FACT CHECK | ಡಿ.ಕೆ.ಸುರೇಶ್ ಪೊಲೀಸರನ್ನು ಗದರಿಸುವ ಹಳೆಯ ವಿಡಿಯೋವನ್ನು ಲೋಕಸಭಾ ಚುನಾವಣೆಗೆ ಲಿಂಕ್ ಮಾಡಿ ಹಂಚಿಕೆ
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವೆಂದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಕನಕಪುರ ಬಂಡೆ ಎಂದೇ ಖ್ಯಾತರಾಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತಮ್ಮ ಮತ್ತು ಹಾಲಿ ಸಂಸದ ಡಿ. ಕೆ ಸುರೇಶ್ ಅವರು ಕಣಕ್ಕಿಳಿದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಪರವಾಗಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರು ಕಣದಲ್ಲಿದ್ದಾರೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಡಿ. ಕೆ ಸುರೇಶ್ ರವರ ವಿಡಿಯೋವೊಂದು ವ್ಯಾಪಕವಾಗಿ ಪ್ರಸಾರವಾಗುತ್ತದೆ. ಚುನಾಣಾ ಪ್ರಚಾರದ ವೇಳೆ ಡಿ.ಕೆ.ಸುರೇಶ್‌ರವರು ಪೊಲೀಸರಿಗೆ ಅವಾಜ್ ಹಾಕಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ವಿಡಿಯೋವನ್ನು ಬಿಜೆಪಿ ವಿರೋದ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಮತ್ತು ಬಿಜೆಪಿ ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ “ಡಿ.ಕೆ ಸುರೇಶ್ ಅವರು ತಮ್ಮ ಪ್ರಚಾರದ ವೇಳೆ “ಏಯ್ ಪೊಲೀಸ್, ಎತ್ತಂಗಡಿ ಆಗ್ತೀಯಾ” ಎಂದು ದಮ್ಕಿ ಹಾಕಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಬೆಂಗಳೂರು ಗ್ರಾಮಾಂತರ ಜನರೇ ನಿಮ್ಮ ಪರಿಸ್ಥಿತಿ ಏನು, ನೀವೇ ನಿರ್ಧರಿಸಿ..?” ಎಂದು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ವೈರಲ್ ಆಗುತ್ತಿರುವ ಡಿ.ಕೆ ಸುರೇಶ್ ಅವರ ವಿಡಿಯೋ 6 ಮೇ 2023ರ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಪ್ರಚಾರ ನಡೆಸುವ ವೇಳೆಯಲ್ಲಿ ಈ ಘಟನೆ ಜರುಗಿದೆ. ಬೊಮ್ಮನ ಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಡಿ. ಉಮಾಪತಿ ಶ್ರೀನಿವಾಸಗೌಡ ಅವರ ಪರವಾಗಿ ಪ್ರಚಾರ ಮಾಡುವ ವೇಳೆ ವಾಹನ ನಿಲ್ಲಿಸುವುದರ ಕುರಿತು ತಡೆ ಒಡ್ಡಿದ ಪೋಲೀಸರನ್ನು ಕರೆದು ಏಕವಚನದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಓನ್ ಇಂಡಿಯಾ ಕನ್ನಡ ಮಾಧ್ಯಮದಲ್ಲಿ 7 ಮೇ 2023ರಂದು ಯೂಟೂಬ್‌ನಲ್ಲಿ ಪ್ರಸಾರವಾಗಿದೆ. ಈ ಸಂದರ್ಬದಲ್ಲಿ ಡಿ.ಕೆ ಸುರೇಶ್ ಅವರ ವರ್ತನೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗಿತ್ತು. ಹಳೆಯ ವಿಡಿಯೋವನ್ನು ಈಗ ಹಂಚಿಕೊಳ್ಳುವ ಮೂಲಕ ಡಿ.ಕೆ ಸುರೇಶ್ ಅವರ ವಿರುದ್ದವಾಗಿ ಅಪಪ್ರಚಾರ ಮಾಡಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನ ಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಡಿ. ಉಮಾಪತಿ ಶ್ರೀನಿವಾಸಗೌಡ ಅವರ ಪರವಾಗಿ ಪ್ರಚಾರ ಮಾಡುವ ವೇಳೆ ಡಿ.ಕೆ ಸುರೇಶ್ ಪೋಲೀಸರಿಗೆ ಎಚ್ಚರಿಕೆ ನೀಡಿರುವ ಹಳೆಯ ವಿಡಿಯೋವನ್ನು, ಲೋಕಸಭಾ ಚುನಾವಣಾ ಸಂದರ್ಭದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ‘ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ’ ಎಂದರೆ ಸಿಎಂ ಸಿದ್ದರಾಮಯ್ಯ?