FACT CHECK | ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಾವಣಗೆರೆಯಿಂದ ಬೆಂಗಳೂರಿಗೆ KSRTC ಬಸ್‌ಗಳಲ್ಲಿ ರೂ 90 ಹೆಚ್ಚಳ ಮಾಡಲಾಗಿದೆ ಎಂಬುದು ಸುಳ್ಳು
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳು ಅನುಷ್ಟಾನಕ್ಕೆ ಬಂದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವುದು ಬಿಟ್ಟು ಪ್ರವಾಸ ಮಾಡುತ್ತಿದ್ದಾರೆ ಎಂಬಂತೆ ಚಿತ್ರಿಸಲಾಗುತ್ತಿತ್ತು. ನಂತರ ಮಹಿಳೆಯರು ಬಸ್ಸಿನ ಸೀಟಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು.
ಈಗ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮೇರಾ ಭಾರಾತ್ ಮಹಾನ್ ಎಂಬ ಫೇಸ್‌ಬುಕ್ ಖಾತೆ ಮತ್ತು ಶಿಲ್ಪಾ ಮಂಜುನಾಥ್ ಎಂಬ ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಇದು ಯಾವ ರೀತಿ ಉಚಿತ ಭಾಗ್ಯ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರವನ್ನು 90 ರೂಪಾಯಿ ಹೆಚ್ಚಿಸಲಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಪ್ರಯಾಣ ದರ ರೂ 280 ಇತ್ತು ಈಗ 371 ಮಾಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ನಮಗೆ (ಪುರುಷರಿಗೆ) ರೂ 371 ನಿಗದಿ ಮಾಡಿದ್ದಾರೆ. ಗಂಡಸರಿಂದ ಕಿತ್ತುಕೊಂಡು ಹೆಣ್ಣು ಮಕ್ಕಳಿಗೆ ಫ್ರೀ ಕೊಟ್ಟಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ”. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ದೃಶ್ಯಗಳಲ್ಲಿ ಕ.ರಾ.ರ.ಸಾ.ನಿಗಮದ ಹರಿಹರ ಘಟಕದ ಬಸ್ ಸಂಖ್ಯೆ KA01 F 1484 ರಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ರೂ371 ನೀಡಲಾಗಿದ್ದು ಶಕ್ತಿ ಯೋಜನೆ ಖರ್ಚು ಮಾಡುತ್ತಿರುವ ಹಣವನ್ನು ಸರಿದೂಗಿಸಲು ರೂ 280 ಇದ್ದ ದರವನ್ನು ರೂ 371 ಮಾಡಲಾಗಿದೆ. ಹಾಗಾಗಿ ಸರ್ಕಾರ 91 ರೂಪಾಯಿಯನ್ನು ಹೆಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಡಿಯೋದಲ್ಲಿ ಆರೋಪ ಮಾಡಿರುವಂತೆ 2023 ಜೂನ್‌ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಾವಣಗೆರೆ – ಬೆಂಗಳೂರಿನ ಬಸ್‌ಗಳಲ್ಲಿ ಪ್ರಯಾಣ ದರವನ್ನು 91 ರೂಗೆ ನಿಜವಾಗಿಯೂ ಏರಿಕೆ ಮಾಡಿದೆಯೇ ಎಂದು ಪರಿಶೀಲಿಸಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹರಿಹರ ಘಟಕದ ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ವೈರಲ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ವಿಚಾರಿಸಿದಾಗ ವಿಡಿಯೋದಲ್ಲಿರುವುದು ತಪ್ಪು ಮಾಹಿತಿ ಎಂದು ತಿಳಿಸಿದ್ದಾರೆ.
ವಾಸ್ತವವೇನು?
KSRTCಯ ಸಾಮಾನ್ಯ ಬಸ್‌ಗಳಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರ ರೂ 319, ಆದರೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಮತ್ತು ತಡೆ ರಹಿತ ಬಸ್‌ಗಳಲ್ಲಿ ಪ್ರಯಾಣಿಸುವಾಗ ರೂ371 ಪಾವತಿಸಬೇಕಾಗುತ್ತದೆ. ಇದು ಹಲವು ವರ್ಷಗಳಿಂದಲೂ ಜಾರಿಯಲ್ಲಿದ್ದು ವಿಶೇಷ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಯಾವಾಗಲೂ ಹೆಚ್ಚಿರುತ್ತದೆ ಎಂದಿದ್ದಾರೆ.
ವಾಸ್ತವವಾಗಿ KSRTCಯ ಸಾಮಾನ್ಯ ಸಾರಿಗೆಯಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ 319 ರೂಪಾಯಿ ಇರುತ್ತದೆ. ವಿಶೇಷ ಸಂದರ್ಭದಲ್ಲಿ ಬಸ್ಸುಗಳನ್ನು ಹೆಚ್ಚುವರಿಯಾಗಿ ರಸ್ತೆಗಿಳಿಸಿದಾಗ ರೂ 371ರಿಂದ 380 ಇರುತ್ತದೆ ಇದೇನು ಹೊಸದಾಗಿ ಜಾರಿಗೆ ತಂದಿರುವುದಲ್ಲ, ಎಲ್ಲಾ ನಿಗಮಗಳಲ್ಲಿಯೂ ಈ ನಿಯಮ ಜಾರಿಯಲ್ಲಿದೆ, ಕಾಂಗ್ರೆಸ್ ಸರ್ಕಾರ ಹೀಗೆ ಮಾಡಿದ ಎಂಬುದು ಸುಳ್ಳು ಎಂದು KSRTC ಅಧಿಕಾರಿಗಳು ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಬಂದ ಹೊಸದರಲ್ಲಿಯೂ ಬೆಂಗಳೂರು- ಮೈಸೂರು ನಡುವೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ ಎಂದು ಆರೋಪಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಅದನ್ನು ಫ್ಯಾಕ್ಟ್‌ಚೆಕ್ ಮೂಲಕ ಸತ್ಯ ಸಂಗತಿಯನ್ನು ತಿಳಿಸಲಾಗಿತ್ತು. ಅದನ್ನು ಇಲ್ಲಿ ಓದಿರಿ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನಿಂದ ದಾವಣಗೆರೆಗೆ KSRTCಯ ಸಾಮಾನ್ಯ ಬಸ್‌ನಲ್ಲಿ 319 ಇದ್ದು ವಿಶೇಷ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿರುತ್ತದೆ. ಆಗ ರೂ 371 ರಿಂದ ರೂ 380 ಆಗುತ್ತದೆ. ವಿಡಿಯೋದಲ್ಲಿ ಆರೋಪಿಸಿರುವಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದರ ಹೆಚ್ಚಳ ಮಾಡಲಾಗಿದೆ ಎಂಬುದು ಸುಳ್ಳು. ಈ ನಿಯಮ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ.
ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿರುವ ರಾಜ್ಯ ಸರ್ಕಾರ ಗಂಡಸರಿಂದ ಕಿತ್ತು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ನೀಡುತ್ತಿದೆ ಎಂಬ ಆರೋಪ ಸುಳ್ಳು.
ಆರೋಪ : ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಪ್ರಯಾಣ ದರ ರೂ 280 ಇತ್ತು ಈಗ 371 ಮಾಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ನಮಗೆ (ಪುರುಷರಿಗೆ) ರೂ 371 ನಿಗದಿ ಮಾಡಿದ್ದಾರೆ. ಗಂಡಸರಿಂದ ಕಿತ್ತುಕೊಂಡು ಹೆನ್ನುಮಕ್ಕಳಿಗೆ ಫ್ರೀ ಕೊಟ್ಟಿದೆ.
ಸತ್ಯಾಂಶ : KSRTCಯ ಸಾಮಾನ್ಯ ಬಸ್‌ಗಳಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರ ರೂ 319, ಆದರೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಮತ್ತು ತಡೆ ರಹಿತ ಬಸ್‌ಗಳಲ್ಲಿ ಪ್ರಯಾಣಿಸುವಾಗ ರೂ371 ಪಾವತಿಸಬೇಕಾಗುತ್ತದೆ. ಇದು ಹಲವು ವರ್ಷಗಳಿಂದಲೂ ಜಾರಿಯಲ್ಲಿದ್ದು ವಿಶೇಷ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಯಾವಾಗಲೂ ಹೆಚ್ಚಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹರಿಹರ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. |
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು BJP ನಾಯಕರು ಅವಮಾನಿಸಿದ್ದು ನಿಜವೇ?