ಫ್ಯಾಕ್ಟ್‌ಚೆಕ್ : ಮೈಸೂರು-ಬೆಂಗಳೂರು ಪ್ರಯಾಣ ದರದಲ್ಲಿ ಏರಿಕೆ ಇಲ್ಲ

ಮೈಸೂರು – ಬೆಂಗಳೂರು 160/- ರೂ ಇದ್ದ ಟಿಕೆಟ್‌ ದರ 185/- ರೂ ಮಾಡಿ ಇನ್ನೂ ಎರಡುವರೆ ತಿಂಗಳು ಕಳೆದಿಲ್ಲ ಆಗಲೇ 200/- ರೂಪಾಯಿಗೆ ಏರಿಸಿದ Indian National Congress – Karnataka ಸರ್ಕಾರ. ಒಬ್ಬರಿಂದ ವಸೂಲಿ ಮಾಡಿ ಮತ್ತೊಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಅಂದರೆ ಇದೇ ನೋಡಿ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ಮತ್ತು ಟ್ವಿಟರ್‌ನಲ್ಲೂ ಇದೇ ರೀತಿಯ ಪ್ರತಿಪಾದನೆಯನ್ನು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆಯೇ? ಮೈಸೂರು ಬೆಂಗಳೂರು ನಡುವೆ ಓಡುವ KSRTC ಬಸ್‌ಗಳ ದರದಲ್ಲಿ ಹೆಚ್ಚಳ ಮಾಡಲಾಗಿದೆಯೇ? ಒಂದು ವೇಳೆ ಹೆಚ್ಚಳ ಮಾಡಿದ್ದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಏನು ಕಾರಣ ನೀಡುತ್ತದೆ ಎಂದು ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು , KSRTC ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿಸಿದಾಗ, ಮೈಸೂರು- ಬೆಂಗಳೂರು ಬಸ್ ಪ್ರಯಾಣ ದರ ಏರಿಕೆ ಕೇವಲ ದಸರಾ ಹಿನ್ನಲೆಯಲ್ಲಿ ಮಾತ್ರ ಹೆಚ್ಚಳ ಮಾಡಲಾಗಿದ್ದು, ಅಕ್ಟೋಬರ್ 30ರ ನಂತರ ಮೊದಲಿನ ದರ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದೇವೆ ಎಂದರು.

ದಸರಾ ಪ್ರಯುಕ್ತ ಹೆಚ್ಚಳ :

ದಸರಾ ಹಬ್ಬದ ಹಿನ್ನೆಲೆ, ಬೆಂಗಳೂರು-ಮೈಸೂರು ನಡುವೆ ಕಾರ್ಯಾಚರಣೆ ನಡೆಸುವ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಲಾಗುತ್ತದೆ. ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ದರ ಹೆಚ್ಚಳ ಮಾಡಲಾಗಿದೆ. ನಿಗದಿ ಮಾಡಿದ ಅವಧಿ ಮುಗಿದ ಕೂಡಲೇ ಮತ್ತೆ ಮೊದಲಿನ ಬಸ್‌ ಟಿಕೆಟ್ ದರ ಇರಲಿದೆ”.

ಮೈಸೂರು ತಡೆರಹಿತ ಬಸ್‌ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ಏರಿಕೆ ಮಾಡಿದ್ದು, ₹185 ಇದ್ದ ದರವು ₹200 ಆಗಿದೆ. ಸಾಮಾನ್ಯ (ಕೆಂಪು ಬಸ್‌) ಪ್ರಯಾಣಕ್ಕೆ ₹15 ಹೆಚ್ಚಿಸಿದ್ದು, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ನಿಲುಗಡೆಯಿರುವ ಬಸ್‌ ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ನಿಗಮ, “ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ, ಮೈಸೂರು – ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಲಾಗುವುದು. ಪ್ರಯಾಣ ದರವು ಸೀಮಿತ ಅವಧಿ ಮುಗಿದ ಕೂಡಲೇ ಸ್ಥಗಿತಗೊಳ್ಳುತ್ತದೆ.  ಅದರಂತೆ, ಪ್ರಸ್ತುತ ದರವು ಕೂಡ ಅ.30ಕ್ಕೆ ಕೊನೆಗೊಳ್ಳಲಿದೆ. ಮೊದಲಿನ ದರದಲ್ಲಿಯೇ ಬಸ್‌ಗಳು ಕಾರ್ಯಾಚರಣೆಯಾಗುತ್ತವೆ” ಎಂದು ಹೇಳಿದೆ.‌

“ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಕರ ಒಂದು ಕಡೆ ಮಾತ್ರ ಜನ ಸಂದಣಿ ಇರುತ್ತದೆ. ಇದರಿಂದ, ದರ ಹೆಚ್ಚಳ ಮಾಡಲು ಕಾರಣವಾಗಿದೆ. ಆದರೆ, ಅದೇ ಬಸ್‌ಗಳು ಮೈಸೂರಿನಿಂದ ವಾಪಸ್‌ ಬರುವಾಗ ಪ್ರಯಾಣಿಕರಿಲ್ಲದೆ‌ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಆದ್ದರಿಂದ‌ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ‌ ಕ್ರಮವನ್ನು ಮೊದಲಿನಿಂದಲೂ ಅನುಸರಿಸಲಾಗುತ್ತಿದೆ. (ಇತ್ತೀಚೆಗೆ ಅಂದರೆ ಕಳೆದ‌‌ ನಾಲ್ಕು ಐದು ವರುಷಗಳಲ್ಲಿಯೂ ಸಹ ಸೀಮಿತ ಅವಧಿಗೆ ಅನ್ವಯವಾಗುವಂತೆ ದಸರಾ ಸಮಯದಲ್ಲಿ ದರ ಹೆಚ್ಚಳ ಮಾಡಲಾಗಿದೆ.)” ಎಂದು ಮಾಹಿತಿ ನೀಡಿದೆ.

“ಮೈಸೂರು – ಬೆಂಗಳೂರು ನಡುವೆ ಈ‌ ಹಿಂದೆ ದರ ಹೆಚ್ಚಳವಾಗಿರುವುದಕ್ಕೆ ಕಾರಣ, ಮೈಸೂರು ಎಕ್ಸ್‌ಪ್ರೆಸ್‌ ವೇ ಎರಡು ಟೋಲ್‌ಗಳ ದರದಲ್ಲಿ ಏಕಮಾರ್ಗದಲ್ಲಿಯೇ ₹1090  ಹೆಚ್ಚಳವಾಗಿದೆ. ಇದರಿಂದ, ಪ್ರಯಾಣ ದರದಲ್ಲಿ ಟೋಲ್ ಹಣವನ್ನು ಸೇರ್ಪಡೆಗೊಳಿಸಿ, ಹೆಚ್ಚಳ ಮಾಡಲಾಗಿತ್ತು‌. ಈ ದರವು ಎಕ್ಸ್‌ಪ್ರೆಸ್ ವೇ ಅಲ್ಲಿ‌ ಕಾರ್ಯಾಚರಣೆಯಾಗುವ ತಡೆರಹಿತ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್‌ಪ್ರೆಸ್‌ ವೇ ಹೊರತುಪಡಿಸಿ ನೇರ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳಲ್ಲಿ ಈಗಲೂ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿದೆ” ಎಂದು ಸ್ಪಷ್ಟಣೆ ನೀಡಿದೆ.

“ಇದು ಸಾಮಾನ್ಯ ಪ್ರಕ್ರಿಯೆ ಆಗಿದ್ದು, ರಾಜ್ಯ/ ಅಂತರರಾಜ್ಯದ ಯಾವುದೇ ಭಾಗದಲ್ಲಿ ಟೋಲ್ ದರ ಹೆಚ್ಚಳವಾದಲ್ಲಿ,‌ ಆ ಮಾರ್ಗದ ಬಸ್‌ಗಳಲ್ಲಿ ದರ‌ ಹೆಚ್ಚಳವಾಗುವುದು ನಿರಂತರವಾಗಿ‌ ಸಾರಿಗೆ ಸಂಸ್ಥೆಗಳಲ್ಲಿ‌ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ” ಎಂದು ಹೇಳಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೇಷನ್ ಅಕ್ಕಿಯಲ್ಲಿ ಕಂಡು ಬಂದಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ! ಮತ್ತೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights