FACT CHECK | ಮೋದಿ ಆಡಳಿತದಲ್ಲಿ ಭಾರತದ ರಸ್ತೆ ಎಂದು ಬಲ್ಗೇರಿಯಾದ ಫೋಟೊ ಹಂಚಿಕೆ
ಹಾಳಾಗಿರುವ ರಸ್ತೆಯೊಂದಕ್ಕೆ ವಿಚಿತ್ರವಾಗಿ ಡಾಂಬಾರು ರಿಪೇರಿ ಮಾಡಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಟೊದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಡಾಂಬರ್ನಿಂದ ನಿರ್ಮಿಸಲಾಗಿದ್ದು, ಮಧ್ಯ ಭಾಗವನ್ನು ಡಾಂಬರ್ ಹಾಕದೆ ಹಾಗೆಯೇ ಬಿಟ್ಟಿರುವುದನ್ನು ನೋಡಬಹುದು.
ಎಕ್ಸ್ನ ಪೋಸ್ಟ್ವೊಂದರಲ್ಲಿ ಇದೇ ಚಿತ್ರವನ್ನು ಹಂಚಿಕೊಂಡು ಶೀರ್ಷಿಕೆ ನೀಡಿದ್ದು “ಮೋದಿ ಸರ್ಕಾರ ಮಾತ್ರ ಇಂತಹ ರಸ್ತೆಗಳನ್ನು ನಿರ್ಮಿಸಲು ಸಾಧ್ಯ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ರಸ್ತೆ ಭಾರತದ ಯಾವ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 12 ಅಕ್ಟೋಬರ್, 2023 ರಂದು Lifbg ಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಡ್ರಾಗಲೆವ್ಟ್ಸಿಯಲ್ಲಿ ಐಷಾರಾಮಿ: ಸ್ಕಾಕರ್ ಜಿಲ್ಲೆಯ ಡಾಂಬರೀಕೃತ ರಸ್ತೆ ಎಂಬ ಟೈಟಲ್ನೊಂದಿಗೆ ಪ್ರಕಟಿಸಲಾಗಿದೆ
ಡ್ರಾಗಲೆವ್ಟ್ಸಿ ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ ಇದು ಸೋಫಿಯಾದ ಬಲ್ಗೇರಿಯನ್ ಪುರಸಭೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಲಾಭ್ಯವಾದ ಮಾಹಿತಿ ಪ್ರಕಾರ, “ಸೋಫಿಯಾದ ಅತ್ಯಂತ ದುಬಾರಿ ಮತ್ತು ಐಷಾರಾಮಿ ನೆರೆಹೊರೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಬೀದಿಗೆ ಕೆಟ್ಟ ರಸ್ತೆ ಎಂದು ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪ್ರಕಟವಾದ ಪೋಸ್ಟ್ನಲ್ಲಿ, ಇಡೀ ರಸ್ತೆಯನ್ನು ಡಾಂಬರು ಮಾಡುವ ಬದಲು, ಅದರ ಮೇಲೆ ಕೇವಲ ಎರಡು ಸ್ಟ್ರಿಪ್ ಡಾಂಬರು ಹಾಕಿರುವುದನ್ನು ನೋಡಬಹುದು, ಇದು ಕಾರಿನ ಎರಡು ಟೈರ್ಗಳು ಹಾದುಹೋಗಲು ಸಾಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ
ಹೆಚ್ಚಿನ ತನಿಖೆಯ ನಂತರ, ಸೋಫಿಯಾ ಪುರಸಭೆಯನ್ನು ಉಲ್ಲೇಖಿಸಿರುವ ವೈರಲ್ ಫೋಟೋವನ್ನು ಹೋಲುವ ಇನ್ನೂ ಕೆಲವು ಚಿತ್ರಗಳನ್ನು ಸೋಫಿಯಾ ಅವರ ಫೇಸ್ಬುಕ್ ಪುಟದ ಸ್ವಯಂಸೇವಕ ಸಂಸ್ಥೆಯು ಅಕ್ಟೋಬರ್ 17, 2023 ರಂದು ಅಪ್ಲೋಡ್ ಮಾಡಿದೆ. ಈ ಪೋಸ್ಟ್ಗಳನ್ನು ಬಲ್ಗೇರಿಯನ್ ಭಾಷೆಯಲ್ಲಿವೆ.
ವಾಸ್ತವವಾಗಿ ಹದಗೆಟ್ಟ ರಸ್ತೆಯನ್ನು ತೋರಿಸುವ ಚಿತ್ರವನ್ನು ಭಾರತದದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿದೆ. ಆದರೆ ಈ ಹೇಳಿಕೆಗಳು ನಿಜವಲ್ಲ. ವರದಿಗಳ ಪ್ರಕಾರ, ಇದು ಬಲ್ಗೇರಿಯಾದ ಹಳೆಯ ಚಿತ್ರ. ಭಾರತಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಪ್ರಭಾವಿಗಳು ತಮ್ಮ ರಾಜಕೀಯ ನಿರೂಪಣೆಯನ್ನು ರೂಪಿಸಲು ಇಂತಹ ಸಂಬಂಧವಿಲ್ಲದ ಚಿತ್ರಗಳನ್ನು ಹಂಚಿಕೊಂಡು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಮಾಮೂಲಿ. ಆದರೆ ಮೋದಿ ಸರ್ಕಾರದ ಮಾದರಿ ರಸ್ತೆ ಎಂದು ಹರಿದಾಡುತ್ತಿರುವ ಫೋಟೋ ಭಾರತದದ್ದಲ್ಲ. ಈ ರಸ್ತೆಯ ಚಿತ್ರವನ್ನು ಬಲ್ಗೇರಿಯಾದ ಸೋಫಿಯಾ ಪುರಸಭೆಯಲ್ಲಿ ತೆಗೆದಿರುವುದಾಗಿ ವರದಿಯಾಗಿದೆ.
ಈ ಚಿತ್ರಗಳು ಭಾರತದ್ದಲ್ಲ ಎಂಬುದು ಸರಿಯಷ್ಟೆ, ಆದರೆ ಇದಕ್ಕೂ ಹದಗೆಟ್ಟ, ಕೆಟ್ಟ ರಸ್ತೆಗಳು ಭಾರತದ ಮೂಲೆ ಮೂಲೆಯಲ್ಲಿ ಸಿಗುತ್ತವೆ, ಭಾರತ ಬಹುತೇಕ ರಸ್ತೆಗಳು ಇದನ್ನು ಮೀರುಸುವಂತಿವೆ. ಯಾವುದೇ ಪಕ್ಷದ (BJP ಕಾಂಗ್ರೆಸ್ ಇತರೆ) ಸರ್ಕಾರಗಳು ಇದಕ್ಕೆ ಹೊರತಾಗಿಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಮಸೇತು ಮಾನವ ನಿರ್ಮಿತ ಎಂದು ISRO ಹೇಳಿದ್ದು ನಿಜವೇ?

