ಫ್ಯಾಕ್ಟ್‌ಚೆಕ್ : ರೇಷನ್ ಅಕ್ಕಿಯಲ್ಲಿ ಕಂಡು ಬಂದಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ! ಮತ್ತೇನು

ಈಗ ಎಲ್ಲದರಲ್ಲೂ ಕಲಬೆರಕೆಯದ್ದೇ ಕಾರುಬಾರು, ಅಸಲಿ ಯಾವುದು? ನಕಲಿ ಯಾವುದು? ಎಂಬ ವ್ಯತ್ಯಾಸ ತಿಳಿಯದಷ್ಟು ಸಾಮ್ಯತೆಯನ್ನು ಹೊಂದಿರುತ್ತವೆ. ಇಂತಹ ಕಲಬೆರಕೆ ತಿನ್ನುವ ಆಹಾರದಲ್ಲಿ ಬಂದರೆ ಆರೋಗ್ಯದ ಗತಿ ಏನು? ಹೌದು ಇಂತಹಂದೊಂದು ಪ್ರಶ್ನೆ ಎದುರಾಗಲು ಕಾರಣವಿದೆ. ಅದೇನೆಂದರೆ?  ಸರ್ಕಾರ ನೀಡುತ್ತಿರುವ ಪಡಿತರ (ರೇಷನ್) ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಅಕ್ಕಿಯಲ್ಲಿ ಬೆರೆತಿರುವಂತಹ ಪ್ಲಾಸ್ಟಿಕ್ ಅಕ್ಕಿಯನ್ನು ಬೇರೆ ಮಾಡಿದ್ದು ಸರ್ಕಾರ  ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ ಎಂದು ಆತಂಕ ವ್ಯಕ್ತಪಡಿಸುವುದನ್ನು ಕಾಣಬಹುದು. ಹಾಗಿದ್ದರೆ, ಜನರ ಆತಂಕಕ್ಕೆ ಕಾರಣವಾಗಿರುವ ಈ ಪ್ಲಾಸ್ಟಿಕ್ ಅಕ್ಕಿ ಎಂದು ಹೇಳಲಾಗುತ್ತಿರುವ ವಸ್ತು ಏನೆಂದು ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಂಡು ಬರುವ ದೃಶ್ಯಗಳಲ್ಲಿ ಅಕ್ಕಿಯಲ್ಲಿ ಬರೆತಿರುವ ಆಕಾರದಲ್ಲಿ ಅಕ್ಕಿಗಿಂತ ಸ್ವಲ್ಪ ದಪ್ಪವಾಗಿ ಕಾಣುತ್ತಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ. ಅದು ಸಾರವರ್ಧಿತ ಅಕ್ಕಿಯ ಕಾಳುಗಳು ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ತಿಂಗಳಿನಿಂದ ನೀಡಲಾಗುತ್ತಿರುವ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯ ಕಾಳುಗಳು ಇರುವ ಮಾಹಿತಿ ಹೆಚ್ಚಿನ ಜನರಿಗಿಲ್ಲ. ಹಾಗಾಗಿ ಜನರಲ್ಲಿ ಗೊಂದಲವನ್ನು ಉಂಟು ಮಾಡಿದೆ.

ಸಾರವರ್ಧಿತ ಅಕ್ಕಿ ಎಂದರೇನು?

ಕೇಂದ್ರ ಸರಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ ಅಕ್ಕಿಗೆ 10 ಗ್ರಾಂ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣದ ಅಂಶ, ಫೋಲಿಕ್‌ ಆಮ್ಲ, ಹಾಗೂ ಬಿ ವಿಟಮಿನ್‌ ಅಂಶಗಳಿವೆ. ಪ್ರತಿ ತಿಂಗಳು ಬಿಪಿಎಲ್‌ ಕಾರ್ಡ್‌ ಹೊಂದಿರುವ ಪ್ರತಿ ವ್ಯಕ್ತಿಗೆ ನೀಡುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಸಾರವರ್ಧಿತ ಮಿಶ್ರಿತ ಅಕ್ಕಿ ಹಾಗೂ 5 ಕೆ.ಜಿ ಸಾದಾ ಅಕ್ಕಿಯನ್ನು ನೀಡಲು ಸರಕಾರದ ಮಾರ್ಗಸೂಚಿ ಇದೆ. ಇದರ ಅನ್ವಯ ಪಡಿತರ ವಿತರಕರು ಫಲಾನುಭವಿಗಳಿಗೆ ಅಕ್ಕಿ ವಿತರಣೆ ಕೈಗೊಳ್ಳಬೇಕು.

ಸಾರವರ್ಧಿತ ಅಕ್ಕಿ ಕಾಳುಗಳು ಸಾದಾ ಅಕ್ಕಿಗಿಂತ ಕೊಂಚ ದೊಡ್ಡದಾಗಿದ್ದು, ವಿಭಿನ್ನವಾದ ಬಣ್ಣ ಹೊಂದಿವೆ. ನೀರಿನಲ್ಲಿ ಹಾಕಿದಾಗ ತೇಲುವ ಕಾರಣಕ್ಕೆ ಬಳಕೆದಾರರು ಇದನ್ನು ಬಿಸಾಡಿರುವ ಪ್ರಸಂಗಗಳೂ ಕಂಡುಬಂದಿವೆ. ಜಾಲತಾಣಗಳಲ್ಲಿ ಪ್ಲಾಸ್ಟಿಕ್‌ ಅಕ್ಕಿ ಕುರಿತು ಹರಿದಾಡುತ್ತಿರುವ ಸಂದೇಶಗಳಿಂದ ಆತಂಕಕ್ಕೆ ಕಾರಣವಾಗಿರುವ ಸಮಯದಲ್ಲೇ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು ತಿಳಿದು ಗಾಬರಿಗೊಂಡವರೂ ಇದ್ದಾರೆ. ಪಡಿತರ ಕೇಂದ್ರಗಳಲ್ಲಿ ಅಕ್ಕಿಯ ಕುರಿತು ಸೂಕ್ತ ಪ್ರಚಾರ, ಮಾಹಿತಿ ನೀಡದಿರುವುದು ಒಟ್ಟಾರೆ ಗೊಂದಲಕ್ಕೆ ಕಾರಣವಾಗಿದೆ.

ಕೇಂದ್ರ ಸರಕಾರದ ಆದೇಶದಂತೆ ಪಡಿತರ ವ್ಯವಸ್ಥೆಯಡಿ ಸಾರವರ್ಧಿತ ಅಕ್ಕಿ ಮಿಶ್ರವಾಗಿರುವ ಅಕ್ಕಿ ವಿತರಣೆ ಕಳೆದ 4 ತಿಂಗಳಿನಿಂದಲೂ ನಡೆಯುತ್ತಿದೆ. ವಿತರಣೆ ಮಾಡುವ ಕುರಿತು ವಿತರಕರಿಗೆ ಸೂಕ್ತ ಮಾಹಿತಿ ನೀಡಲಾಗಿದೆ. ಸಾರವರ್ಧಿತ ಅಕ್ಕಿಯನ್ನು ಬಳಸದೇ ಬಿಸಾಡುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಉತ್ತಮ ಅಕ್ಕಿಯಾಗಿದ್ದು ಯಾವುದೇ ಆತಂಕ ಬೇಡ ಎಂದು ಆಹಾರ ನಿರೀಕ್ಷಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ಲಾಸ್ಟಿಕ್ ಅಕ್ಕಿ ಎಂಬುದು ಸುಳ್ಳು :

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿಯನ್ನು ಬಳಸಲಾಗುತ್ತಿದೆ ಎಂಬುದು ಸುಳ್ಳು ಮತ್ತು ವದಂತಿ ಆಗಿದ್ದು, ವಾಸ್ತವದಲ್ಲಿ ಭತ್ತ ಬೆಳೆದು ಅಕ್ಕಿಯಾಗಿ ಪರಿವರ್ತಿಸುವಾಗ ತಗುಲುವ ವೆಚ್ಚಕಿಂತ ದುಪ್ಪಟ್ಟು ಹಣವನ್ನು ಪ್ಲಾಸ್ಟಿಕ್ ಅಕ್ಕಿ ಉತ್ಪಾಧಿಸಲು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಅಕ್ಕಿಯನ್ನು ಉತ್ಪಾದಿಸುವವನಿಗೆ ತಲೆ ಕೆಟ್ಟಿರಬೇಕು ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಯಾವುದನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಹೇಳಲಾಗುತ್ತದೆಯೋ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ. ಅದು ಸಾರವರ್ಧಿತ ಅಕ್ಕಿ. ಅಡುಗೆಗಾಗಿ ಅಕ್ಕಿಯನ್ನು ನೀರಿನಲ್ಲಿ ನೆನೆಸಿದಾಗ, ಅಥವಾ ಜಾಲಿಸುವಾಗ ತೇಲುವುದರಿಂದ ಜನರಲ್ಲೂ ಗೊಂದಲ ಉಂಟಾಗಿದೆ. ಆದರೆ ಯಾರೂ ಕೂಡ ಭಯಪಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 1966ರಲ್ಲಿ ಮೃತಪಟ್ಟಿದ್ದು 5 ಸಾವಿರ ಸಾಧುಗಳಲ್ಲ! ಮತ್ತೆಷ್ಟು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights