ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ: ಸಿಟಿ ರವಿ

ಸಿಎಂ ಯಡಿಯೂರಪ್ಪ ವಿರುದ್ಧ ಶಾಸಕ ಯತ್ನಾಳ್‌ ಅಸಮಾಧಾನ ವ್ಯಕ್ತಪಡಿಸಿದ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ಉದ್ಭವಿಸಿವೆ. ಈ ಮಧ್ಯೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಮತ್ತೆ ಸಿಎಂ ಆಗುತ್ತೇನೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ, ಚುನಾವಣೆ ಯಾವಾಗ ಬಂದರೂ ಸಿದ್ದರಾಮಯ್ಯ ಸಿಎಂ ಆಗುವದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿರುವ ಸಿಟಿ ರವಿ, “ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ತಿರುಕನ ಕನಸು” ಎಂದು ವ್ಯಂಗ್ಯವಾಡಿದ್ದಾರೆ.

“ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಮಾತು ಹೇಳುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ತವರಿನಲ್ಲೇ ಅವರವರ ಪಕ್ಷವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್‌ ಬೆಂಗಳೂರಿನಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ ಇನ್ನೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದು ದೂರದ ಮಾತು” ಎಂದು ಹೇಳಿದ್ದಾರೆ.

“ಮೈಸೂರು, ಬಾಗಲಕೋಟೆಯಲ್ಲಿ ತಮ್ಮ ಪಕ್ಷ ಗೆಲ್ಲಿಸಲು ಸಿದ್ದರಾಮಯ್ಯಗೆ ಅವರಿಗೆ ಆಗಿಲ್ಲ, ಇನ್ನೂ ಜನ ಯಾತಕ್ಕಾಗಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಸಮಾಜ ಒಡೆಯುವುದಕ್ಕಾ?” ಎಂದು ಪ್ರಶ್ನಿಸಿದರು.

“ತಮ್ಮದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ಕೊಡದಂತಹ ಪಾರ್ಟಿ ಅದು. ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದಿರುವುದು ಕಾಂಗ್ರೆಸ್ ಕೋಟಾ ಸದ್ಯಕ್ಕೆ ಮುಗಿದಿದೆ. ಹೀಗಾಗಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಇನ್ನು ಎರಡೂವರೆ ವರ್ಷದಲ್ಲಿ ಬಿಜೆಪಿ ಇನ್ನಷ್ಟು ಶಕ್ತಿ ಶಾಲಿ ಆಗುತ್ತದೆ. ಕಾಂಗ್ರೆಸ್​ ಗೆದ್ದರೆ ಪಾಕಿಸ್ತಾನದಲ್ಲಿ ಮಾತ್ರವೇ ಗೆಲ್ಲಬೇಕಷ್ಟೇ, ಭಾರತದಲ್ಲಿ ಅಲ್ಲ” ಎಂದಿದ್ದಾರೆ.


ಇದನ್ನೂ ಓದಿ: ಗೋಹತ್ಯೆ ನಿಲ್ಲಿಸಲು ಒತ್ತಾಯ: ಯುವಕನ ಕತ್ತು ಸೀಳಿದ ಸ್ನೇಹಿತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights