ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿ ಪ್ರಯಾಣ ಮಾಡು ಎಂದು ಹಿಂದೂ ಮಹಿಳೆಗೆ ಮುಸ್ಲಿಂ ಮಹಿಳೆಯರು ಧಮ್ಕಿ ಹಾಕಿದ್ದು ನಿಜವೇ?

ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಇತರ ಸಮುದಾಯದ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್‌ನಲ್ಲಿ ಜಗಳ ನಡೆಯುವ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅಲ್ಲದೆ ಇದೇ ಪ್ರತಿಪಾದನೆಯೊಂದಿಗೆ ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ನ್ಯೂಸ್ ಫಸ್ಟ್‌ ಕನ್ನಡ ತನ್ನ ಸುದ್ದಿ ತಾಣದಲ್ಲಿ ಇಂತಹದ್ದೆ ಸುದ್ದಿಯೊಂದನ್ನು ಪ್ರಕಟಿಸಿದೆ. ಹಿಂದೂ ಮತ್ತು ಮುಸ್ಲಿಂ ಎಂಬ ಕೋಮು ನಿರೂಪಣೆಯೊಂದಿಗೆ ಪ್ರಸಾರ ಮಾಡಿದೆ.

ಗೋವರ್ಧನ್ ಸಿಂಗ್ ಎಂಬ ಬಲಪಂಥೀಯ ಪ್ರತಿಪಾದರೊಬ್ಬರು ನ್ಯೂಸ್‌ ಫಸ್ಟ್‌ ಕನ್ನಡ ಮಾಡಿದ ವರದಿಯನ್ನು ತಮ್ಮ ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಾಗಿದ್ದರೆ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ಕಂಡುಬಂದಂತೆ ಕೇರಳದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಇದು ಅಕ್ಟೋಬರ್ 22 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳ-ಮುಲ್ಲೇರಿಯಾ ರಸ್ತೆಯ ಭಾಸ್ಕರ ನಗರದಲ್ಲಿ ಬಸ್‌ ನಿಲ್ಲಿಸದ ವಿಚಾರಕ್ಕೆ ನಡೆದ ಘಟನೆ ಎಂದು ತಿಳಿದುಬಂದಿದೆ.

ಅಲ್ಲಿ ಹೊಸದಾಗಿ ಬಸ್ ನಿಲ್ದಾಣವನ್ನು ಆರ್‌ಟಿಓ ಅನುಮೋದಿಸಿದೆ. ಆದರೂ ಕೆಲ ಖಾಸಗಿ ಬಸ್‌ಗಳು ನಿಲ್ಲಿಸದೇ ಇದ್ದುದ್ದರಿಂದ ಖನ್ಸ ಕಾಲೇಜು ವಿದ್ಯಾರ್ಥಿಗಳು ಎರಡು ಬಸ್‌ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಮಾತೃಭೂಮಿ, ರಿಪೋರ್ಟರ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

 

ಈ ಪ್ರತಿಭಟನೆಯ ಸಂದರ್ಭದಲ್ಲಿ ಬಸ್ ಒಳಗಿದ್ದ ಹಿಂದೂ ಮಹಿಳೆಯೊಬ್ಬರು ತನಗೆ ತಡವಾಗುತ್ತಿದೆ ಎಂದು ಬಸ್ ತಡೆದ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಹಾಗಾಗಿ ಅಲ್ಲಿದ್ದ ವಿದ್ಯಾರ್ಥಿನಿಯರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಬುರ್ಖಾದ ವಿಷಯ ಪ್ರಸ್ತಾಪವಾಗಿಲ್ಲ.

ಮೂಲ ವಿಡಿಯೋವನ್ನು ಪರಿಶೀಲಿಸಿದಾಗ ಬಸ್ ಒಳಗೆ ಹಲವರು ಬುರ್ಖಾ ಧರಿಸದೇ ಪ್ರಯಾಣಿಸುತ್ತಿರುವುದನ್ನು ನಾವು ನೋಡಬಹುದು. ಹಾಗಾಗಿ ಈ ಜಗಳಕ್ಕೆ ಕಾರಣ ಬುರ್ಖಾ ವಿಷಯವೇ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಫ್ಯಾಕ್ಟ್‌ಚೆಕ್ ಮಾಧ್ಯಮ ನ್ಯೂಸ್ ಮೀಟರ್ ಈ ಕುರಿತು ಕುಂಬಾಲ ಪೊಲೀಸ್ ಠಾಣೆಯ ಎಸ್‌ಎಚ್‌ಓ ರಾಜೀವನ್‌ರವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಅವರು “ಇಲ್ಲಿ ಬಸ್ ನಿಲ್ಲಿಸದ ವಿಚಾರಕ್ಕೆ ಪ್ರತಿಭಟನೆ ನಡೆದಿದೆ. ಬಸ್‌ನೊಳಗಿದ್ದ ಮಹಿಳೆ ಅದರಿಂದ ಕಿರಿಕಿರಿ ಮಾಡಿಕೊಂಡಿದ್ದರಿಂದ ಉಳಿದ ವಿದ್ಯಾರ್ಥಿನಿಯರು ಅದು ಸರಿಯಲ್ಲ ಎಂದು ವಾದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಯಾವುದೇ ದೂರು ಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸದ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಸ್ ಒಳಗಿದ್ದ ಪ್ರಯಾಣಿಕರು ಕೆಲಸಕ್ಕೆ ತಡವಾಗುತ್ತಿದೆ ದಾರಿ ಬಿಡಿ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಜೋರು ಧ್ವನಿಯಲ್ಲಿ ಕೇಳಿದಾಗ, ನಡೆದ ಮಾತಿನ ಚಕಮಕಿ ದೃಶ್ಯಗಳನ್ನು ಬುರ್ಖಾ ಧರಿಸದ ಮಹಿಳೆಯರನ್ನು ಬಸ್‌ನೊಳಗೆ  ಹತ್ತಲು ನಿರಾಕರಿಸಲಾಗುತ್ತಿದೆ ಎಂದು ಕೋಮು ಧ್ವೇಷದ ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೇಷನ್ ಅಕ್ಕಿಯಲ್ಲಿ ಕಂಡು ಬಂದಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ! ಮತ್ತೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights