ್ಯವಸ್ಥೆಗಳು ಇಲ್ಲದಿರುವುದು ಮತ್ತು ಮಕ್ಕಳು ಶೌಚಾಲಯವನ್ನು ಬಳಸಲು ಪೂರಕವಾದ ಸೌಲಭ್ಯಗಳು ಇಲ್ಲದಿರುವುದು.

ಎಲ್ಲಾ ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲೂ ಈ ರೀತಿ ಗುರಿಯನ್ನು ಮುಟ್ಟುವ ಒತ್ತಡಗಳು ಸರ್ವೇ ಸಾಮಾನ್ಯ. ಆದರೆ ಅದೇ ಸಮಯದಲ್ಲಿ ಈ ಆತುರದಲ್ಲಿ ಯೋಜನೆಯ ಉದ್ದೇಶಗಳು ಮರೆಯಾಗಿಬಿಡುತ್ತಿರುವುದನ್ನೂ ಸಹ ಮರೆಯಲು ಸಾಧ್ಯವಿಲ್ಲ. ಇಂಥಾ ಒಂದು ಅಭಿಯಾನದ ಉದ್ದೇಶ ಮತ್ತು ಸ್ವರೂಪಗಳು ಆಧರಿಸಬೇಕಿರುವುದು ಬಲಪ್ರಯೋಗವನ್ನಲ್ಲ. ಬದಲಿಗೆ ಜನರ ತಿಳವಳಿಕೆಯನ್ನು ಹೆಚ್ಚಿಸುವ, ಈ ಅಭಿಯಾನದ ಬಗ್ಗೆ ಸಂದೇಹವುಳ್ಳವರನ್ನು ಮನ ಒಲಿಸುವ, ಪುಸಲಾಯಿಸುವ ಮತ್ತು ಉತ್ತೇಜಿಸುವ ಕ್ರಮಗಳು ಮತ್ತು ಯೋಜನೆಯ ಸಾಧನೆಗಳನ್ನು ಮನವರಿಕೆ ಮಾಡಿಸುವ ಹಾಗೂ ನಾಗರಿಕರ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಒಳಗೊಳ್ಳುವ ಮೂಲಕ ಈ ಆಭಿಯಾನವನ್ನು ನಡೆಸಬೇಕಿರುತ್ತದೆ. ಸದರಿ ಅಭಿಯಾನದಲ್ಲಿ ಅರೋಗ್ಯ ಮತ್ತು ನೈರ್ಮಲ್ಯಗಳು ಪ್ರಧಾನ ಉದ್ದೇಶಗಳಾಗಿದ್ದವು. ಆದರೆ ಈ ಅಭಿಯಾನದಲ್ಲಿ ವರದಿಯಾಗಿರುವ ಹಾಗೂ ವರದಿಯಾಗಿರದ ಎಷ್ಟೋ ಹಿಂಸಾಚರದ ಪ್ರಕರಣಗಳನ್ನೂ ಹಾಗೂ ಮೂಲಭೂತ ನಾಗರಿಕ ಸೌಲಭ್ಯಗಳಿಂದಲೂ ವಂಚಿತವಾಗಿರುವ ಪ್ರದೇಶಗಳನ್ನೂ ಗಮನಿಸಿದಾಗ ಆರೋಗ್ಯ ಮತ್ತು ನೈರ್ಮಲ್ಯಗಳನ್ನು ಹೇರಬೇಕೆಂಬ ಅಭಿಯಾನಕೋರರ ಬಯಕೆಯೊಂದರ ಮೇಲೆ ಅಭಿಯಾನದ ಯಶಸ್ಸಿನ ಪ್ರೇರಣೆಗಳು ಆಧರಿಸ್ರಲು ಸಾಧ್ಯವಿಲ್ಲವೆಂಬುದು ಸಾಬೀತಾಗುತ್ತದೆ.

ಮಕ್ಕಳನ್ನು ಬಡಿದುಕೊಂದ ಆ ರಕ್ತಪಿಪಾಸಿ ನಡೆಯಲ್ಲಿ ಜಾತಿವಾದ ಅಸಹ್ಯ ಸ್ವರೂಪದಲ್ಲಿ ವ್ಯಕ್ತಗೊಂಡಿದೆ. ಐಜೆಡ್‌ಎ ಇನ್‌ಸ್ಟಿಟ್ಯೂಟ್ ಆಫ್ ಲೇಬರ್ ಎಕನಾಮಿಕ್ಸ್ ಸಂಸ್ಥೆಯು ಹೊರತಂದಿರುವ ಚೇಂಜಸ್ ಇನ್ ಓಪನ್ ಡೆಫಕೇಷನ್ ಇನ್ ರೂರಲ್  ನಾರ್ಥ್ ಇಂಡಿಯಾ- ೨೦೧೪-೧೮ (ಗ್ರಾಮೀಣ ಉತ್ತರ ಭಾರತದಲ್ಲಿ ಬಯಲು ಶೌಚದಲ್ಲಿ ಬಂದಿರುವ ಬದಲಾವಣೆ-೨೦೧೪-೧೮) ಎಂಬ ವರದಿಯು ಸ್ಪಷ್ಟಪಡಿಸುವಂತೆ ಈ ಎಸ್‌ಬಿಎ ಅಭಿಯಾನz ಅಧಿಕಾರಿಗಳಿಂದ ಎಲ್ಲಾ ಹಂತಗಳಲ್ಲೂ ಬಲಪ್ರಯೋಗಗಳಿಗೆ ಗುರಿಯಾಗಿರುವ ಸಾಮಾಜಿಕ ಗುಂಪುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಪ್ರಮಾಣವೇ ಅತಿ ಹೆಚ್ಚಾಗಿದೆ. ಇಂಥಾ ಬಲಪ್ರಯೋಗಗಳು ದಂಡ ಹಾಕುವುದು, ಸಾರ್ವಜನಿಕ ಸೌಲಭ್ಯಗಳ ನಿರಾಕರಣೆ ಮತ್ತು ಪೊಲೀಸರ ಬಂಧನವೂ ಒಳಗೊಂಡಿದೆ. ಶಿವಪುರಿ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯ ಪ್ರಕಾರ ವಾಲ್ಮೀಕಿ ಜಾತಿಗೆ ಸೇರಿದ ವ್ಯಕ್ತಿಗಳು ಮಕ್ಕಳನ್ನು ಕೊಂದವರ ಮನೆಗಳನ್ನು ಒಳಗೊಂಡಂತೆ ಮೇಲ್ಜಾತಿಗಳ ಮತ್ತು ಇತರ ಜಾತಿಗಳ ಶೌಚಾಲಯವನ್ನು ಸ್ವಚ್ಚಗೊಳಿಸಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಮಕ್ಕಳ ಮನೆಯವರು ಅರ್ಜಿಯನ್ನು ಹಾಕಿದ್ದರೂ ಅವರಿಗೆ ಶೌಚಾಲಯ ಮಂಜೂರಾಗಿರಲಿಲ್ಲ.

ಆ ಎರಡು ದಲಿತ ಮಕ್ಕಳ ಕೊಲೆ ಹಾಗೂ ಕೊಲೆಯಾಗಿರುವ ರೀತಿಗಳು ಕೆಳಜಾತಿಗಳ ಬಗ್ಗೆ ಮೇಲ್ಜಾತಿಗಳಲ್ಲಿ ಮನೆ ಮಾಡಿರುವ ಬರ್ಬರತೆಯನ್ನು ಮಾತ್ರವಲ್ಲದೆ ಜಾತಿ ಆಧಾರಿತ ಸಾಮಾಜಿಕ ನಿರೀಕ್ಷೆಗಳು ಹಳ್ಳಿಗಳಲ್ಲಿ ಹೇಗೆ ಅನಾವರಣಗೊಳ್ಳುತವೆ ಎಂಬುದನ್ನೂ ಸಹ ಬಯಲು ಮಾಡಿದೆ. ಮತ್ತಷ್ಟು ಘಾಸಿಗೊಳಿಸುವ ವಿಷಯವೆಂದರೆ ದಲಿತರು ವಾಸಿಸುವ ಪ್ರದೇಶಗಳ ಆಸುಪಾಸಿನ ಜಾಗವನ್ನೇ ಊರಿನ ಇತರ ಜಾತಿಗಳು ಬಯಲು ಶೌಚಕ್ಕೆ ಬಳಸುತ್ತಾರೆ. ಆದರೆ ಆ ಎರಡು ಮಕ್ಕಳು ದಲಿತೇತರ ಪ್ರದೇಶದಲ್ಲಿ ಶೌಚ ಮಾಡಿದಾಗ ಮಾತ್ರ ಅವರನ್ನು ಎಚ್ಚರಿಸಿ ಕಳಿಸುವ ಬದಲು ಬಡಿದು ಕೊಲ್ಲುವಷ್ಟು ಆಕ್ರೋಶವನ್ನು ಮೇಲ್ಜಾತಿಗಳಲ್ಲಿ ಹುಟ್ಟಿಸಿದೆ.

ಜಾತಿ ಮತ್ತು ನೈರ್ಮಲ್ಯಗಳಿಗೆ ಸಂಬಂಧಪಟ್ಟಂತೆ ಅಸ್ಥಿತ್ವದಲ್ಲಿರುವ ಜಾತಿ ಪೂರ್ವಗ್ರಹಗಳನ್ನು ನಿವಾರಿಸಿಕೊಳ್ಳದೆ ಸ್ವಚ್ಚ ಭಾರತ ಅಭಿಯಾನವು ಯಶಸ್ವಿಯಾಗಲು ಸಾಧ್ಯವಿಲ್ಲವೆಂದು ಕಳೆದ ಐದು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರು ಎಚ್ಚರಿಸುತ್ತಲೇ ಬಂದಿದ್ದಾರೆ. ಇದೇ ರೀತಿ ಬಯಲು ಶೌಚ ಮುಕ್ತ ಪ್ರಯತ್ನಗಳನ್ನು ನಡೆಸಿರುವ ನೆರೆಹೊರೆ ದೇಶಗಳ ಮತ್ತು ಆಫ್ರಿಕಾ ದೇಶಗಳ ಅನುಭವವೂ ಇದನ್ನೇ ಸಾರಿ ಹೇಳುತ್ತಿದೆ. ದೇಶಾದ್ಯಂತ ಅರಿವಿನ ಅಭಿಯಾನಗಳು, ಸ್ಥಳೀಯ ಮತ್ತು ಮೇಲ್ಮಟ್ಟದ ಆಡಳಿತದ ನಡುವೆ ಬಲವಾದ ಸಂಯೋಜನೆ, ಮತ್ತು ಶೌಚಾಲಯಗಳ ನಿರ್ಮಾಣಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಮಾತ್ರವಲ್ಲದೆ ನಿರಂತರವಾದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳೂ ಸಹ ಅಗತ್ಯವಿದೆ. ಭಾರತದಲ್ಲಿ ಜಾತಿ ಆಧಾರಿತ ಮಡಿ ಮತ್ತು ಮೈಲಿಗೆ ಪರಿಕಲ್ಪನೆಗಳಿಗೂ ಮತ್ತು ನೈರ್ಮಲ್ಯ ಹಾಗು ನೈರ್ಮಲ್ಯ ಸಂಬಂಧೀ ಸೌಲಭ್ಯಗಳಿಗೂ ನಡುವೆ ಇರುವ ಬಲವಾದ ಸಂಬಂಧಗಳೇ ಈ ಅಭಿಯಾನದ ನಿಜವಾದ ಗುರಿಯಾಗಿರಬೇಕಿದೆ. ಆಗ ಮಾತ್ರ ಭಾರತ ಬಯಲು ಶೌಚ ಮುಕ್ತ ಪ್ರದೇಶವಾಗಲು ಸಾಧ್ಯ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights