ಫ್ಯಾಕ್ಟ್‌ಚೆಕ್: ಬಾಯಿಂದ ನೀರನ್ನು ಸ್ಪ್ರೇ ಮಾಡಿ ಬಟ್ಟೆ ಇಸ್ತ್ರಿ ಮಾಡುವ ವೈರಲ್ ವಿಡಿಯೋದ ಹಿನ್ನಲೆಯೇನು?
ವಯಸ್ಸಾಗಿರುವ ವ್ಯಕ್ತಿಯೊಬ್ಬರು ಬಟ್ಟೆಯನ್ನು ಇಸ್ತ್ರಿ ಮಾಡುವ ಮುನ್ನ ಸುಕ್ಕುಗಳನ್ನು ಹೋಗಲಾಡಿಸಲು ಕೈಯಿಂದ ನೀರನ್ನು ಚುಮುಕಿಸುವ ಬದಲು, ಬಾಯಿಂದ ನೀರನ್ನು ಬಟ್ಟೆಗೆ ಸ್ಪ್ರೇ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಲವು ವಾಟ್ಸಾಪ್ ಮತ್ತು ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ಒಂದು ಧರ್ಮದ ಜನರನ್ನು ಉಲ್ಲೇಖಿಸಿ ಹಂಚಿಕೊಂಡಿರುವುದನ್ನು ಕಾಣಬಹುದು.
ಹಾಗಿದ್ದರೆ ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನ ಘಟನೆ ಎಲ್ಲಿಯದು ಮತ್ತು ಆ ವ್ಯಕ್ತಿ ಯಾರು ಎಂಬ ಯಾವ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಆದರೆ ವಿಡಿಯೋನ್ನು ಪರೋಕ್ಷವಾಗಿ ಒಂದು ಕೋಮನ್ನು ಉದ್ದೇಶಿಸಿ ಹಂಚಿಕೊಂಡಿರುವಂತಿದೆ. ಹಾಗಿದ್ದರೆ ಈ ವಿಡಿಯೋ ಎಲ್ಲಿಂದ ಮತ್ತು ಯಾವ ಹಿನ್ನಲೆಯಲ್ಲಿ ಬಂದಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೋದಲ್ಲಿ ಇರುವಂತೆ, ವಯಸ್ಸಾಗಿರುವ ವ್ಯಕ್ತಿಯೊಬ್ಬರು ಅಂಗಡಿಯಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕುವಾಗ ಬಾಯಿಯಿಂದ ನೀರನ್ನು ಸಿಂಪಡಿಸುವುದನ್ನು ಕಾಣಬಹುದು. ಸಣ್ಣ ಪಾತ್ರೆಯಲ್ಲಿ ನೀರನ್ನು ತುಂಬಿರುವ ವ್ಯಕ್ತಿಯು, ಬಟ್ಟೆಗೆ ಇಸ್ತ್ರಿ ಹಾಕುವಾಗ ಪಾತ್ರೆಯಲ್ಲಿರುವ ನೀರನ್ನು ಬಾಯಿಗೆ ತುಂಬಿಸಿ ನಂತರ ಬಟ್ಟೆಗೆ ಸ್ಪ್ರೇ ರೀತಿ ಉಗುಳುವುದನ್ನು ವಿಡಿಯೋದಲ್ಲಿ ನೋಡಬಹುದು. ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ಹಾಗೂ ಆ ಊರಿನ ಹೆಸರು ಯಾವುದು ಎಂದು ಹೇಳಿಲ್ಲ.
ಏನ್‌ಸುದ್ದಿ.ಕಾಂ ವೀಡಿಯೋದ ವಾಸ್ತವವನ್ನು ತಿಳಿಯಲು ಗೂಗಲ್ ಸರ್ಚ್ ಮಾಡಿದಾಗ ವೈರಲ್ ವಿಡಿಯೋವನ್ನು 2022 ಜುಲೈ 6 ರಲ್ಲಿ ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಿರುವಂತೆ ಈ ಘಟನೆ ಅಥವಾ ವಿಡಿಯೋ 2022 ಜುಲೈನಲ್ಲಿ ವೈರಲ್ ಆಗಿತ್ತು.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪ್ಲಾಶ್ ಮಾಡುವ ವೈರಲ್ ವೀಡಿಯೊ ಪಾಕಿಸ್ತಾನದ್ದು ಎಂದು ಟೈಮ್ಸ್ ನೌ ವರದಿ ಮಾಡಿದೆ. ಟೈಮ್ಸ್‌ನೌ ವರದಿಯ ಪ್ರಕಾರ ಪಾಕಿಸ್ತಾನದ ಧೋಬಿಯೊಬ್ಬರು ಬಟ್ಟೆಗಳನ್ನು ಇಸ್ತ್ರಿ ಮಾಡಲು ಸಿದ್ಧಗೊಳಿಸುವಾಗ ನೀರನ್ನು ಸಿಂಪಡಿಸುವುದು ಅಥವಾ ಉಗುಳುವುದು ಕಂಡುಬಂದಿದ್ದು, ವ್ಯಕ್ತಿಯು ಒಂದು ಪಾತ್ರೆಯಲ್ಲಿನ ನೀರನ್ನು ‘ಉಗುಳಿ’ ಬಿಳಿ ಅಂಗಿಯ ಮೇಲೆ ಸಿಂಪಡಿಸುವುದನ್ನು ನೋಡಬಹುದು. ವಿಡಿಯೊವನ್ನು ಹಂಚಿಕೊಳ್ಳುತ್ತಾ, ಪೆಂಡು ಪ್ರೊಡಕ್ಷನ್ ಹೆಸರಿನ ಖಾತೆಯ ಈ ವಿಲಕ್ಷಣ ಘಟನೆಯನ್ನು “ನೈಸರ್ಗಿಕ ನೀರು ಸಿಂಪಡನೆ” ಎಂದು ವಿವರಿಸಿದೆ.
ಇಂತಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ Instagram ಖಾತೆಯ ಅಡ್ಮಿನ್‌ನನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ವಿನಂತಿಸಿದ್ದಾರೆ. ಬಳಕೆದಾರರ ಪ್ರಕಾರ, ಸಾಮಾಜಿಕ ಮಾಧ್ಯಮದ ಉದ್ದೇಶವು ಶೈಕ್ಷಣಿಕ ಅಥವಾ ಮನರಂಜನೆಯ ವಿಷಯವನ್ನು ಪ್ರಚಾರ ಮಾಡುವುದು. ಈ Instagram ಖಾತೆಯು ಅತ್ಯಂತ ಸಕ್ರಿಯವಾಗಿದೆ, ಬಹಳಷ್ಟು ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತದೆ. ಆದರೆ ಇಂತಹ ಹೊಲಸು ರೀಲ್‌ಗಳನ್ನು ಹಂಚಿಕೊಂಡಿದ್ದರ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ನೌ, ನ್ಯೂಸ್ 18 ಮತ್ತು NDTV ಈ ಘಟನೆಯನ್ನು ಪಾಕಿಸ್ತಾನದ್ದು ಎಂದು ವರದಿ ಮಾಡಿವೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಮತ್ತು ಈ ವಿಡಿಯೋದಲ್ಲಿರುವ ವ್ಯಕ್ತಿಯ ಹಿನ್ನಲೆಯನ್ನು ಸ್ವತಂತ್ರವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ವರದಿಗಳ ಪ್ರಕಾರ ಘಟನೆ ಜುಲೈ 2022ರಲ್ಲಿ ನಡೆದಿದ್ದು, ಸಾಮಾಜಕಿ ಮಾಧ್ಯಮಗಳಲ್ಲಿ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನವ ಜೋಡಿಗಳಾದ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ದೋನಿ ಮತ್ತು ಕೊಹ್ಲಿ ಕೋಟಿ ಮೌಲ್ಯದ ಉಡುಗೊರೆ ನೀಡಿದರೆ?