FACT CHECK | ‘ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ’ ಎಂದರೆ ಸಿಎಂ ಸಿದ್ದರಾಮಯ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸೇವ್ ಮಾಡಿ ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ರವೀಶ್ ಕುಮಾರ್ ರವಿ ಎಂಬ ಫೇಸ್‌ಬುಕ್ ಬಳಕೆದಾರ “ಕರ್ನಾಟಕ ಸರ್ಕಾರ ಈ ದರಿದ್ರ ಮುಖ್ಯಮಂತ್ರಿಯಿಂದ ಬರಗಾಲ ಬಂದು ಜನರಿಗೆ ತೊಳೆಯುವುದಕ್ಕೆ ನೀರಿಲ್ಲದಂತೆ ಆಗಿದೆ ಇಂತಹ ಸಂದರ್ಭದಲ್ಲಿ ಹಿಂದೂ ವಿರೋಧಿಗಳು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿಕೆ ಹೇಳುವ ಮುಖಾಂತರ ಅಪ್ಪ ಮಗ ಇಬ್ಬರೂ ನಾವು ಮುಸ್ಲಿಮರ ಪರವಾಗಿ ಎಂದು ಸಾಬೀತುಪಡಿಸಿದ್ದಾರೆ.

ಹಿಂದುಗಳ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸಲಾಗದ ಶಿಖಂಡಿಗಳು ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ತಡೆಯಲಾಗದವರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ಬೇಲ್ ಮೇಲೆ ಬಿಡುವಂತಹ ಸರ್ಕಾರ ಈಗ ನೋಡಿದರೆ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿಕೆ ಕೊಡುತ್ತಾನೆ ಮನುಷ್ಯ ಇವೆಲ್ಲ ಅವಶ್ಯಕತೆ ಇದೆಯೇ ಮೊದಲು ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸರ್ಕಾರವನ್ನು ನಡೆಸುವುದು ಕಲಿ ಇಲ್ಲ ಸಲ್ಲದ ಮಾತುಗಳನ್ನಾಡಿ ಯಾಕೆ ಜನರಿಂದ ಚೀತು ಎಂದು ಉಗಿಸಿಕೊಳ್ಳುವೆ ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯನವರ ಧ್ವನಿಯಲ್ಲಿ ಈ ಮಾತು ಹೇಳಿರುವುದು ಸ್ಪಷ್ಟವಾಗಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಹೇಳಿಕೆಯನ್ನು ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದು ನಂಬಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಹಿಂದುತ್ವಕ್ಕಾಗಿ ನನ್ನ ಜನ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ರೀಲ್ಸ್‌ನಂತೆ ಮಾಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ” ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರೆ? ವಿಡಿಯೋ ಪ್ರಸಾರವಾಗುವುದನ್ನು ನೋಡಿದರೆ ಈ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಂಡಿರಬುದೇ ಎಂಬ ಅನುಮಾನಗಳು ಹುಟ್ಟುತ್ತವೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿಡಿಯೋವನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, 10 ಮಾರ್ಚ್ 2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ ಲಭ್ಯವಾಗಿದೆ.

ಸಿದ್ದರಾಮಯ್ಯನವರು ಹಂಚಿಕೊಂಡ ಪೋಸ್ಟ್‌ನಲ್ಲಿ ” ದೇವೇಗೌಡರು ನರೇಂದ್ರ ಮೋದಿಯವರನ್ನು ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ, ಜನ್ಮ ಜನ್ಮದ ಸಂಬಂಧವಿದೆ ಅಂತಲೂ ಎನ್ನುತ್ತಾರೆ. ಗೌಡರು ಹೀಗೇಕಾದರು? ಎಂದು ಆಶ್ಚರ್ಯವಾಗಿದೆ.

ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಕುಟುಂಬದ ರಾಜಕೀಯ ಉಳಿವಿಗಾಗಿ ಹೊಗಳುತ್ತಿದ್ದಾರೆ. ಇದೆಂತಹ ದ್ವಂದ್ವ? ದೇಶದ ಪ್ರಧಾನಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಇದು ದೇವೇಗೌಡ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ

24 ಮಾರ್ಚ್ 2024 ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದು ಲಭ್ಯವಾಗಿದ್ದು. ” ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು ಈಗ.. ಸಿಎಂ ವ್ಯಂಗ್ಯ ” ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ.

ವರದಿಯ ಪ್ರಕಾರ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ “ಈ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ತಮ್ಮ ಅಳಿಯ ಮಂಜುನಾಥ್​ರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ ಎಂದು ವ್ಯಂಗ್ಯವಾಡಿದರು.

 

ಇದರ ಜೊತೆಗೆ ದೃಶ್ಯ ಮಾಧ್ಯಮಗಳ ವರದಿಗಾಗಿ ಪರಿಶೀಲನೆ ನಡೆಸಿದಾಗ ಪವರ್‌ ಟಿವಿ ಯುಟ್ಯುಬ್‌ ಚಾನಲ್‌ನಲ್ಲಿ ಸಿಎಂ ಹೇಳಿಕೆಯನ್ನು ಥಂಬ್‌ನೆಲ್‌ ಸಮೇತವಾಗಿ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪೂರ್ತಿ ಹೇಳಿಕೆಯನ್ನು ಕೂಡ ನೋಡಬಹುದಾಗಿದೆ.

ಈ ವರದಿಯ ಪ್ರಕಾರ ಸಿಎಂ ಸಿದ್ದರಾಮಯ್ಯ “ದೇವೇಗೌಡ ಅವರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತಾರೆಂದು ಹೇಳಿದ್ದರು” ಎಂದು ದೇವೇಗೌಡರ ಹೇಳಿಕೆಯನ್ನ ಉಲ್ಲೇಖಿಸಿರುವ ಕುರಿತು ವರದಿಯಾಗಿದೆ. ಇನ್ನು ಇದೇ ರೀತಿ ಟ್ವೀಟ್‌ವೊಂದನ್ನು ಕೂಡ ಸಿಎಂ ಸಿದ್ದರಾಮಯ್ಯನವರು ಮಾಡಿದ್ದು ಈ ಹಿಂದೆ ತಮ್ಮ ಭಾಷಣದಲ್ಲಿ ಏನನ್ನ ಹೇಳಿದ್ದರೋ ಅದನ್ನೇ ತಮ್ಮ ಟ್ವಿಟ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ.

ಸಿಎಂ 24-03-2024 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ “ಈ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿದ್ದಾರೆ. ತಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ.” ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಈ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಿಎಂ ಸಿದ್ದರಾಮಯ್ಯನವರು, ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಮೋದಿ ದೇಶದ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ದೇವೇಗೌಡರು ಈಗ ಕುಟುಂಬದ ರಾಜಕೀಯ ಉಳಿವಿಗಾಗಿ ಮೋದಿಯನ್ನು ಹೊಗಳುತ್ತಿದ್ದಾರೆ ಎಂದು ಹೇಳಿರುವ ವಿಡಿಯೋವನ್ನು ಎಡಿಟ್ ಮಾಡಿ ಮೋದಿ ದೇಶದ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂಬಂತೆ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 1 ಏಪ್ರಿಲ್ 2024ರಿಂದ BBMP ವ್ಯಾಪ್ತಿಯಲ್ಲಿ ದುಪ್ಪಟ್ಟಾಗಲಿದೆಯೇ ಆಸ್ತಿ ತೆರಿಗೆ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights