ಅಸ್ಸಾಂ ಸಿಎಂ ಲವ್ಲಿನಾಗೆ ಶುಭಕೋರಿದ್ದ ಹೋರ್ಡಿಂಗ್ಸ್‌ನಲ್ಲಿ ಲವ್ಲಿನಾ ಫೋಟೋನೇ ಇಲ್ಲ; ವರದಿ ಮಾಡಿದ ವೆಬ್‌ಸೈಟ್‌ ಮೇಲೆ FIR

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಲವ್ಲಿನಾ ಬೊರ್ಗೋಹೈನ್‌‌ ಅವರಿಗೆ ಅಸ್ಸಾಂ ಸರ್ಕಾರದ ಪರವಾಗಿ ಶುಭಾಶಯ ಕೋರಿ ಹೋರ್ಡಿಂಗ್ಸ್‌ಗಳನ್ನು ಹಾಕಲಾಗಿತ್ತು. ಆದರೆ, ವಿಪರ್ಯಾಸ ಎಂದರೆ, ಆ ಹೋರ್ಡಿಂಗ್ಸ್‌ನಲ್ಲಿ ಅಸ್ಸಾಂ ಸಿಎಂ ಮತ್ತು ಕ್ರೀಡಾ ಸಚಿವರ ಚಿತ್ರಗಳು ಮಾತ್ರ ಇದ್ದವೇ ಹೊರತು, ಪದಕ ಗೆದ್ದ ಲವ್ಲಿನಾ ಅವರ ಪೋಟೋನೇ ಇರಲಿಲ್ಲ ಎನ್ನಲಾಗಿತ್ತು. ಈ ಬಗ್ಗೆ, ಅಸ್ಸಾಂನ ಗುವಾಹಟಿ ಮೂಲದ ನ್ಯೂಸ್‌ ಪೋರ್ಟಲ್‌ ‘ದಿಕ್ರಾಸ್‌ಕರೆಂಟ್‌‌’ ಸುದ್ದಿ ಮಾಡಿತ್ತು. ಇದೀಗ ಆ ವೆಬ್‌ಸೈಟ್‌ ವಿರುದ್ದ ಪೊಲೀಸರು, ‘ಫೇಕ್ ಸುದ್ದಿ’ ಪ್ರಸಾರ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

ನ್ಯೂಸ್‌ ಪೋರ್ಟಲ್‌ ಮಾಡಿದ್ದ ಸುದ್ದಿಯನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ಡಿಐಪಿಆರ್) ವೆಬ್‌ಸೈಟ್ “ಇದು ನಕಲಿ ಸುದ್ದಿ” ಎಂದು ಹೇಳಿತ್ತು. ಇದರ ನಂತರ ಪೊಲೀಸರು ನ್ಯೂಸ್‌ ಪೋರ್ಟಲ್‌ ‘ದಿಕ್ರಾಸ್‌‌ಕರೆಂಟ್‌‌’ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Fact Check: ಜೈಲಿನಲ್ಲಿರುವ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಎಂದು ತಿರುಚಿತ ಚಿತ್ರ ವೈರಲ್‌!

“ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾದ ಪಿಜುಶ್ ಹಜಾರಿಕಾ ಮತ್ತು ಇಲಾಖೆಯನ್ನು ಸಾರ್ವಜನಿಕರ ದೃಷ್ಟಿಕೋನದಲ್ಲಿ ಕೆಟ್ಟವರಾಗಿ ಬಿಂಬಿಸುವ ಸಲುವಾಗಿ ನಕಲಿ ಸುದ್ದಿಯನ್ನು ಪ್ರಸಾರ ಮಾಡಲಾಗಿದೆ” ಎಂದು ಡಿಐಪಿಆರ್ ಹೇಳಿಕೊಂಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಿಕ್ರಾಸ್‌ಕರೆಂಟ್ ಹಂಚಿಕೊಂಡ ನಾಲ್ಕು ನಿಮಿಷಗಳ ಕ್ಲಿಪ್ ಅಲ್ಲಿ, “ಹಿಮಂತ ಬಿಸ್ವಾ ಶರ್ಮ ಅವರನ್ನು ಹೊಗಳಲು ಪಿಜುಶ್ ಹಜಾರಿಕಾ ಅವರನ್ನು ನೇಮಿಸಲಾಗಿದೆಯೆ?” ಎಂಬ ಶಿರ್ಷಿಕೆಯನ್ನು ನೀಡಲಾಗಿತ್ತು ಎಂದು ಕ್ವಿಂಟ್ ವರದಿ ಮಾಡಿದ್ದು, ಆದಾಗ್ಯೂ, ವೀಡಿಯೊ ಸಧ್ಯಕ್ಕೆ ಡಿಲೀಟ್‌ ಆಗಿದೆ.

“ಸಾಮಾನ್ಯವಾಗಿ ಡಿಐಪಿಆರ್ ಇಂತಹ ಹೋರ್ಡಿಂಗ್‌ಗಳನ್ನು ಹಾಕುತ್ತದೆ. ಒಂದು ವೇಳೆ ಅದನ್ನು ಅವರು ಮಾಡಿದ್ದರೆ ನಾವು ಪ್ರಶ್ನೆಗಳನ್ನು ಎತ್ತಿದ್ದೇವೆ. ಅವರು ಅದನ್ನು ಮಾಡಿಲ್ಲ ಎಂದಾದರೆ, ಅದಕ್ಕೆ ಅನುಮೋದನೆ ನೀಡಿದವರು ಯಾರು? ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿರುವ ಪಿಜುಶ್ ಹಜಾರಿಕಾ ಅವರನ್ನೂ ನಾವು ಕೇಳಿದ್ದೆವು. ಆದರೆ ಅವರು ಈಗ ಹೋರ್ಡಿಂಗ್‌ಗೆ ನಾವು ಅನುಮೋದನೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ವೆಬ್‌ಸೈಟ್‌ನ ಸಂಪಾದಕ ಗೌತಮ್ ಗೊಗೊಯ್‌ ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಎಸಗಿದ್ದು 11 ನಿಮಿಷ ಮಾತ್ರವೆಂದು ಶಿಕ್ಷೆ ಕಡಿಮೆ ಮಾಡಿದ ಕೋರ್ಟ್‌!

ಇದೀಗ ವೆಬ್‌ಸೈಟ್‌ ವಿರುದ್ಧ ಕೇಸ್ ದಾಖಲಾಗಿದೆ. ವೆಬ್‌ಸೈಟ್‌ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿ, ಡಿಐಪಿಆರ್ ನಿರ್ದೇಶಕರು ಆಗಸ್ಟ್ 6 ರ ಶುಕ್ರವಾರದಂದು ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಮುಗ್ಧ ವ್ಯಕ್ತಿಗಳ ಚಾರಿತ್ಯ್ರಹರಣ ಮಾಡಲು ಉದ್ದೇಶಪೂರ್ವಕವಾಗಿ ಸಂಪೂರ್ಣ ಸುಳ್ಳು ಮತ್ತು ಕಲ್ಪಿತ ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಎ/500/505 (2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 45 ಎ ಅಡಿಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಿ ಕ್ರಾಸ್‌ಕರೆಂಟ್‌ ವೆಬ್‌ಸೈಟ್‌ ಗುವಾಹಟಿಯಲ್ಲಿ ಹಾಕಲಾಗಿದ್ದ ಹಲವು ಹೋರ್ಡಿಂಗ್‌ಗಳಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಫೋಟೋಗಳನ್ನು ಬಳಸಿರುವುದನ್ನು ಈ ಹಿಂದೆ ಪ್ರಶ್ನಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಹೋರ್ಡಿಂಗ್ಸ್ ವಿವಾದಕ್ಕೆ ಕಾರಣವೇನು?

ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಬಾಕ್ಸಿಂಗ್ ವೆಲ್ಟರ್ ವೇಟ್ ವಿಭಾಗದಲ್ಲಿ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಇದು ಒಲಿಂಪಿಕ್ಸ್‌ನಲ್ಲಿ ಅವರ ಚೊಚ್ಚಲ ಪಂದ್ಯವಾಗಿತ್ತು.

ಆದರೆ ಲವ್ಲಿನಾ ಪದಕ ಗೆಲ್ಲುವ ಮುನ್ನ, ಅವರ ಮುಂಬರುವ ಆಟಗಳಿಗೆ ಶುಭ ಹಾರೈಸುವ ಕೆಲವು ಬ್ಯಾನರ್‌ಗಳನ್ನು ರಸ್ತೆ ಬದಿಗಳಲ್ಲಿ ಹಾಕಲಾಗಿತ್ತು. ಈ ಬ್ಯಾನರ್‌‌ಗಳ ವಿಶೇಷತೆಗಳೇನು ಎಂದರೆ, ಶುಭಹಾರೈಕೆ ಪಡೆಯುತ್ತಿರುವ ಲವ್ಲಿನಾ ಅವರ ಚಿತ್ರದ ಬದಲು ದೊಡ್ಡದಾಗಿ, ಮುಖ್ಯಮಂತ್ರಿ ಮತ್ತು ಸಚಿವರ ಚಿತ್ರಗಳು ಮಾತ್ರ ಕಾಣುತ್ತಿದ್ದವು. ಲವ್ಲಿನಾ ಅವರ ಪೋಟೋಗಳು ಈ ಬ್ಯಾನರ್‌ಗಳಲ್ಲಿ ಇರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಕಿರಣ್ ಮುಜುಂದಾರ್ ಶಾ ಸೇರಿದಂತೆ ಹಲವಾರು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಹೋರ್ಡಿಂಗ್‌‌ನಲ್ಲಿ, “ಟೋಕಿಯೊ ಒಲಿಂಪಿಕ್ 2020 ರ ಪಂದ್ಯಕ್ಕೆ ಅರ್ಹತೆ ಪಡೆದ ಲೊವ್ಲಿನಾ ಬೊರ್ಗೊಹೈನ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ನೀವು ಅಸ್ಸಾಂನ ಹೆಮ್ಮೆ” ಎಂದು ಬರೆಯಲಾಗಿದೆ. ಆದರೆ ಅದರಲ್ಲಿ ಲವ್ಲೀನಾ ಅವರ ಫೋಟೋಗೆ ಬದಲಾಗಿ ಸಿಎಂ ಅವರ ದೊಡ್ಡ ಚಿತ್ರಗಳನ್ನು ಬಳಸಲಾಗಿತ್ತು.

ಹೋರ್ಡಿಂಗ್ಸ್‌ನಿಂದ ಅಂತರ ಕಾಯ್ದುಕೊಂಡ ಸಿಎಂ, ಸಚಿವ ಮತ್ತು ಡಿಐಪಿಆರ್!

ತಾನು ಇಂತಹ ಬ್ರ್ಯಾಂಡಿಂಗ್ ಅನ್ನು ಅನುಮೋದಿಸಲಿಲ್ಲ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ನಡುವೆ, ಸಚಿವ ಪಿಜುಶ್ ಹಜಾರಿಕಾ ಅವರು ಕೂಡಾ ವಿವಾದಿತ ಹೋರ್ಡಿಂಗ್‌‌ಗಳಿಗೂ ತನಗೆ ಅಥವಾ ತನ್ನ ಇಲಾಖೆಯಾದ ಡಿಐಪಿಆರ್‌‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಹಾಗಾಗಿ ಕೊನೆಗೂ ಉಳಿಯುವ ಪ್ರಶ್ನೆ ಈ ಹೋರ್ಡಿಂಗ್ ಹಾಕಿದ್ದವರು ಯಾರು? ಅವರಿಗೆ ಬುದ್ದಿ ಹೇಳುವವರು ಯಾರು? ಇದನ್ನು ವರದಿ ಮಾಡಿದ್ದು ತಪ್ಪೆ? ವರದಿ ಮಾಡಿದ್ದಕ್ಕೆ ಪ್ರಕರಣ ದಾಖಲಿಸುವುದು ಸರಿಯೇ? ಎನ್ನುವುದಾಗಿದೆ.

Read Also: ಸಂಸದರಿಗೆ ನಿಂದನೆ; ಇಬ್ಬರು ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಿದ ಕಾಂಗ್ರೆಸ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights