ಫ್ಯಾಕ್ಟ್‌ಚೆಕ್ : 1966ರಲ್ಲಿ ಮೃತಪಟ್ಟಿದ್ದು 5 ಸಾವಿರ ಸಾಧುಗಳಲ್ಲ! ಮತ್ತೆಷ್ಟು?
7 ನವೆಂಬರ್ 1966 ರಂದು ಗೋ ಹತ್ಯೆ ನಿಷೇಧದ ಕಾನೂನಿಗಾಗಿ ಸಂಸತ್ ಭವನಕ್ಕೆ ನುಗುತ್ತಿದ್ದ 5000 ಹಿಂದೂ ಸಾಧು ಸಂತರನ್ನು, ಇಂದಿರಾ ಗಾಂಧಿ ಮುಸ್ಲಿಮರನ್ನು ಮೆಚ್ಚಿಸಲಿಕ್ಕಾಗಿ ಗುಂಡಿಕ್ಕಿ ಹತ್ಯೆಗೈದಿದ್ದು ನಿಮಗೆ ಗೊತ್ತೆ? ನಮಗೆ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಕತೆಯನ್ನು ಕಲಿಸಲಾಗುತ್ತದೆಯೇ ಹೊರತು ಇಂತಹ ಘಟನೆಯನ್ನಲ್ಲ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇಂತಹದ್ದೆ ಮತ್ತೊಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, ‘1966, ಗೋಪಾಷ್ಟಮಿ (ಗೋವುಗಳನ್ನು ಪೂಜಿಸುವ ಹಬ್ಬ) ತಿಥಿಯಂದು, 3–7 ಲಕ್ಷ ಸಾಧುಗಳು ಗೋಹತ್ಯೆ ನಿಲ್ಲಿಸುವ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ ಹಸುಗಳೊಂದಿಗೆ ಪ್ರತಿಭಟಿಸುತ್ತಾರೆ. ಪ್ರಧಾನಿ ಇಂದಿರಾಗಾಂಧಿ ಗೋಲೀಬಾರ್‌ಗೆ ಆದೇಶಿಸುತ್ತಾಳೆ. ಸುಮಾರು 5,000 ಸಾಧು ಸಂತರನ್ನು ಮತ್ತು ಹಸುಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ’ .

ಇದನ್ನು ಕಂಡ ಸಂತ ಕರಪತ್ರಿ ಸ್ವಾಮೀಜಿ ಹಸುಗಳ ಮೇಲೆ ಕಗ್ಗೊಲೆ ಮಾಡಿದ ನಿನ್ನ ನಾಶ ಗೋಪಾಷ್ಟಮಿಯಂದೇ ಕ್ರೂರವಾಗಿ ಆಗಲಿ ಎಂದು ಶಾಪ ಹಾಕುತ್ತಾರೆ. ಇಂದಿರಾ ಗಾಂಧಿ ಸಿಕ್ಕರಿಂದ ಕೊಲೆಯಾಗಿದ್ದು 31 ಅಕ್ಟೋಬರ್ 1984 ಅಂದು ಗೋಪಾಷ್ಟಮಿ ತಿಥಿ! ಇದು ಇತಿಹಾಸದಲ್ಲಿ ದಾಖಲಾಗಿದೆ. ಎಂಬ ಮತ್ತೊಂದು ಪೋಸ್ಟ್‌ಅನ್ನು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್ ಜನರನ್ನು ದಾರಿ ತಪ್ಪಿಸುವಂತ ಸುಳ್ಳು ಮಾಹಿತಿ ಎಂದು ಇಂಡಿಯಾ ಟುಡೇ ಮಾಡಿದ ವರದಿ ಲಭ್ಯವಾಗಿದೆ. ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ವರದಿಯ ಪ್ರಕಾರ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಹಲವು ಮಾಹಿತಿಗಳು ತಪ್ಪಾಗಿವೆ ಎಂದು ಉಲ್ಲೇಖಿಸಿದೆ.

1966ರ ನವೆಂಬರ್ 7ರಂದು ಗೋಹತ್ಯೆ ನಿಲ್ಲಿಸುವ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಪ್ರತಿಭಟನೆ ನಡೆದಿತ್ತು. ಸರ್ವದಳೀಯ ಗೋರಕ್ಷಾ ಮಹಾಭಿಯಾನ ಸಮಿತಿಯು ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಜನಸಂಘದ ಬೆಂಬಲವೂ ದೊರೆತಿತ್ತು.
ಈ ಸತ್ಯಾಗ್ರಹದಲ್ಲಿ ಸುಮಾರು ಒಂದು ಲಕ್ಷ ಸಾಧುಗಳು ಸೇರಿದ್ದರು. ಅಂದು ಕೆಲವು ಧಾರ್ಮಿಕ ಮುಖಂಡರು ಹಾಗೂ ಸಂಸದ ಸ್ವಾಮಿ ರಾಮೇಶ್ವರಾನಂದ ಅವರ ಭಾಷಣದಿಂದ ಉತ್ಸಾಹಿತರಾದ ಸತ್ಯಾಗ್ರಹಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಇಂಡಿಯನ್ ಎಕ್ಸ್‌ಪ್ರೆಸ್ ಸಹ ಏಳು ಜನರ ಸಾವು ಮತ್ತು ಗಾಯಗೊಂಡವರು 200 ಎಂದು ವರದಿ ಮಾಡಿದೆ. ನೀವು 8 ನವೆಂಬರ್ 1966 ರಂದು 7 ನವೆಂಬರ್ ಘಟನೆಯನ್ನು ವರದಿ ಮಾಡುವ ದಿ ಎಕ್ಸ್‌ಪ್ರೆಸ್‌ನ ಮೊದಲ ಪುಟದ ಸ್ಕ್ರೀನ್‌ಶಾಟ್ ಅನ್ನು ನೋಡಬಹುದು.

ಆ ವೇಳೆ ಪೊಲೀಸರು ಹಾಗೂ ಗುಂಪಿನ ನಡುವೆ ಸಂಘರ್ಷ ಏರ್ಪಟಿತ್ತು. ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಿನ ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಇದೇ ಸಂಖ್ಯೆಯನ್ನು ಸರ್ಕಾರವು ಸಂಸತ್ತಿಗೂ ನೀಡಿದೆ.
ಘಟನೆಯ ನಂತರ ಅದೇ ದಿನ ದೆಹಲಿಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಸೇನೆಗೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, 5000 ಸಾಧುಗಳು ಕೊಲ್ಲಲ್ಪಟ್ಟರು ಎಂಬ ಹೇಳಿಕೆಗಳು ಅತ್ಯಂತ ಉತ್ಪ್ರೇಕ್ಷಿತವೆಂದು ತೋರುತ್ತದೆ ಏಕೆಂದರೆ ಅವುಗಳನ್ನು ಬೆಂಬಲಿಸಲು ಯಾವುದೇ ವರದಿಗಳು ಅಥವಾ ಪುರಾವೆಗಳಿಲ್ಲ.
ಯಾವುದೇ ರೀತಿಯ ಜೀವಹಾನಿಯೂ ಖಂಡನೀಯವೆ. ಆದರೆ ಪೋಸ್ಟ್‌ನಲ್ಲಿ ಉತ್ಪ್ರೇಕ್ಷಿತವಾಗಿರುವ ಸಾವಿನ ಸಂಖ್ಯೆ ಉತ್ಪ್ರೇಕ್ಷಿತ ಸಂಖ್ಯೆಯಾಗಿದ್ದು ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ನಕಾರಾತ್ಮಕ ಭಾವನೆಗಳನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ.
ಅಲ್ಲದೆ ಸಂಸತ್ತಿಗೆ ನುಗ್ಗಲು ಯತ್ನಿಸಿದ ಈ ಘಟನೆಯನ್ನು, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸುವುದೇ ಅಸಂಬದ್ದ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಅಮಾಯಕ ಜನರನ್ನು ಜನರಲ್ ಡಯರ್ ಬೈಸಾಖಿಯು ನಿರ್ದಯವಾಗಿ ಕೊಂದಿದ್ದನ್ನು ಇತಿಹಾಸದಲ್ಲಿ ಎಂದು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಈ ಹೋಲಿಕೆ ತಪ್ಪಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 7 ನವೆಂಬರ್ 1966 ರಂದು ಭಾರತದ ಸಂಸತ್ತಿಗೆ ನುಗ್ಗಲು ಯತ್ನಿಸುವಾಗ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದು 7 ಜನ. ಆದರೆ ಇದನ್ನು ಉತ್ಪ್ರೇಕ್ಷಿಸಿ 5000 ಯತಿಗಳನ್ನು ಹತ್ಯೆಗಯಲಾಗಿತು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಸಂಸತ್ತಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅನಿವಾರ್ಯವಾಗಿ ಯತಿಗಳ ಮೇಲೆ ಗುಂಡಿನ ದಾಳಿ ನಡೆಸಬೇಕಾಯಿತು ಎಂದು ಆಗಿನ ಸರ್ಕಾರ ಸಂಸತ್ತಿನಲ್ಲಿ ಸಂತಾಪ ವ್ಯಕ್ತಪಡಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇಬ್ಬರು ಸೈನಿಕರನ್ನು ಜೀವಂತವಾಗಿ ಸುಟ್ಟುಹಾಕುವ ಭಯಾನಕ ವಿಡಿಯೋ ಎಲ್ಲಿಯದು ಗೊತ್ತೇ?

